AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನ: ಬಿಬಿಎಂಪಿ ಆಸ್ತಿ ತೆರಿಗೆ, ಬೋರ್‌ವೆಲ್‌ ಮುಚ್ಚದಿದ್ದರೆ 1 ವರ್ಷ ಜೈಲು, ಬಿಲ್ ಪಾಸ್

ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ 8 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಮುಖ್ಯವಾಗಿ, ಕಾರ್ಯನಿರ್ವಹಿಸದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಜೈಲು ಮತ್ತು ದಂಡದ ಶಿಕ್ಷೆ ವಿಧಿಸುವ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಬಿಬಿಎಂಪಿ ತೆರಿಗೆಗೆ ಸಂಬಂಧಿಸಿದ ತಿದ್ದುಪಡಿ, ರೋಪ್ ವೇ ನಿರ್ಮಾಣ, ಬಸವನಬಾಗೇವಾಡಿ ಅಭಿವೃದ್ಧಿ, ಹಾಗೂ ರಾಯಚೂರು ವಿವಿಗೆ ನಾಮಕರಣ ಸೇರಿದಂತೆ ಇತರ ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಬೆಳಗಾವಿ ಅಧಿವೇಶನ: ಬಿಬಿಎಂಪಿ ಆಸ್ತಿ ತೆರಿಗೆ, ಬೋರ್‌ವೆಲ್‌ ಮುಚ್ಚದಿದ್ದರೆ 1 ವರ್ಷ ಜೈಲು, ಬಿಲ್ ಪಾಸ್
ವಿಧಾನಸಭೆ ಅಧಿವೇಶನ
ವಿವೇಕ ಬಿರಾದಾರ
|

Updated on:Dec 17, 2024 | 7:54 AM

Share

ಬೆಳಗಾವಿ, ಡಿಸೆಂಬರ್​​ 17: ಬೆಳಗಾವಿ ಸುರ್ವಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ (Belagavi Winter Session) ನಡೆಯುತ್ತಿದೆ. ಅಧಿವೇಶನ ಸೋಮವಾರ (ಡಿಸೆಂಬರ್​. 16) ರಾತ್ರಿ 1 ಗಂಟೆಯವರೆಗೂ ನಡೆದಿದ್ದು, ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಕೊಳವೆಬಾವಿ ಮುಚ್ಚದಿದ್ದರೆ ಜೈಲು ಮತ್ತು ದಂಡ ವಿಧಿಸುವ ತಿದ್ದುಪಡಿ ವಿಧೇಯಕ ಸೇರಿದ್ದಂತೆ ಅಧಿವೇಶನದಲ್ಲಿ ಎಂಟು ವಿಧೇಯಕಗಳನ್ನು (8 Bills) ಅಂಗೀಕರಿಸಲಾಯಿತು.

ಕೊಳವೆಬಾವಿ ಮುಚ್ಚದಿದ್ದರೆ ಜೈಲು

ವಿಫಲ ಕೊಳವೆಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ ಅವಘಡಕ್ಕೆ ಕಾರಣರಾಗುವವರನ್ನು ಶಿಕ್ಷಿಸಲು ಸಚಿವ ಎನ್.ಎಸ್.ಬೋಸರಾಜು ಅವರು ಮಂಡಿಸಿದ, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ, ನಿವರ್ಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024 ವಿಧೇಯಕವನ್ನು ಅಂಗೀಕರಿಸಲಾಯಿತು.

ತಿದ್ದುಪಡಿಯಲ್ಲಿ ಏನಿದೆ?

ಹೊಸ ತಿದ್ದುಪಡಿಯಂತೆ ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡ ಕೊಳವೆಬಾವಿ ಮುಚ್ಚದ ಜಮೀನು ಮಾಲೀಕರಿಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದನ್ನು ಕೊರೆದ ಸಂಸ್ಥೆಯ ಮಾಲೀಕರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸುವ ಅಂಶ ವಿಧೇಯಕದಲ್ಲಿ ಸೇರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒನ್ ಟೈಂ ಸೆಟಲ್‌ಮೆಂಟ್ (ಒಟಿಎಸ್) ಅಡಿ ದಂಡ ಮತ್ತು ಬಡ್ಡಿ ಮನ್ನಾ ಮಾಡಿಕೊಂಡು ತೆರಿಗೆ ಪಾವತಿಸಿದ ಆಸ್ತಿಗಳ ವಿವರ ಬದಲಾವಣೆ ಹಾಗೂ ತೆರಿಗೆ ವ್ಯಾಪ್ತಿಗೆ ತರುವಂಥ ಬಿಬಿಎಂಪಿ (2ನೇ ತಿದ್ದುಪಡಿ) ವಿಧೇಯಕ 2024ಕ್ಕೆ ಅನುಮೋದಿಸಲಾಯಿತು. ಕಾಯ್ದೆ ಬಗ್ಗೆ ವಿವರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿ ಒಟಿಎಸ್ ಅಡಿ ಬಾಕಿ ತೆರಿಗೆ ಪಾವತಿಸಿದವರ ಮಾಹಿತಿಯನ್ನು ತಿದ್ದುಪಡಿ ಮಾಡುವುದು ಸೇರಿ ಮತ್ತಿತರ ಅವಕಾಶ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.

ಇದನ್ನೂ ಓದಿ: ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ, ರಾತ್ರಿ 1 ಗಂಟೆವರೆಗೂ ನಡೆದ ಅಧಿವೇಶನ: ದಶಕದ ಬಳಿಕ ದಾಖಲೆ

ಹಣಕಾಸು ಸಂಸ್ಥೆ, ಅಧೀನ ಸಂಸ್ಥೆ ಅಥವಾ ವಸತಿ ಅಭಿವೃದ್ಧಿ ಸಹಕಾರ ಸಂಘಗಳಲ್ಲಿ ವಂಚಿಸಿರುವವರಿಂದ ವಸೂಲಿ ಮಾಡಿದ ಹಣವನ್ನು ನಿಗದಿತ ಅವಧಿಯೊಳಗೆ ಠೇವಣಿದಾರರಿಗೆ ನೀಡುವುದು, ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಅಂಶಗಳನ್ನು ಸೇರಿಸಿ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಪ್ರವಾಸೋದ್ಯಮ ರೋಪ್ ವೇ ವಿಧೇಯಕ

ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 12ರಿಂದ 15 ಪ್ರವಾಸಿ ತಾಣಗಳಲ್ಲಿ ರೋಪ್ ವೇ, ಕೇಬಲ್ ಕಾರ್ ನಿರ್ಮಾಣಕ್ಕೆ ಅನುಮತಿ ಹಾಗೂ ನಿರ್ವಹಣೆಯ ಮೇಲುಸ್ತುವಾರಿಗಾಗಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಗಾಗಿ ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರೋಪ್ ವೇ ವಿಧೇಯಕ 2024ನ್ನು ಅನುಮೋದಿಸಲಾಯಿತು.

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿ ಹೊಸ ಪ್ರಾಧಿಕಾರ ರಚನೆಗಾಗಿ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ. ವಿಪಕ್ಷದ ಆರ್. ಅಶೋಕ್ ಸಲಹೆಯಂತೆ, ಪ್ರಾಧಿಕಾರದಲ್ಲಿ ಸ್ಥಳೀಯ ಸಂಸದರು, ಮುದ್ದೆಬಿಹಾಳ ಶಾಸಕರನ್ನು ಸೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿತು.

ರಾಯಚೂರು ವಿವಿಗೆ ವಾಲ್ಮೀಕಿ ಹೆಸರು

ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Tue, 17 December 24