ಬೆಳಗಾವಿ ಅಧಿವೇಶನ: ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಮೊದಲ ದಿನದ ಕಲಾಪ, ಇಲ್ಲಿದೆ ವಿವರ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ ಅನೇಕ ಅಚ್ಚರಿಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ವಿಪಕ್ಷ ನಾಯಕರು ಮತ್ತು ಸಚಿವರ ನಡುವಿನ ಹಸ್ತಲಾಘವ, ಶಾಸಕರ ಗೊಂದಲ ಮತ್ತು ಅನ್ನಪೂರ್ಣ ತುಕಾರಾಂ ಅವರ ಪ್ರಮಾಣವಚನ ಸ್ವೀಕಾರದ ಸಮಯದಲ್ಲಿ ನಡೆದ ಘಟನೆಗಳು ಗಮನ ಸೆಳೆದವು. ವಿವರ ಇಲ್ಲಿದೆ.
ಬೆಳಗಾವಿ, ಡಿಸೆಂಬರ್ 9: ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭಗೊಂಡಿದೆ. ಒಂದೆಡೆ ಸದನದ ಒಳಗೆ ಮತ್ತು ಹೊರಗೆ ನಡೆದ ಪ್ರತಿಭಟನೆಗಳು, ವಾಕ್ಸಮರಗಳು ಗಮನ ಸೆಳೆದರೆ, ಮತ್ತೊಂದೆಡೆ ಹಲವು ಅಚ್ಚರಿಯ ಸನ್ನಿವೇಶಗಳಿಗೂ ಸುವರ್ಣ ಸೌಧ ಸಾಕ್ಷಿಯಾಯಿತು.
- ಅನುಭವಮಂಠಪ ತೈಲವವರ್ಣಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಈ ವೇಳೆ ಅಶೋಕ್ ಭುಜ ತಟ್ಟಿ ಡಿಕೆ ಶಿವಕುಮಾರ್ ಮಾತನಾಡಿಸಿದ್ದಾರೆ.
- ಅಧಿವೇಶನದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಸ್ವಲ್ಪ ಗಲಿಬಿಲಿಗೊಂಡರು. ಸದನಕ್ಕೆ ಬಂದ ಹೆಬ್ಬಾರ್ಗೆ ತಮ್ಮ ಆಸನ ಎಲ್ಲಿದೆ ಅಂತ ಗೊತ್ತಾಗದೆ ಸ್ವಲ್ಪ ಹೊತ್ತು ಹುಡುಕಾಡಿದ್ದಾರೆ. ಈ ವೇಳೆ ಶಾಸಕ ಎಸ್ಟಿ ಸೋಮಶೇಖರ್, ವಿಜಯೇಂದ್ರ ಪಕ್ಕದಲ್ಲೇ ಇದೆ, ಬಾ ಕೂಳಿತುಕೋ ಎಂದಿದ್ದಾರೆ. ಪಕ್ಷದೊಳಗೇ ಬಂಡಾಯವೆದ್ದಿರುವ ಇಬ್ಬರಿಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಧ್ಯದಲ್ಲೇ ಆಸನ ವ್ಯವಸ್ಥೆ ಮಾಡಲಾಗಿದೆ.
- ಸಂಡೂರು ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ಅನ್ನಪೂರ್ಣ ತುಕಾರಾಂ ಪ್ರಮಾಣವಚನ ಸ್ವೀಕರಿಸುವ ವೇಳೆ ಸ್ವಷ್ಟವಾಗಿ ಕಾಣಿಸದ ಹಿನ್ನೆಲೆ, ಸಂಸದ ತುಕಾರಾಂ ಮೀಡಿಯಾ ಗ್ಯಾಲರಿಯಿಂದ ಎದ್ದು ನಿಂತು ವೀಕ್ಷಿಸಿದರು. ಆಗ ತುಕಾರಾಂ ಎದ್ದು ನಿಂತು ನೋಡುತ್ತಿದ್ದಾನೆ ಎಂದು ಸಿಎಂಗೆ ಡಿಸಿಎಂ ಹೇಳಿದರು. ಸಿಎಂ ಚಪ್ಪಾಳೆ ತಟ್ಟಿ ಶುಭ ಕೋರಿದರು. ಸದನದೊಳಗೆ ತೆರಳುವುದಕ್ಕೂ ಮುನ್ನ ಪತ್ನಿಗೆ ಸಂಸದ ತುಕಾರಾಂ ಮಾರ್ಗದರ್ಶನ ಮಾಡಿದರೆ, ಅನ್ನಪೂರ್ಣ ಪತಿಯ ಕಾಲು ಮುಟ್ಟಿ ನಮಸ್ಕರಿಸಿದರು.
- ಪ್ರಮಾಣ ವಚನದ ಬಳಿಕ ಡಿಸಿಎಂ ಸೂಚನೆಯಂತೆ ವಿಪಕ್ಷ ನಾಯಕರಿಗೆ ಶಾಸಕ ಯೋಗೇಶ್ವರ್ ಹಸ್ತಲಾಘವ ಮಾಡಿದರು. ಬಿಜೆಪಿ ನಾಯಕರಿಂದ ಯೋಗೇಶ್ವರ್ ಶುಭಾಶಯ ಸ್ವೀಕರಿಸುತ್ತಿದ್ದ ವೇಳೆ ಬಿಜೆಪಿ ನಾಯಕರು ಖುಷಿ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಕಾಲೆಳೆದರು.
- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿವೈ ವಿಜಯೇಂದ್ರ ಸದನದಲ್ಲಿ ಮುಖಾಮುಖಿ ಆಗಲೇ ಇಲ್ಲ. ಮೊದಲ ಸಾಲಿನಲ್ಲಿ ಯತ್ನಾಳ್ ಕುಳಿತಿದ್ದರೆ, ವಿಜಯೇಂದ್ರ ಮೂರನೇ ಸಾಲಿನಲ್ಲಿದ್ದರು.
- ವಿಪಕ್ಷ ನಾಯಕ ಅಶೋಕ್ ಬಳಿ, ಯತ್ನಾಳ್ ಬಣದ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿದರೆ, ರೆಬಲ್ ಶಾಸಕ ಎಸ್ಟಿ ಸೋಮಶೇಖರ್ ಕೂಡಾ ಅವರ ಬಳಿ ತೆರಳಿ ಮಾತನಾಡಿದರು. ಅಶೋಕ್ ಮಾತನಾಡಿ ತೆರಳಿದ ಬಳಿಕ ಬಿವೈ ವಿಜಯೇಂದ್ರ ಜೊತೆ ಕೆಲವು ನಿಮಿಷಗಳ ಕಾಲ ಸೋಮಶೇಖರ್ ಮಾತನಾಡಿದರು.
- ಅಧೀವೇಶನದ ಮೊದಲ ದಿನ ಹಾಜರಿದ್ದ ಎಲ್ಲಾ ಶಾಸಕರಿಗೆ ಸಭಾಧ್ಯಕ್ಷ ಯುಟಿ ಖಾದರ್ ಐಸ್ ಕ್ರೀಂ ವ್ಯವಸ್ಥೆ ಮಾಡಿದ್ದರು. ಶಾಸಕರು ಐಸ್ ಕ್ರೀಂ ತಿಂದು ಸದನದಲ್ಲಿ ಭಾಗಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