ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಶುಕ್ರವಾರ ಹಲವು ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು “ಕರ್ನಾಟಕ ಬಂದ್”ಗೆ ಕರೆ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಜೀವನ ಬಹುತೇಕ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ 1900ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯ ರೈತ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೆ, ಜನಜೀವನದ ಮೇಲೆ ಪರಿಣಾಮ ಬೀರುವ ಬೀದಿಬದಿ ವ್ಯಾಪಾರ, ಹೊಟೆಲ್ ಸಂಘಟನೆ ಸಹಮತ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ. ಇನ್ನು, ಸಾರಿಗೆ ನೌಕರರು, ಕಟ್ಟಡ ಕಾರ್ಮಿಕರು, ಎಪಿಎಂಸಿ ಕಾರ್ಮಿಕರ ಸಂಘ, ವಕೀಲರ ಸಂಘಗಳು ತಮ್ಮ ಕಾರ್ಯ ಕಲಾಪದಲ್ಲಿ ತೊಡಗಿ ನೈತಿಕ ಬೆಂಬಲ ನೀಡುವುದಾಗಿ ಹೇಳಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ..
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಎಂ ಗೃಹಕಚೇರಿ ಕೃಷ್ಣಾಗೆ ಬಂದ ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಗೂ ನಾರಾಯಣಗೌಡ ಬೇಟಿ ನೀಡಿದ್ದರು.
ಚಿಕ್ಕೋಡಿ: ಕರ್ನಾಟಕ ಬಂದ್ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ಬಂದ್ ಮಾಡುವುದರಿಂದ ಈಗ ಹರಿಯುತ್ತಿರುವ ನೀರು ನಿಲ್ಲುವುದಿಲ್ಲ. ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಅದನ್ನೇ ನೆಪ ಮಾಡಿ ಕರ್ನಾಟಕ ಬಂದ್ ಮಾಡೋದು ಒಳ್ಳೆಯದಲ್ಲ. ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಬಂದ್ ವಿಚಾರ ರದ್ದುಪಡಿಸಬೇಕು ಎಂದರು.
ಕಾವೇರಿ ನೀರು ವಿವಾದ ಸಂಬಂಧ ರಾಜ್ಯದಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಲೇ ಇದ್ದು, ಸರ್ವ ಸಂಘಟನೆಗಳ ಒಕ್ಕೂಟದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಸರ್ವ ಸಂಘಟನೆ ಅಧ್ಯಕ್ಷ ಶಿವಕುಮಾರ್ ನಾಯ್ಕ್ ಹಾಗೂ ಮಹಿಳಾಘಟಕ ಅಧ್ಯಕ್ಷೆ ಜಯಂತಿ ಅವರು ನಿನ್ನೆ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಅನ್ನ, ನೀರು ಸೇವಿಸದೆ ಪ್ರತಿಭಟಿಸುತ್ತಿದ್ದಾರೆ. ರಕ್ತ ಕೊಟ್ಟೆವು ನೀರು ಬಿಡೆವು ಅಂತ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ವಿಚಾರವಾಗಿ ವಾದ ಮಾಡಲು ಕರ್ನಾಟಕದ ವಕೀಲರ ನೇಮಕ ಮಾಡಬೇಕು. ಸ್ವತಃ ಸಿಎಂ ಕೂಡ ವಕೀಲರಿದ್ದಾರೆ, ಅವರ ಮೇಲೆ ಭರವಸೆ ಇತ್ತು. ಆದರೆ ಕಾವೇರಿ ವಿಚಾರವಾಗಿ ಕ್ಯಾರೇ ಅನ್ನುತ್ತಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿ ಬಿಡೋದನ್ನ ಬಂದ್ ಮಾಡೋ ವರೆಗೂ ನಿರಂತರ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ. ಸಂಜೆ 5 ಗಂಟೆ ಬಳಿಕ ಜನರ ಓಡಾಟ, ವಾಹನಗಳ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಯತಾಸ್ಥಿತಿಗೆ ಮರಳುತ್ತಿದೆ. ಅಂಗಡಿ ಮುಂಗಟ್ಟುಗಳು ಕೂಡ ಒಂದೊಂದಾಗಿಯೇ ತೆರೆಯುತ್ತಿವೆ.
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ನಡೆಸಲಾಗಿದ್ದು, ಶಿವಾಜಿನಗರದಲ್ಲಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು ಇನ್ನೂ ತೆರೆದಿಲ್ಲ. ಅಂಗಡಿಗಳನ್ನ ಬಂದ್ ಮಾಡಿ ವ್ಯಾಪಾರಸ್ಥರು ಕ್ರಿಕೆಟ್ ಆಡುತ್ತಿದ್ದಾರೆ. ಇವತ್ತು ಇಡೀ ದಿನ ಅಂಗಡಿಗಳನ್ನ ಓಪನ್ ಮಾಡುವುದಿಲ್ಲ. ಕಾವೇರಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಸೂಚನೆ ಹಿನ್ನೆಲೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಮಣಿದು ನೀರು ಹರಿಸಿದ್ರೆ ಮತ್ತೆ ಹೇಗೆಲ್ಲ ಹೋರಾಟ ಮಾಡಬೇಕು ಎಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಸಭೆ ನಡೆಸಲಾಗುತ್ತಿದೆ. ನಾಳಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ನೀರು ಹರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲು ಪ್ಲಾನ್ ಹಾಕಲಾಗುತ್ತಿದೆ.
