AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನದ ಭರವಸೆ ನೀಡಿದ ಯಡಿಯೂರಪ್ಪ: ಧರಣಿ ಹಿಂಪಡೆದ ಶಾಸಕರು

ಸದನವನ್ನು ಮುಂದೂಡಿದ ನಂತರ ಯಡಿಯೂರಪ್ಪ ಮನೆಗೆ ಹಿಂದಿರುಗಿದ್ದರು. ಆದರೆ ಜೆಡಿಎಸ್ ಶಾಸಕರು ಧರಣಿ ಮುಂದುವರಿಸಿರುವುದನ್ನು ತಿಳಿದ ನಂತರ ಮತ್ತೆ ವಿಧಾನಸೌಧಕ್ಕೆ ಆಗಮಿಸಿ, ಅನುದಾನದ ಭರವಸೆ ನೀಡಿ, ಜೆಡಿಎಸ್ ಶಾಸಕರ ಮನವೊಲಿಸಿದರು.

ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನದ ಭರವಸೆ ನೀಡಿದ ಯಡಿಯೂರಪ್ಪ: ಧರಣಿ ಹಿಂಪಡೆದ ಶಾಸಕರು
ಬೆಂಗಳೂರಿನ ವಿಧಾನಸೌಧ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 18, 2021 | 10:00 PM

ಬೆಂಗಳೂರು: ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಯೋಜನೆಗಳಿಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ತಡೆಹಿಡಿದಿರುವುದನ್ನು ಖಂಡಿಸಿ ಜೆಡಿಎಸ್ ಶಾಸಕರು ಗುರುವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಸದನವನ್ನು ಮುಂದೂಡಿದ ನಂತರ ಯಡಿಯೂರಪ್ಪ ಮನೆಗೆ ಹಿಂದಿರುಗಿದ್ದರು. ಆದರೆ ಜೆಡಿಎಸ್ ಶಾಸಕರು ಧರಣಿ ಮುಂದುವರಿಸಿರುವುದನ್ನು ತಿಳಿದ ನಂತರ ಮತ್ತೆ ವಿಧಾನಸೌಧಕ್ಕೆ ಆಗಮಿಸಿ, ಅನುದಾನದ ಭರವಸೆ ನೀಡಿ, ಜೆಡಿಎಸ್ ಶಾಸಕರ ಮನವೊಲಿಸಿದರು. ಈ ಸಂದರ್ಭ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸಹ ಯಡಿಯೂರಪ್ಪ ಅವರೊಂದಿಗೆ ಇದ್ದರು.

ಮುಖ್ಯಮಂತ್ರಿಯೊಂದಿಗೇ ಜೆಡಿಎಸ್ ಶಾಸಕರು ವಿಧಾನಸಭೆಯಿಂದ ಹೊರಗೆ ಬಂದರು. ಯಡಿಯೂರಪ್ಪ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಎಚ್​.ಡಿ.ರೇವಣ್ಣ, ಮೈತ್ರಿ ಸರ್ಕಾರದ ಅವಧಿಯಲ್ಲಿ ಶುರುವಾದ ಕೆಲಸಗಳು ಮುಗಿಯಬೇಕು. ಪ್ರತಿಪಕ್ಷಗಳ ಶಾಸಕರು ಇರುವ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಬೇಕು. ಧರಣಿ ನಡೆಸುವ ಹಿಂದೆ ನಮಗೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಫಲನೀಡದ ಸ್ಪೀಕರ್ ಮನವೊಲಿಕೆ ಸದನಕ್ಕೆ ಯಡಿಯೂರಪ್ಪ ಆಗಮನಕ್ಕೂ ಮೊದಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೆಡಿಎಸ್ ಶಾಸಕರ ಮನವೊಲಿಸಲು ಯತ್ನಿಸಿದರು. ವಿಧಾನಸಭೆಯ ಕಲಾಪ ಮುಂದೂಡಿದರೂ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿಯೇ ಕುಳಿತಿದ್ದರು. ಅನುದಾನ ನೀಡುವಲ್ಲಿ ತಾರತಮ್ಯ ನಿಲ್ಲಿಸಬೇಕೆಂದು ಒತ್ತಾಯಿಸುತ್ತಿದ್ದರು. ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿ, ಟೆಂಡರ್ ಆಗಿದ್ದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್​ ಗೌಡ, ‘ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಪಕ್ಷದ ಶಾಸಕರಿಗೂ ಅನುದಾನ ಸಿಗುತ್ತಿತ್ತು. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿರಲಿಲ್ಲ. ಹಣಕಾಸು ಇಲಾಖೆ ಅನುಮತಿ ತೆಗೆದುಕೊಂಡು ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಬಿಜೆಪಿ ಸರ್ಕಾರ ಆ ಕೆಲಸಗಳನ್ನು ಸ್ಥಗಿತಗೊಳಿಸಿದೆ. ಇವರಿಗೆ ಬೇಕಾದವರಿಗೆ ಅನುದಾನ ಕೊಟ್ಟಿದೆ. ಹಿಂದಿನ ಸರ್ಕಾರದಲ್ಲಿ ಅನುಮೋದನೆ ಆಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಹಿಂದಿನ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆವು. ಆಗ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದರು. ಆದರೆ ಆ ಭರವಸೆ ಈಡೇಲಿಲ್ಲ. ಹಾಗಾಗಿ ಧರಣಿಗೆ ಮುಂದಾಗಿದ್ದೇವೆ. ನನ್ನ ಕ್ಷೇತ್ರದಲ್ಲಿ ಸುಮಾರು ₹ 350 ಕೋಟಿ ಮೊತ್ತದ ಯೋಜನೆಗಳಿಗೆ ಅನುದಾನ ತಡೆಹಿಡಿಯಲಾಗಿದೆ. ಒಂದು ಕ್ಷೇತ್ರದಲ್ಲಿ ಕೆಲಸ ಆಗುತ್ತೆ, ಇನ್ನು ಆರು ಕ್ಷೇತ್ರದಲ್ಲಿ ಕೆಲಸ ಆಗ್ತಿಲ್ಲ ಅಂದರೆ ಏನರ್ಥ’ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಸದನದಲ್ಲಿ ಉತ್ತಮ ಚರ್ಚೆಯೇ ನಡೆಯುತ್ತಿಲ್ಲ ಹಾಗಾಗಿ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ: ಹೆಚ್.ಡಿ ಕುಮಾರಸ್ವಾಮಿ

ಇದನ್ನೂ ಓದಿ: ಸಿದ್ದರಾಮಯ್ಯ. ಈಶ್ವರಪ್ಪ, ಬೊಮ್ಮಾಯಿ, ರೇವಣ್ಣ ಹಾಗೂ ಸ್ಪೀಕರ್‌ ಸದನದಲ್ಲಿ ಅದ್ಹೆಂಗೆ ಪರಸ್ಪರರ ಕಾಲೆಳೆದ್ರು ಗೊತ್ತಾ..