ವಿಧಾನಸಭಾ ಕಲಾಪದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಸ್ತಾಪ; ಬಿಸಿಬಿಸಿ ಚರ್ಚೆ, ವಿರೋಧ ಪಕ್ಷಕ್ಕೆ ಶ್ಲಾಘನೆ

TV9 Digital Desk

| Edited By: guruganesh bhat

Updated on:Sep 14, 2021 | 3:14 PM

12,900 ಕೋಟಿಯಲ್ಲಿ ಯೋಜನೆ ಮುಗಿಸಬಹುದು, ಯೋಜನೆಗೆ26 ಸಾವಿರ ಕೋಟಿ ಹೆಚ್ಚುವರಿ ಯಾಕೆ? ನಿಮಗೆ ಇಚ್ಚಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಪರಮೇಶ್ವರ್ ಗರಂ ಆದರು.

ವಿಧಾನಸಭಾ ಕಲಾಪದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಸ್ತಾಪ; ಬಿಸಿಬಿಸಿ ಚರ್ಚೆ, ವಿರೋಧ ಪಕ್ಷಕ್ಕೆ ಶ್ಲಾಘನೆ
ಸಾಂದರ್ಭಿಕ ಚಿತ್ರ


ಬೆಂಗಳೂರು: ವಿಧಾನಸಭಾ ಅಧಿವೇಶನಲ್ಲಿ ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳ ಪ್ರಸ್ತಾಪಗೊಂಡವು. ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಬಗ್ಗೆ ಸಚಿವ ಮಾಧುಸ್ವಾಮಿ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಜೋರುಧ್ವನಿಯ ಮಾತುಕತೆಯೂ ನಡೆಯಿತು. ಜತೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎತ್ತಿನಹೊಳೆ ಕಾಮಗಾರಿ ಇದುವರೆಗೆ ನಡೆಯಲು ಈ ಹಿಂದೆ ಅಧಿಕಾರದಲ್ಲಿದ್ದ ನಿಮ್ಮ ಸರ್ಕಾರವೇ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಅವರನ್ನು ಶ್ಲಾಘಿಸಿದರು.

ಡಾ.ಜಿ.ಪರಮೇಶ್ವರ್‌ ಮೇಕೆದಾಟು ಯೋಜನೆಯ ಕುರಿತು ಪ್ರಸ್ತಾಪವೆತ್ತಿದಾಗ ಅವರಿಗೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮೊದಲು ಯೋಜನೆಗೆ ₹12,900 ಕೋಟಿ ಮೀಸಲಾಗಿತ್ತು. ಆದರೆ ಎರಡು ಕಡೆ ಭೂಮಿಯ ಮೌಲ್ಯದ ಬಗ್ಗೆ ಗೊಂದಲವಿದೆ. ಕೊರಟಗೆರೆ, ದೊಡ್ಡಬಳ್ಳಾಪುರದಲ್ಲಿ ಭೂಮಿಯ ಮೌಲ್ಯದಲ್ಲಿ ವ್ಯತ್ಯಾಸವಿದೆ. ಕೊರಟಗೆರೆ ರೈತರು ವ್ಯತ್ಯಾಸದ ಮೊತ್ತವನ್ನು ಪ್ರಶ್ನಿಸುತ್ತಿದ್ದಾರೆ. ಈಕುರಿತು ನಡೆದ ಸಭೆಯಲ್ಲಿ ಡಾ.ಜಿ.ಪರಮೇಶ್ವರ್ ಕೂಡ ಇದ್ದರು. ಈ ಯೋಜನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನೀರು ಲಿಫ್ಟ್, ಸ್ಟೋರೇಜ್ ಸೇರಿ ಎಲ್ಲ ಕಾಮಗಾರಿಗಳೂ ನಡೆಯುತ್ತಿವೆ. ಯೋಜನೆಗೆ 39 ಎಕರೆ ಜಮೀನು ಹೆಚ್ಚುವರಿ ಬೇಕಿದೆ. ಇದರ ಬಗ್ಗೆ ಡಿಸಿ, ಸ್ವಾಧೀನಾಧಿಕಾರಿಗೆ ತಿಳಿಸಿದ್ದು, ಈಕುರಿತು ಚರ್ಚಿಸುತ್ತೇವೆ. ಇವತ್ತು ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಮೊದಲ ಹಂತದ ಕಾಮಗಾರಿ ಮುಗಿದಿದೆ. ಟ್ರಯಲ್‌ರನ್ ಮಾಡಲು ಪ್ರಯತ್ನ ನಡೆಸಿದ್ದೇವೆ. ಇದನ್ನು ಮುಗಿಸುವ ಕೆಲಸ ಮಾಡುತ್ತೇವೆ. ಈ ಯೋಜನೆ ವೆಚ್ಚ ₹26 ಸಾವಿರ ಕೋಟಿ ಹೋಗಿದೆ. ಇಲ್ಲಿಯವರೆಗೆ ಕಾಮಗಾರಿ ನಡೆಯಲು ಈ ಹಿಂದೆ ಇದ್ದ ನೀವು ಕಾರಣ ಎಂದು ಶ್ಲಾಘನೆಯನ್ನೂ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಶಾಸಕ ಪರಮೇಶ್ವರ್ ಮತ್ತು ಸಚಿವ ಮಾಧುಸ್ವಾಮಿ ನಡುವೆ ಏರುಧ್ವನಿಯ ಜಟಾಪಟಿ ನಡೆಯಿತು. ಯೋಜನೆಯನ್ನೇ ರಿಜೆಕ್ಟ್ ಮಾಡ್ತೇವೆ ಅಂದರೆ ಹೇಗೆ? 12,900 ಕೋಟಿಯಲ್ಲಿ ಯೋಜನೆ ಮುಗಿಸಬಹುದು, ಯೋಜನೆಗೆ26 ಸಾವಿರ ಕೋಟಿ ಹೆಚ್ಚುವರಿ ಯಾಕೆ? ನಿಮಗೆ ಇಚ್ಚಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಪರಮೇಶ್ವರ್ ಗರಂ ಆದರು.