ಹಾಸನ: ಬೆಳಿಗ್ಗೆಯಿಂದ ಬಂದ್ ಆಗಿದ್ದ ಹಾಸನ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಾಸನ ಕೇಂದ್ರ ನಿಲ್ದಾಣದಿಂದ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿ ಬೇರೆ ಬೇರೆ ಭಾಗದ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆ ಇದೆ.
ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ರಾಜ್ಯ ಸಂಪೂರ್ಣ ಸಹಜ ಸ್ಥಿತಿಗೆ ಬಾರದಿದ್ದರೂ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಯಶವಂತಪುರ ಸರ್ಕಲ್ ಬಳಿ ಕೆಲವು ಜನರು ರಸ್ತೆಗಿಳಿದಿದ್ದು, ಸಂಜೆಯಾಗುತ್ತಿದ್ದಂತೆ ಬಿಎಂಟಿಸಿ ಬಸ್ಸು, ಕಾರು, ಬೈಕ್ಗಳ ಸಂಚಾರ ಆರಂಭಿಸಿವೆ. ಒಂದೊಂದೆ ಅಂಗಡಿ ಮುಂಗಟ್ಟು, ಹೋಟೆಲ್ಗಳು ಓಪನ್ ಆಗುತ್ತಿವೆ.
ಬೆಂಗಳೂರು ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಸಹಜ ಸ್ಥಿತಿಗೆ ಮರಳಿಲ್ಲ, ಪ್ರಯಾಣಿಕರೇ ಇಲ್ಲದೇ ಬಿಕೋ ಎನ್ನುತ್ತಿದ್ದು, ಕೆಎಸ್ಆರ್ಟಿಸಿ ಬಸ್ಗಳು ನಿಂತಲ್ಲೇ ನಿಂತುಕೊಂಡಿವೆ. ಆದರೆ, ತಮಿಳುನಾಡು ಸಾರಿಗೆ ಬಸ್ಗಳು ನಿಲ್ದಾಣದ ಬಳಿ ಸುಳಿಯಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಬಸ್ ನಿಲ್ದಾಣದಲ್ಲಿ ಇನ್ನೂ ನಿಯೋಜನೆಗೊಳಿಸಲಾಗಿದೆ.
ಮತ್ತೆ ತಮಿಳುನಾಡಿಗೆ ಕಾವೇರಿ ನೀರನ್ನ ಹರಿಸಲು ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ರಿಷಬ್ ಶೆಟ್ಟಿ, ನಮಗೆ ನೀರಿಲ್ಲ, ಬೇರೆಯವರಿಗೆ ಎಲ್ಲಿ ಕೋಡಲು ಆಗುತ್ತದೆ? ಮಳೆ ಇಲ್ಲದೆ ಡ್ಯಾಮ್ಗಳು ಭರ್ತಿ ಆಗಿಲ್ಲ, ನೀರು ಬಿಡುತ್ತಿರುವುದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಸಮಸ್ಯೆಗೆ ಎರಡು ಸರ್ಕಾರ ಕೂತು ಮಾತನಾಡಬೇಕು, ರೈತರಿಗೆ ನ್ಯಾಯ ಒದಗಿಸಬೇಕು ಎಂದರು. ಸದ್ಯ ಕಾಂತಾರ 2 ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿರುವ ರಿಷಬ್ ಹೊರಗಡೆ ಇದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.
ಮಂಡ್ಯ: ಅ.15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಹೊರಡಿಸಿದ ಆದೇಶದ ವಿರುದ್ಧ ಮಂಡ್ಯದಲ್ಲಿ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರ ಈ ವಿಚಾರವಾಗಿ ಮಾತನಾಡಬೇಕು. ಸಂಜೆ ಆರು ಗಂಟೆ ಒಳಗೆ ನಿಮ್ಮ ಅಭಿಪ್ರಾಯವನ್ನ ಸರ್ಕಾರ ತಿಳಿಸಬೇಕು. ಇಲ್ಲವಾದರೇ ಹೋರಾಟದ ರೂಪ ಬದಲಾಗುತ್ತದೆ. ಪ್ರಾಧಿಕಾರದ ಆದೇಶವನ್ನ ಖಂಡಿಸುತ್ತೇವೆ. ಪ್ರಾಧಿಕಾರವನ್ನ ರದ್ದು ಮಾಡಬೇಕು ಎಂದು ರೈತರು ಆಕ್ರೋಶ ಹೊರಹಾಕಿದ್ದು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು.
