ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ಗೆ ಈಗಾಗಲೇ ಹಣ ಕಟ್ಟಿದ್ರೆ ವಾಪಸ್ ಸಿಗಲಿದೆ; ಬಾಯ್ಸ್ ನಿಮಗೂ ಉಚಿತ ಪ್ರಯಾಣ
ಕರ್ನಾಟಕದಲ್ಲಿ ಇನ್ನು ಮುಂದೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಲಭ್ಯ. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರ ಜೊತೆ ಗಂಡು ಮಕ್ಕಳಿಗೂ ಸೌಲಭ್ಯ ವಿಸ್ತರಿಸಲಾಗಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಿಗಲಿದೆ. ಪಾಸ್ ಪಡೆಯಲು 'ಕರ್ನಾಟಕ ಒನ್' ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪಾವತಿಸಿದ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಬೆಂಗಳೂರು, ಜೂ.11: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಶಕ್ತಿ ಯೋಜನೆಯಡಿ ಇದುವರೆಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು, ಇದೀಗ ಗಂಡು ಮಕ್ಕಳಿಗೂ ವಿಸ್ತರಿಸುವ ಮೂಲಕ ರಾಜ್ಯದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳಿಗೆ ಈ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಅದರಂತೆ ಈಗ ಸಾರಿಗೆ ಇಲಾಖೆಯು ಯೋಜನೆ ಜಾರಿಗೆ ಸಂಪೂರ್ಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಗೈಡ್‌ಲೈನ್ಸ್ ಬಿಡುಗಡೆಯಾಗಲಿದೆ. ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ನೆರವು ಸಿಗಲಿದೆ.
ಉಚಿತ ಬಸ್ ಪಾಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಇನ್ನು ಒಂದೆರಡು ದಿನಗಳಲ್ಲಿ ತಮ್ಮ ಹತ್ತಿರದ ‘ಕರ್ನಾಟಕ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸುವ ದಾಖಲಾತಿಗಳು ಹಾಗೂ ಅರ್ಜಿಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ, ಸಂಪೂರ್ಣ ಉಚಿತವಾಗಿ ಬಸ್ ಪಾಸ್‌ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಹಣ ಪಾವತಿ ಮಾಡಿ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಸಚಿವರು ಮತ್ತೊಂದು ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಅಂತಹ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ, ಅವರು ಪಾಸ್‌ಗಾಗಿ ಪಾವತಿಸಿರುವ ಸಂಪೂರ್ಣ ಹಣವನ್ನು ಸರ್ಕಾರವೇ ನೇರವಾಗಿ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ಐತಿಹಾಸಿಕ ಗ್ಯಾರಂಟಿ ನಡೆಗೆ ವಿದ್ಯಾರ್ಥಿ ವಲಯ ಹಾಗೂ ಪೋಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉಚಿತ ಬಸ್ ಪಾಸ್ ಮರುಪಾವತಿ: ನಾಲ್ಕು ಸಾರಿಗೆ ನಿಗಮಗಳಿಗೆ 86.86 ಕೋಟಿ ರೂ. ಬಿಡುಗಡೆ
ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಬೆನ್ನಲ್ಲೇ, ಆಡಳಿತಾತ್ಮಕವಾಗಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು, ಸಾರಿಗೆ ನಿಗಮಗಳಿಗೆ ಭಾರಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ. 2026-27ನೇ ಸಾಲಿನಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ರಿಯಾಯಿತಿ ಮತ್ತು ಉಚಿತ ಬಸ್ ಪಾಸ್ ವೆಚ್ಚದ ಮರುಪಾವತಿಗಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 86 ಕೋಟಿಯ 86 ಲಕ್ಷದ 25 ಸಾವಿರ ರೂಪಾಯಿ (86,86,25,000) ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಯಾವ ಸಾರಿಗೆ ನಿಗಮಕ್ಕೆ ಎಷ್ಟು ಅನುದಾನ?
| ಸಾರಿಗೆ ನಿಗಮದ ಹೆಸರು (Transport Corporation) | ಬಿಡುಗಡೆಯಾಗಿರುವ ನಿಖರ ಅನುದಾನದ ಮೊತ್ತ |
| KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) | 29 ಕೋಟಿ 38 ಲಕ್ಷ 75 ಸಾವಿರ ರೂ. |
| NWKRTC (ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ) | 25 ಕೋಟಿ 19 ಲಕ್ಷ 50 ಸಾವಿರ ರೂ. |
| BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) | 19 ಕೋಟಿ 44 ಲಕ್ಷ 50 ಸಾವಿರ ರೂ. |
| KKRTC (ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ) | 12 ಕೋಟಿ 83 ಲಕ್ಷ 50 ಸಾವಿರ ರೂ. |
| ಒಟ್ಟು ಮೊತ್ತ (Total Fund Released) | 86 ಕೋಟಿ 86 ಲಕ್ಷ 25 ಸಾವಿರ ರೂ. |
ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ಪಾಸ್ ನೀಡುವುದರಿಂದ ಸಾರಿಗೆ ನಿಗಮಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕ ಕಂತಿನ ವೆಚ್ಚದ ಹಣ ಇದಾಗಿದ್ದು, ಸಾರಿಗೆ ಇಲಾಖೆಯ ಸುಗಮ ಕಾರ್ಯನಿರ್ವಹಣೆಗೆ ಮತ್ತು ವಿದ್ಯಾರ್ಥಿಗಳಿಗೆ ತಡೆರಹಿತವಾಗಿ ಪಾಸ್ ವಿತರಣೆ ಮಾಡಲು ಈ ನಿಧಿ ಸಹಕಾರಿಯಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Thu, 11 June 26




