ಬೆಂಗಳೂರು/ಬೆಳಗಾವಿ, (ಡಿಸೆಂಬರ್ 19): ಸುವರ್ಣ ಸೌಧ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಪದದಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಮತ್ತೊಂದೆ ಸಿಟಿ ರವಿ ಬಂಧನ ಖಂಡಿಸಿ ಬಿಜೆಪಿ ಹೋರಾಟ ತೀವ್ರಗೊಳಿಸಿದ್ದು, ನಾಳೆ(ಡಿಸೆಂಬರ್ 20) ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಡೆಸುವಂತೆ ಕರೆ ಕೊಡಲಾಗಿದೆ. ಇನ್ನು ಸಿಟಿ ರವಿ ಅವರ ತವರು ಜಿಲ್ಲೆ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದೆ.
ಅತ್ತ ರಾಜ್ಯ ಬಿಜೆಪಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶುಕ್ರವಾರ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದರೆ, ಇತ್ತ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ನಾಳೆ ನಗರ ಬಂದ್‌ಗೆ ಕರೆ ನೀಡಿದೆ. ಸಿಟಿ ರವಿ ಬಂಧನವಾಗುತ್ತಿದ್ದಂತೆ ಚಿಕ್ಕಮಗಳೂರಿನನಲ್ಲಿ ಜಿಲ್ಲಾ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದು, ಸಿಟಿ ರವಿ ಮನೆಗೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಜಿಲ್ಲಾ ಬಿಜೆಪಿ ಸದಸ್ಯರು ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಟಿ ರವಿ ಬಂಧನ ವಿರೋಧಿಸಿ ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: CT Ravi Arrested: ಸುವರ್ಣ ಸೌಧದಲ್ಲೇ ಬಿಜೆಪಿ MLCಸಿಟಿ ರವಿಯನ್ನು ಬಂಧಿಸಿದ ಪೊಲೀಸರು
ಈ ಬಗ್ಗೆ ಮಾತನಾಡಿರುವ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಧುರಾಜ್ ಅರಸ್ , ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ ಮಾಡಲಾಗುತ್ತೆ. ಹೀಗಾಗಿ ಸಾರ್ವಜನಿಕರು ಈ ಬಂದ್‌ಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಖಾನಾಪುರದಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಸಚಿವರ ಒತ್ತಡದ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ಸದನದಲ್ಲಿ ಎಲ್ಲರ ಮುಂದೆ ನಡೆದಿರುವ ಘಟನೆ. ಸದಸ್ಯರಿದ್ರೂ, ಐಎಎಸ್ ಅಧಿಕಾರಿಗಳಿದ್ರು, ಐಪಿಎಸ್ ಅಧಿಕಾರಿಗಳಿದ್ರು, ಮಾದ್ಯಮದವರಿದ್ದರು. ಅದು ಹೇಗೆ ಕಿರುಕುಳ ಆಗುತ್ತೆ. ಹಾಗಿದ್ರೆ ಸಭಾಪತಿಗಳಿಗೆ ಹೇಳಿ ಸಸ್ಪೆಂಡ್ ಮಾಡಿಸಬಹುದಿತ್ತು ಎಂದು ಹೇಳಿದರು.
ಸುವರ್ಣ ಸೌಧದಲ್ಲಿ ನಡೆದ ಘಟನೆ ಅದು. ಯಾಕೆ ಕೇಸ್ ಹಾಕಿ ಇಲ್ಲಿಗೆ ಕರೆದುಕೊಂಡು ಬರಬೇಕಿತ್ತು. ಅದು ಖಾನಾಪುರಕ್ಕೆ ಕರೆತಂದಿದ್ದಾರೆ.ವಕೀಲರಿಗೂ ಸಿಟಿ ರವಿ ಅವರ ಭೇಟಿ ಬಿಟ್ಟಿಲ್ಲ. ಹೇಗೆ ಬಿಡಲ್ಲ ನಾವು ನೋಡುತ್ತೇವೆ. ಲೀಗಲ್ ಆಗಿ ನಾವು ಫೈಟ್ ಮಾಡುತ್ತೇವೆ. ಕೇಸ್ ಹಾಕಿರುವುದರಲ್ಲಿ ಸಚಿವರ ಒತ್ತಡ ಇದೆ. ಇದು ಜನತೆಗೆ ಜಗಜ್ಜಾಹೀರವಾಗಿರೋದು. ಇದರಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Thu, 19 December 24