ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ: ಬಿಜೆಪಿ ಜೆಡಿಎಸ್ ಧರಣಿ ಬಗ್ಗೆ ಯುಟಿ ಖಾದರ್ ಖಡಕ್ ಸಂದೇಶ

| Updated By: Ganapathi Sharma

Updated on: Jul 25, 2024 | 10:08 AM

ವಾಲ್ಮೀಕಿ ಹಗರಣದ ಚರ್ಚೆಗೆ ಅವಕಾಶ ನೀಡಿದ್ದು, ಇನ್ನು ಅನೇಕ ಮಸೂದೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಮುಡಾ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದು, ವಿಧಾನಸಭೆಯಲ್ಲಿ ಕೋಲಾಹಲ ಮುಂದುವರಿಯುವ ಸುಳಿವು ನೀಡಿದೆ.

ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ: ಬಿಜೆಪಿ ಜೆಡಿಎಸ್ ಧರಣಿ ಬಗ್ಗೆ ಯುಟಿ ಖಾದರ್ ಖಡಕ್ ಸಂದೇಶ
ಸ್ಪೀಕರ್ ಯುಟಿ ಖಾದರ್
Follow us on

ಬೆಂಗಳೂರು, ಜುಲೈ 25: ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬಗ್ಗೆ ಸ್ಪೀಕರ್ ಯುಟಿ ಖಾದರ್ ಗುರುವಾರ ಮೌನಮುರಿದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದನದ ನಿಯಮಾವಳಿ ಪ್ರಕಾರವೇ ಕಲಾಪ ನಡೆಸುತ್ತೇನೆ. ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ ಎಂದು ಹೇಳಿದರು.

ಆಡಳಿತ ಹಾಗೂ ವಿಪಕ್ಷದವರ ಎಲ್ಲಾ ಚರ್ಚೆಗೆ ಅವಕಾಶ ನೀಡಿದ್ದೇವೆ. ತನಿಖೆ ನಡೆಯುತ್ತಿರುವಾಗಲೇ ವಾಲ್ಮೀಕಿ ನಿಗಮ ಹಗರಣದ ಚರ್ಚೆ ನಡೆದಿದೆ. ಆ ಚರ್ಚೆಯಲ್ಲೇ ಸುಮಾರು ನಾಲ್ಕೈದು ದಿನ ಮುಗಿದು ಹೋಯಿತು. ಈಗ ಮುಡಾ ಪ್ರಕರಣದ ವಿಚಾರವಾಗಿ ಚರ್ಚೆಗೆ ಅವಕಾಶ ಕೇಳಿದ್ದಾರೆ. ಆದರೆ, ಇನ್ನೂ ಮಸೂದೆಗಳ ಮಂಡನೆ ಬಾಕಿ ಇವೆ. ಹೀಗೆಯೇ ಮುಂದುವರಿದರೆ ಕಷ್ಟವಾಗುತ್ತದೆ. ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ. ನಿಯಮಗಳ ವಿರುದ್ಧ ನಾವು ನಡೆದುಕೊಳ್ಳಲ್ಲ ಎಂದು ಅವರು ಹೇಳಿದರು.

ಆರೋಪ ಪ್ರತ್ಯಾರೋಪ ಸಹಜ. ಆದರೆ, ಅಜೆಂಡಾ ಪ್ರಕಾರ ಸದನ ನಡೆಯಲಿದೆ ಎಂದು ಅವರು ಹೇಳಿದರು. ಮುಡಾ ಕುರಿತ ಚರ್ಚೆಗೆ ಪಟ್ಟು ಹಿಡಿದಿರುವ ಬಿಜೆಪಿ, ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ಮಾಡಿ ಗಮನ ಸೆಳೆದಿದ್ದಾರೆ.

ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ: ಅಶ್ವತ್ಥ್ ನಾರಾಯಣ

ಮುಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಸರ್ಕಾರ ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಮುಂದುವರಿಯಲಿದೆ. ಸದನ ಮುಕ್ತಾಯವಾಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ವಿಧಾನಸೌಧದಲ್ಲಿ ಶಾಸಕ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಹಗರಣದ ಬಗ್ಗೆ ಸವಿಸ್ತಾರವಾಗಿ ಜನರಿಗೆ ತಿಳಿಸಬೇಕು. ಹಾಗಾಗಿ ಚರ್ಚೆಗೆ ಅವಕಾಶ ನೀಡಬೇಕು. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ, ಭಜನೆ!

ಸರ್ಕಾರ ಮುಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಚರ್ಚಿಸಲು ಅವಕಾಶ ನೀಡದೆ ಸಿಎಂ ಹೆದರಿಕೊಂಡು ಓಡಿಹೋಗುತ್ತಿದ್ದಾರೆ. ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದಿದ್ದರೆ ಧರಣಿ ಮುಂದುವರಿಸುತ್ತೇಬೆ. ಹಗರಣದಲ್ಲಿ ಯಾವ ಪಕ್ಷದವರು ಭಾಗಿಯಾಗಿದ್ದರೂ ಕ್ರಮಕೈಗೊಳ್ಳಲಿ ಎಂದು ವಿಧಾನಸೌಧದಲ್ಲಿ ಶಾಸಕ ಮುನಿರತ್ನ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