ಕರ್ನಾಟಕ ಬಂದ್ ಕರೆಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ದಾವಣಗೆರೆನಗರದ ಹಳೇ ಭಾಗದ ಅಂಗಡಿ ಮಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ದಾವಣಗೆರೆ ನಗರದ ಹೊಸ ಭಾಗದಲ್ಲಿ ಜನ ಜೀವನ ಎಂದಿನಂತೆ ಇದೆ. ಎಂದಿನಂತೆ ಸರ್ಕಾರಿ ಬಸ್, ಖಾಸಗಿ ಬಸ್ ಹಾಗೂ ಆಟೋ ಸಂಚಾರ ನಡೆಯುತ್ತಿದೆ. ಹತ್ತಕ್ಕೂ ಹೆಚ್ಚುಕನ್ನಡಪರ ಸಂಘಟನೆಗಳ ಕಾರ್ಯಕರ್ಯರು ದಾವಣಗೆರೆ ನಗರದ ಜಯದೇವ ಸರ್ಕಲ್‌ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರ ಇಡಿ ಜಿಲ್ಲೆಯ ಜನ ಜೀವನ ಎಂದಿನಂತೆ ಇದೆ. ಕರ್ನಟಕ ಬಂದ್ ಕೇವಲ ಬೆಳಿಗ್ಗೆ ಹೊತ್ತು ಪ್ರತಿಭಟನೆಗೆ ಸೀಮಿತವಾಯಿತು.
ತಮಿಳುನಾಡಿಗೆ ನೀರು ಹರಿಸುವುದನ್ನ ಖಂಡಿಸಿ ಕರ್ನಾಟಕ ಬಂದ್ ನಡೆಸಲಾಗುತ್ತಿದ್ದು, ಮಂಡ್ಯದ ಮದ್ದೂರು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಯಿತು. ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೆಮ್ಮಣ್ಣು ನಾಲೆ ವೃತ್ತದಿಂದ ಪ್ರವಾಸಿ ಮಂದಿರದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು.
ಚಿಕ್ಕೋಡಿ: ಬಿಜೆಪಿ – ಜೆಡಿಎಸ್ ಮೈತ್ರಿ ವಿರೋಧಿಸಿ ಆ ಪಕ್ಷಗಳ ತೊರೆಯಲು ಹಲವು ಜನ ನಿರ್ಧರಿಸಿದ್ದಾರೆಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ಬಹಳಷ್ಟು ಜನ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರು. ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಮಾತನಾಡಿದ ಅವರು, ಕಾಲ ಕೂಡಿ ಬರಬೇಕು, ಲೋಕಸಭೆ ಸಮೀಪಿಸಿದಾಗ ಹಾಲಿ ಶಾಸಕರು, ಮಾಜಿ ಶಾಸಕರು ಇರಬಹುದು. ಬಹಳಷ್ಟು ಜನ ಬಿಜೆಪಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಆಸಕ್ತಿ ತೋರಿಸುತ್ತಿದ್ದಾರೆ. ಕಾಲ ಕೂಡಿ ಬಂದ ಸಂದರ್ಭದಲ್ಲಿ ಅದನ್ನ ಪ್ರಕಟ ಮಾಡುತ್ತೇವೆ ಎಂದರು. ರಮೇಶ್ ಕತ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ಆ ಬಗ್ಗೆ ಚರ್ಚೆ ಆಗಿಲ್ಲ. ಕಾಲ ಕೂಡಿ ಬಂದಾಗ ಚರ್ಚೆ ಬಂದಾಗ ಆ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದರು.
ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಇಂದಿನ ಬಂದ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಘಂಟೆ ಆಗಬೇಕು ಎಂದರು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದರು.
ಬೆಂಗಳೂರು: ಯಾವುದೇ ಸಭೆ ಇರಲಿ, ಕೆಟ್ಟ ಮೇಲೆ ಬುದ್ದಿ ಬಂತು ಅಂತ ಅಷ್ಟೇ. ಇವರಿಗೆ ಮೊದಲೇ ಗೊತ್ತಿರಲಿಲ್ಲವೇ? ಈಗ ಎಲ್ಲರೂ ತಿರುಗಿ ಬೀಳುತ್ತಿದ್ದಾರೆ. ಅದರಿಂದ ಹೊರಬರಲು ಸಭೆ ಮಾಡುತ್ತಿದ್ದಾರೆ. ಶಿವರಾಜ್ ಪಾಟೀಲ್ ಗಡಿ ವಿಚಾರದ ಅಧ್ಯಕ್ಷರಿದ್ದಾರೆ. ಮೊದಲು ಅವರನ್ನು ಕರೆದು ಚರ್ಚೆ ಮಾಡಬೇಕಿತ್ತು. ಆದರೆ ಇವರು ಯಾರನ್ನೂ ಕರೆಯಲೇ ಇಲ್ಲ ಎಂದು ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಇವತ್ತು ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ. ಆದರೂ ಶಾಂತಿಯೂತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ರಕ್ಷಣೆ ಮಾಡಲು ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಂಗಡಿಗಳು ಓಪನ್ ಆಗಿದ್ದಾವೆ. ವಾಹನಗಳು ಎಂದಿನಂತೆ ಓಡಾಡುತ್ತಿವೆ. ಶಾಂತಿಯುತ ಬಂದ್ ನಡೀತಾ ಇದೆ. ಮಧ್ಯಾಹ್ನ CWMA ಸಭೆ ದೆಹಲಿಯಲ್ಲಿ ನಡೆಯುತ್ತೆ.ರಾಜ್ಯದ ಪರವಾಗಿ ಅಧಿಕಾರಿಗಳು ಭಾಗಿಯಾಗುತ್ತಾರೆ. ಇದಾದ ಬಳಿಕ ಕಾನೂನು ತಜ್ಞರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರೆಲ್ಲ ವಾದ ಮಂಡಿಸಿದ್ದಾರೆ ಅವರೆಲ್ಲ ಭಾಗಿಯಾಗ್ತಾರೆ. ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನೀರಿನ ಸಮಸ್ಯೆ 10ನೇ ಶತಮಾನದಿಂದಲೂ ಇದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಕ್ರಿಪ್ಟ್ ಕೊಡಿ. ಕಾವೇರಿ ವಿಚಾರವಾಗಿ ಒಂದು ಚಿತ್ರ ಮಾಡಿ. ಸಂಸತ್ ಇದೆ, ನಾಡಿನ ಸಂಪತ್ ಇದೆ. ಇದರ ಮೇಲೆ ಜಲ ಇದೆ. ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಪರಿಹಾರ ಸಾಧ್ಯ. ಸಿನಿಮಾ, ಕಲೆ ಮೂಲಕ ಸರ್ಕಾರಕ್ಕೆ ನಾವು ಅರ್ಥ ಮಾಡಿಸಬೇಕು. ಜಲ ಎನ್ನುವ ಚಿತ್ರ ನಿರ್ಮಾಣ ಆಗಬೇಕು. ಸಂಸತ್ತು, ಸಂಪತ್ತು ಜಲ ಉಳಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ಬರಗಾಲ ಬಂದರೇ ತಾಯಿ ನೋಡಬೇಕು. ಸಿನಿಮಾ ಮಾಡಿ ರಾಜ್ಯಕ್ಕೆ ಜಲವಿವಾದದ ಬಗ್ಗೆ ಪ್ರದರ್ಶಿಸಬೇಕು. ಎಷ್ಟೇ ಮಾತಾಡಿದರೂ ಕಾವೇರಿ ವಿವಾದ ಬಗೆಹರಿಯುವುದಿಲ್ಲ. ನಮಗೆ ಇಂದು ದೊಡ್ಡ ಬೆಂಬಲ, ಬಲ ಬಂದಿದೆ. ಹೋರಾಡುತ್ತಾ ಇರೋದು ಬೇಡ, ಹೋರಾಡುತ್ತಾ ಸಮಸ್ಯೆ ಬಗೆಹರಿಸೋಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಕಾವೇರಿ ನೀರಿನ ಸಮಸ್ಯೆ ಈಗಿನದ್ದಲ್ಲ, ಮೊದಲಿನಿಂದ ಹೋರಾಡುತ್ತಿದ್ದೇವೆ. ಕಾವೇರಿ ತಾಯಿ ಪವರ್ ಅಂಥದ್ದೇ, ಕಾವೇರಿ ತಾಯಿ ಎಲ್ಲರಿಗೂ ಅಗತ್ಯ. ಕಲಾವಿದರು ಬರಲ್ಲ ಅಂತೀರಾ, ಕಲಾವಿದರು ಬಂದು ಏನ್ ಮಾಡಬೇಕು. ನಾವು ಹೋರಾಟದಲ್ಲಿ ಭಾಗಿಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದರೇ ಸಮಸ್ಯೆ ಬಗೆಹರಿಯುತ್ತಾ? ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು. ಎಲ್ಲರೂ ರೈತರೇ, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಬಸ್ನ ಹೊಡೆದು ಹಾಕಿದರೇ ಹೋರಾಟ ಆಗುತ್ತಾ? ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದರು
ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಲಿ. ನಾವು ಆಯ್ಕೆ ಮಾಡಿರುವ ಸರ್ಕಾರ ವಿವಾದ ಬಗೆಹರಿಸಲು ಮುಂದಾಗಬೇಕು. ನಮ್ಮ ಅನುಕೂಲಕ್ಕಾಗಿ ಪರಿಸ್ಥಿತಿ ಲಾಭ ಪಡೆದುಕೊಳ್ಳಬಾರದು ಎಂದು ವಾಣಿಜ್ಯ ಮಂಡಳಿ ಹೋರಾಟದಲ್ಲಿ ನಟ ಶಿವರಾಜ್ ಕುಮಾರ್ ಹೇಳಿದರು.
ನಾಡು, ನುಡಿ, ನೆಲ ಮತ್ತು ಜಲ ವಿಚಾರವಾಗಿ ಶಿವಣ್ಣ ಮತ್ತು ನಾನು ಎಲ್ಲಿ ಕರೆದರೂ ಬರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ರೈತರ ಹಿತ ಕಾಪಾಡಬೇಕು ಎಂದು ದುನಿಯಾ ವಿಜಯ ಹೇಳಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಾಡು, ನುಡಿ, ಗಡಿ, ಜಲ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಪ್ರಯತ್ನ ಯಾರೂ ಮಾಡಬೇಡಿ ಎಂದು ನಟ ಶ್ರೀಮುರಳಿ ಹೇಳಿದರು.
ಕಾವೇರಿ ವಿಚಾರವಾಗಿ ವೋಟ್ ಪಡೆದು, ಕತ್ತು ಕುಯ್ಯುವ ಕೆಲಸ ಆಗುತ್ತಿದೆ. ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇನೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡುತ್ತಾರೆ. ಯಾವುದೇ ಪಕ್ಷ, ಯಾರೇ ಸಿಎಂ ಆದರು ರಾಜಕಾರಣ ಮಾಡುತ್ತಾರೆ. ಬಂಗಾರಪ್ಪ ಅವರು ಬಿಟ್ಟಿಲ್ಲ ಇವರು ಬಿಡಬಾರದಿತ್ತು. ಎಂಪಿ ಚುನಾವಣೆ ಬರುತ್ತಿದ್ದೆ, ರಾಜಕೀಯ ಮಾಡುತ್ತಾರೆ. ರೈತರ ಜೊತೆ ನಾವು ಸದಾ ಇರುತ್ತೇವೆ. ಮಂಡ್ಯ ಜನರನ್ನ ಹೊಗಳಿ ವೋಟ್ ಪಡೆದು ಕತ್ತು ಕುಯುವ ಕೆಲಸ ಮಾಡ್ತಾರೆ. ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿ ಎಂದು ಆಗ್ರಹಿಸಿದರು.
ಮಂಡ್ಯ: ಕಾವೇರಿ ಹೋರಾಟಕ್ಕೆ ನಟ ಜೋಗಿ ಪ್ರೇಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಡ್ಯ ರೈತ ಹಿತರಕ್ಷಣಾ ಸಮಿತಿ ಜೊತೆ ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಪ್ರತಿಭಟನೆ ಮಾಡಿದರು.
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ಬಿಜೆಪಿ ನಿಂತಿದೆ.
ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಡಬ್ಲ್ಯುಎಂಎ ಎದುರು ವಸ್ತು ಸ್ಥಿತಿ ತಿಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಬೆಳಗಾವಿ: ನಗರದ ಚನ್ನಮ್ಮ ವೃತ್ತದಲ್ಲಿ ಕರವೇ ಹೋರಾಟ ತೀವ್ರಗೊಂಡಿದೆ. ಪೆಟ್ರೋಲ್ ಟ್ಯಾಂಕರ್ ಲಾರಿ ಮೇಲೆ ಹತ್ತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಕೆಳಗೆ ಮಲಗಿ ಕೆಲ ಕನ್ನಡಪರ ಹೋರಾಟಗಾರರು ಧರಣಿ ನಡೆಸಿದ್ದಾರೆ.
ಟೌನ್ ಹಾಲ್ ಬಳಿ ಆಗಮಿಸಿದ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ನಮ್ಮಲೇ ನೀರು ಇಲ್ಲ. ಪ್ರಜಾಪ್ರಭುತ್ವ ಬಂದರು ಇನ್ನೂ ಇತ್ಯರ್ಥವಾಗಿಲ್ಲ. ಬೇಗ ಇತ್ಯರ್ಥ ಆಗಬೇಕು ಎಂದು ಹಿರಿಯ ನಟ ರಂಗಾಯಣ ರಘು ಹೇಳಿದರು.
ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಘರ್ಷಣೆ. ನಾವು, ನೀವು ಎಷ್ಟೇ ಧೈರ್ಯ ಕೊಟ್ಟರೂ ರೈತರಿಗೆ ಮಳೆಯಿಂದ ಪರಿಹಾರ ಸಿಗಬೇಕು. ಸರ್ಕಾರಗಳು ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಈ ಸಮಸ್ಯೆಗೆ ಪರಿಹಾರ ಸಿಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಇದಕ್ಕೆ ನಮ್ಮ ಕಲಾವಿದರು, ತಂತ್ರಜ್ಞರು, ಇಡೀ ಚಿತ್ರರಂಗ ನಿಲ್ಲುತ್ತೇವೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.
ಬೆಂಗಳೂರು: ಫಿಲಂ ಚೇಂಬರ್ ಎದರು ಕನ್ನಡ ಚಿತ್ರರಂಗದ ನಟರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ನಟಿ ಪೂಜಾ ಗಾಂಧಿ ಮಾತನಾಡಿ ಕನ್ನಡಿಗರು ಸ್ನೇಹ, ಸಹಬಾಳ್ವೆಯಿಂದ ಇದ್ದೇವೆ. ಈ ನಾಡಿಗೆ ಚೆನ್ನಾಗಿ ಮಳೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕನ್ನಡಿಗರು ತುಂಬಾ ತಾಳ್ಮೆ ಇರುವವರು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮೇಕೆದಾಟು ಎಷ್ಟು ಅವಶ್ಯಕ ಅನ್ನೋದನ್ನು ಯೋಚಿಸಬೇಕು. ಎಲ್ಲದಕ್ಕೂ ಒಂದು ಕೀಲಿಗೈ ಇರುತ್ತೆ. ಹಾಗೇ ಎಲ್ಲಾ ಸಮಸ್ಯೆಗೂ ಪರಿಹಾರ ಇರುತ್ತೆ. ನಾವು ಆ ಪರಿಹಾರ ಹುಡುಕಲು ಮುಂದಾಗಬೇಕು ಎಂದು ಹೇಳಿದರು.
ಆನೇಕಲ್: ಗಡಿಭಾಗ ಅತ್ತಿಬೆಲೆಯಲ್ಲಿ ಕರವೇ ಹಾಗು ಕನ್ನಡ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಯುತ್ತಿದೆ. ಈ ಹೋರಾಟದಲ್ಲಿ ಮಕ್ಕಳು ಭಾಗಿಯಾಗಿದ್ದು, ಹೆದ್ದಾರಿಯಲ್ಲಿ ಮಕ್ಕಳು ಕನ್ನಡ ನಾಡಿನ ಬಗ್ಗೆ ನೃತ್ಯ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಮಂಡ್ಯ: ರಾಜ್ಯ ರೈತಸಂಘದ ಕಾರ್ಯಕರ್ತರು ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿಯ ಬೆಂಗಳೂರು ಮೈಸೂರು ರೈಲ್ವೆ ಟ್ರಾಕ್ ಮೇಲೆ ಕುಳಿತು ರೈಲು ತಡೆದು ಪ್ರತಿಭಟನೆ ನಡೆಸಲು ಯತ್ನಿಸಿದರು. ಅನ್ನದಾತರು ಗೆಜ್ಜಲಗೆರೆ ರೈಲ್ವೆ ಟ್ರ್ಯಾಕ್‌ನತ್ತ ಬರುತ್ತಿದ್ದಂತೆ ಭದ್ರತೆಗೆ ಇದ್ದ ಪೊಲೀಸರು ರೈತರನ್ನು ತಡೆದರು. ಈ ವೇಳೆ ರೈತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಕಾನೂನು ಸುವ್ಯವಸ್ಥೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರು ನಗರಾದ್ಯಂತ ಕನ್ನಡಪರ ಸಂಘಟನೆಗಳು ಬೈಕ್ ರ‍್ಯಾಲಿ ನಡೆಸಿದವು. ಕೆಪಿಸಿಸಿ ಕಚೇರಿ ಎದುರು ಬೈಕ್ ನಿಲ್ಲಿಸಿ ಕಾವೇರಿ ನಮ್ಮದೆಂದು ಘೋಷಣೆ ಕೂಗಿದ್ದಾರೆ.
ಬೆಂಗಳೂರು: ಪೊಲೀಸ್ ಭದ್ರತೆ ನಿಯೋಜಿಸಿ ಕರ್ನಾಟಕ ಬಂದ್ ಅನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಂದ್‌ಗೆ ಸಹಕಾರ ನೀಡಿದ ರಾಜ್ಯದ ಜನತೆ ಧನ್ಯವಾದ ತಿಳಿಸುತ್ತೇನೆ. ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದರೇ ತಪ್ಪಾ? ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯವೆಸಗಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಕಪ್ಪು ಬಟ್ಟೆ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ. ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ. ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡುತ್ತಿದ್ದಾರೆ. ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಪ್ರತಿಭಟನೆ ಬಿಸಿ ಜೋರಾಗಿದೆ. ನಗರದ ಪಾಲಿಟೆಕ್ನಿಕ್ ರಸ್ತೆಯಲ್ಲಿ ತೆರೆದಿದ್ದ ಅಂಗಡಿಗಳನ್ನು ಕನ್ನಡಪರ ಹೋರಾಟಗಾರು ಬಲವಂತವಾಗಿ ಮುಚ್ಚಿಸಿದ್ದಾರೆ. ತೆರೆದ ಅಂಗಡಿ ಮುಂದೆ ಹಾರ್ನ್ಹಾಕಿ ಅಂಗಡಿ ಹೋರಾಟಗಾರರು ಮುಚ್ಚಿಸಿದ್ದಾರೆ.
ಹುಬ್ಬಳ್ಳಿ: ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ ಮುಂದುವರೆದಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರ ತುಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ನವದೆಹಲಿ: ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ಹರಿಸಬೇಕು ಎಂಬ ಕರ್ನಾಟಕ ಜಲ ನಿಯಂತ್ರಣ ಸಮಿತಿ ಆದೇಶ ಪ್ರಶ್ನಿಸಿ ಕರ್ನಾಟಕ, ಕಾವೇರಿ ನಿರ್ವಹಣ ಪ್ರಾಧಿಕಾರದ ಮೊರ ಹೋಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದೆ.
ಬೆಂಗಳೂರು: ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಆರ್ ಟಿ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿದಂತೆ, ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಕರೆದುಕೊಂಡು ಹೋದರು.
ಬೆಂಗಳೂರು: ಕರ್ನಾಟಕ ಬಂದ್‌ಗೆ ಸ್ಯಾಂಡಲ್ ವುಡ್ ನಟರ ಸಾಥ್ ನೀಡಲಿದ್ದಾರೆ. ಇಂದು ಫಿಲ್ಮ್ ಚೇಂಬರ್ ಮುಂದೆ ನಟರಾದ ಶಿವರಾಜ್ ಕುಮಾರ್, ದ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಹಲವು ನಟ ಮತ್ತು ನಟಿಯರು ಪ್ರತಿಭಟನೆ ಮಾಡಲಿದ್ದಾರೆ. ಫಿಲ್ಮ್ ಚೇಂಬರ್ ಮುಂದೆ ಸಂಜೆ 6 ಗಂಟೆವರೆಗೆ ಧರಣಿ ನಡೆಸಲಿದ್ದಾರೆ.
ಬೆಂಗಳೂರು: ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ. ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸುಖ ಸುಮ್ಮನೆ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು: ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಪ್ರತಿಭಟನೆ ನಡೆಸಲು ಬಂದಿದ್ದ, ಕರ್ನಾಟಕ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಐದು ಜನ ಕಾರ್ಯಕರ್ತರು 09:50 ರ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದರು. ನಂತರ ವಿಮಾನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ.
ನೆಲಮಂಗಲ: ತಮಿಳುನಾಡಿಗೆ ನೀರು ಹರಿಸುವುದನ್ನ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ನೆಲಮಂಗಲದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯಲ್ಲಿ ನಟ ವಿನೋದ್ ರಾಜ್ ಭಾಗಿಯಾಗಿದ್ದಾರೆ. ಪ್ರತಿಭಟನಾಕಾರರು ಎಮ್ಮೆ ಹಿಡಿದು ಸಾಗುತ್ತಿದ್ದಾರೆ.
ಧಾರವಾಡ: ನಗರದ ಜ್ಯುಬಿಲಿ ಸರ್ಕಲ್‌ನಲ್ಲಿ ರೈತ ಏಕಾಂಕಿಯಾಗಿ ಬಸ್ಗಳನ್ನು ತಡೆದು ರೈತ ಪ್ರತಿಭಟನೆ ನಡೆಸಿದರು.ದಾಡೇಲಿ-ಹಳಿಯಾಳ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾಕಾರರು ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ ಸಂಸದರ ಅಣಕು ಶವಯಾತ್ರೆ ನಡೆಸಲು ಯತ್ನಿಸಿದರು. ಈ ವೇಳೆ ತಡೆದ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಹುಬ್ಬಳ್ಳಿ: ನಗರದಹೊಸುರ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಹಾಕಿದ್ದಾರೆ. ಅಲ್ಲದೆ ಹೊಸುರ ವೃತ್ತದಲ್ಲಿ ಬಿಆರ್ಟಿಎಸ್ ಚಿಗರಿ ಬಸ್ ತಡೆದು ಪ್ರತಿಭಟನೆ ಮಾಡಿದರು.
ಚಿತ್ರದುರ್ಗ: ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಸಿಎಂ ಸಿದ್ಧರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ ಚಿತ್ರದ ಮೇಲೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಕರುನಾಡ ವಿಜಯಸೇನೆ ಜಿಲ್ಲಾದ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿ ಹಲವರನ್ನು ಪೊಲೀಸರ ವಶಪಡಿಸಿಕೊಂಡರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಖಾಲಿ ಕೊಡ, ಸಂಸದರ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ 28 ಸಂಸದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಸದರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಎಪಿಎಂಸಿಯಲ್ಲಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಇನ್ನೂಕೆಲವರು ವ್ಯಾಪಾರ ನಡೆಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೆಡಿಎಸ್ ಪಕ್ಷದಿಂದ ನೈತಿಕ ಬೆಂಬಲ ಘೋಷಣೆ ಮಾಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡೋದು ಅನಿವಾರ್ಯ. ಸರ್ಕಾರದ ನಡವಳಿಕೆಯನ್ನು ನೋಡಿದರೆ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ತಮಿಳುನಾಡಿನಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಆದರೂ ನೀರಿಗಾಗಿ ಖ್ಯಾತೆ ನಡೆಯುತ್ತಿದೆ. ಸರ್ಕಾರ ಯಾವುದೇ ರೀತಿ ರಾಜ್ಯದ ಜನರ ಪರವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಗದಗ: ಜಿಲ್ಲೆಯಲ್ಲೂ ಕಾವೇರಿ ಕಿಚ್ಚು ಜೋರಾಗಿದೆ. ರಾಜ್ಯದ 28 ಸಂಸದರಿಗೆ ಶೃದ್ಧಾಂಜಲಿ ಅರ್ಪಿಸಿ ಜಯ ಕರ್ನಾಟಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀವಂತ ಇದ್ದರೂ ರಾಜ್ಯದ ಪಾಲಿಗೆ ಸತ್ತು ಹೋಗಿದ್ದಾರೆ ಅಂತ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜಾಜಿನಗರ ಲಿಂಕ್ ರೋಡ್ ಸರ್ಕಲ್‌ನಲ್ಲಿ ಹೋರಾಟಗಾರರು ರಸ್ತೆ ತಡೆದು ಪೊರಕೆ ಚಳುವಳಿ ನಡೆಸಿದರು. ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಚಪ್ಪಲಿ ಸೇವೆ ಮಾಡಿದರು.