ಯೋಜನೆಗೆ ನಾವು ಅವಕಾಶ ಕೊಟ್ಟಿದ್ದೇವೆ, ಹಣವಿಲ್ಲದಿದ್ರೂ ರೈತರನ್ನು ನಾವು ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ ಕೊರಟಗೆರೆಯಲ್ಲಿ‌ಸಮಸ್ಯೆ ಶುರುವಾಗಿದೆ.  ಹಾಗಾಗಿ ಯೋಜನೆಗೆ ತೊಡಕಾಗುತ್ತಿದೆ ಎಂದು ಪರಮೇಶ್ವರ್ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದರು.

ಯೋಜನೆ ಕಾಮಗಾರಿ ನಡೆಯುತ್ತಿದೆ. ಯೋಜನೆ ಕಾರ್ಯಗತಕ್ಕೆ ಹತ್ತಿರ ಬಂದಾಗ ನಿಂತಿದೆ. ಕೇವಲ 400 ಕೋಟಿ ರೂ. ನೀಡಲು ಸಬೂಬು ಏಕೆ? ರೈತರ ಭೂ ಸ್ವಾಧೀನಕ್ಕೆ ಹಣ ನೀಡಲು ಯಾಕೆ ತಡೆ? ಎಲ್ಲವೂ ಆಗಿದೆ, ಮೊದಲು ಅದನ್ನು ಸರಿಪಡಿಸಿ ಎಂದು ವಿಧಾನಸಭೆಯಲ್ಲಿ ಶಾಸಕ ರಮೇಶ್‌ಕುಮಾರ್ ಸಹ ಆಗ್ರಹಿಸಿದರು.

ಇದನ್ನೂ ಓದಿ: 

ಎಂಟು ವರ್ಷ ಕಳೆದರೂ ಮುಗಿಯದ ಎತ್ತಿನಹೊಳೆ ಕಾಮಗಾರಿ; 23 ಸಾವಿರ ಕೋಟಿ ರೂ. ತಲುಪಿದ ಯೋಜನೆಯ ವೆಚ್ಚ

(Karnataka Assembly Session Live Discussion on Yettinahole Project)


ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada