
ಬೆಂಗಳೂರು, ಜನವರಿ 07: ಉಳಿದ ಬೆಳೆಗಳಿಗೆ ಹೋಲಿಸಿದರೆ ಅಡಿಕೆ ಬೆಳೆ ಬೆಳೆಯೋದು (Areca Nut Farming) ಸುಲಭ. ಒಮ್ಮೆ ಗಿಡ ನೆಟ್ಟರೆ ಮುಗೀತು. ಉಳಿದ ಬೆಳಗಳಷ್ಟು ಪಾಲನೆ ಇವಕ್ಕೆ ಬೇಕಿಲ್ಲ. ಆದಾಯವೂ ಭರ್ಜರಿಯಾಗಿ ಬರುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದ್ರೆ ವಾಸ್ತವದಲ್ಲಿ ಅಡಿಕೆ ಬೆಳಗಾರರ ಗೋಳು ಒಂದೆರಡಲ್ಲ. ಸುಳಿ ರೋಗ, ಕೊಳೆ ರೋಗ ಹೀಗೆ ನಾನಾ ಸಂಕಷ್ಟಗಳನ್ನು ಇವರು ಎದುರಿಸುತ್ತಿದ್ದಾರೆ. ಇವುಗಳ ಪಟ್ಟಿಗೆ ಈಗ ಎಲೆಚುಕ್ಕಿ ರೋಗವೂ ಸೇರ್ಪಡೆಯಾಗಿರೋದು, ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಈ ನಡುವೆ ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯೂ ಹುಸಿಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಹೆಚ್ಚಿರುವ ಕೊಳೆ ಮತ್ತು ಎಲೆ ಚುಕ್ಕಿ ರೋಗಕ್ಕೆ ರೈತರು ಅಕ್ಷರಶಃ ನಲುಗಿದ್ದಾರೆ. ಕೊಳೆ ರೋಗದ ಕಾರಣ ಅಡಿಕೆ ಉದುರಿ ಹಾಳಾದರೆ, ಹಿಡಿಮುಂಡಿ ರೋಗದಿಂದ ಮೇಲ್ಭಾಗ ಸಂಪೂರ್ಣ ಒಣಗಿ ಅಡಿಕೆ ಗಿಡಗಳು ಸಾಯುತ್ತಿವೆ. ಇದು ಸಾಲದಕ್ಕೆ ಎಲೆಚುಕ್ಕಿ ರೋಗವೂ ಗಿಡಗಳನ್ನು ಬಾಧಿಸುತ್ತಿರುವ ಕಾರಣ ಬೆಳೆ ಹಾಗಿರಲಿ, ಅಡಿಕೆ ಗಿಡಗಳನ್ನ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಅಡಿಕೆ ಇಳುವರಿ ಶೇ. 50ಕ್ಕಿಂತ ಕಡಿಮೆಯಾಗಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಈ ರೋಗಗಳು ವ್ಯಾಪಿಸುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಕೃಷಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ ಎನ್ನುವುದು ರೈತರ ಆರೋಪ.
ಇದನ್ನೂ ಓದಿ: ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?
ದೇಶದಲ್ಲಿ ಉತ್ಪಾದನೆ ಆಗುವ 14 ಲಕ್ಷ ಟನ್ ಅಡಿಕೆಯ ಪೈಕಿ ಸುಮಾರು 10 ಲಕ್ಷ ಟನ್ ಕರ್ನಾಟಕವೇ ಉತ್ಪಾದಿಸುತ್ತದೆ. ಅಂದ್ರೆ ಶೇ. 80ರಷ್ಟು ಅಡಿಕೆಯನ್ನು ಬೆಳೆಯುವ ಮೂಲಕ ಸಿಂಹಪಾಲು ಕರ್ನಾಟಕ ರಾಜ್ಯ ಹೊಂದಿದೆ. ದೇಶಕ್ಕೆ ಅಗತ್ಯವಿರುವಷ್ಟು ಅಡಿಕೆ ನಮ್ಮಲ್ಲೇ ಉತ್ಪಾದನೆ ಆಗುವಾಗ ವಿದೇಶಗಳಿಂದ ಆಮದು ಯಾಕೆ ಎಂದು ರೈತರು ಪ್ರಶ್ನಿಸಿದ್ದಾರೆ. ಕ್ವಿಂಟಾಲ್ಗೆ 64 ರಿಂದ 65 ಸಾವಿರ ರೂಪಾಯಿ ವರೆಗೂ ಹೋಗಿದ್ದ ಅಡಿಕೆ ಬೆಲೆ ಈಗ ಕುಸಿದಿದೆ. ಭೂತಾನ್, ಮಯನ್ಮಾರ್, ಶ್ರೀಲಂಕಾಗಳಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿರೋದು, ಕರ್ನಾಟಕ ರಾಜ್ಯದಲ್ಲಿ ಗುಣಮಟ್ಟದ ಅಡಿಕೆ ಬೆಳೆಯುವ ಬೆಳೆಗಾರರಿಗೆ ಅನ್ಯಾಯಮಾಡಿದಂತಾಗಿದೆ. ಕರ್ನಾಟಕ ಸೇರಿ ದೇಶದಲ್ಲಿರುವ ಅಡಿಕೆ ಬೆಳೆಗಾರರಿಗೆ ಇದು ದೊಡ್ಡ ಹೊಡೆತ ಕೊಟ್ಟಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:28 pm, Wed, 7 January 26