ತುಮಕೂರು: ನಗರದ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಎಂ.ಕೆ ಸ್ಟಾಲಿನ್ ಭಾವಚಿತ್ರಕ್ಕೆ ತುಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿವೆ.
ಚಿಕ್ಕಮಗಳೂರು: ನಗರದಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತಂದೆಯೊಂದಿಗೆ ಸೇರಿ 9 ವರ್ಷದ ಬಾಲಕ ಸಹಿತ ಭಾಗಿಯಾಗಿದ್ದಾನೆ. ಬಾಲಕ ಮೂರನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾನೆ. ಬಾಲಕ ಚಂದನ್ ಕನ್ನಡ ಪರ ಸಂಘಟನೆಯ ಕಾರ್ಯಕರ್ತರ ಜೊತೆ ಸೇರಿ ಹೋರಾಟ ನಡೆಸುತ್ತಿದ್ದಾನೆ.
ಮಂಡ್ಯ: ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತ ಕೈ ಕೊಯ್ದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯಹೋರಾಟಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುಲು ಯತ್ನಿಸಿದರು. ಆದರೆ ಹೋರಾಟಗಾರ ಶ್ರೀನಿವಾಸ್ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ಈ ವೇಳೆ ಪೊಲೀಸರು ಗಾಯ ಮಾಡಿಕೊಂಡು ಪ್ರತಿಭಟನೆ ಮಾಡಬೇಡಿ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಬೆಂಗಳೂರು: ಕರುನಾಡ ಕಾರ್ಮಿಕ ಸಂಘಟನೆ ಕೆಆರ್ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಿವಿಗೆ ಚೆಂಡು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದಕ್ಕೆ ಶುರುಮಾಡುತ್ತಿದ್ದಂತೆ ಅಲರ್ಟ್ ಆದ ಪೋಲಿಸರು, ಪ್ರತಿಭಟಿಸಿತ್ತಿದ್ದವರನ್ನ ಕೆಆರ್ ಮಾರುಕಟ್ಟೆಯಿಂದ ಹೊರ ಕಳುಹಿಸಿದರು.
ಕೋಲಾರ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮಾಡಲಿದ್ದಾರೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ್ ವೃತ್ತದಿಂದ ಬೈಕ್ ರ‍್ಯಾಲಿ ಆರಂಭವಾಗಲಿದೆ. ನಿಲ್ದಾಣದಲ್ಲಿ ಬಂದ್‌ಗೆ ಬೆಂಬಲಿಸುವಂತೆ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಮನವಿ ಸಲ್ಲಿಸಿದ್ದಾರೆ. ನಗರದಾದ್ಯಂತ ಮೆಕ್ಕೆ ವೃತ್ತ, ಎಂ.ಜಿ.ರಸ್ತೆ, ಡೂಂಲೈಟ್ ಸರ್ಕಲ್ ಸೇರಿ ಹಲವೆಡೆ ಬೈಕ್ ರ‍್ಯಾಲಿ ನಡೆಸಲಿದ್ದಾರೆ.
ಬೆಂಗಳೂರು: ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಜಯ್ ನಗರ ಸರ್ಕಲ್, ಆನಂದ್ ರಾವ್ ಸರ್ಕಲ್, ಆರ್.ಟಿ ನಗರದ ತರಳುಬಾಳು ಜಂಕ್ಷನ್ ಸೇರಿದಂತೆ ಐದಾರು ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್ಪಿ, ಕಾವೇರಿ ನಿವಾಸದ ಬಳಿ ಒಂದು ಬಿಎಂಟಿಸಿ ಬಸ್, ಒಂದು ಕೆಎಸ್ ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಕಲಬುರಗಿ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ CBCS, NON CBCS 2, 4 ಮತ್ತು 6 ನೇ ಸೆಮಿಸ್ಟರ್ ಮತ್ತು NEP ಯ 4 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್ಗಳು ಸೇರಿದಂತೆ 150 ಜನರನ್ನು ಪೊಲೀಸರು ವಶಕ್ಕೆ
ಪಡೆದುಕೊಂಡಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ವೇಳೆ ಕಲ್ಲುತೂರಿ, ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಶುಕ್ರವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ನೆಪದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೆ ಮುಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಪ್ರಮುಖ ಜಂಕ್ಷನ್ಗಳು, ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Published On - 7:05 am, Fri, 29 September 23