ಬೆಂಗಳೂರು, (ಡಿಸೆಂಬರ್ 18): ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಜನವರಿಯಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂದು ಯತ್ನಾಳ್ ಟೀಂ ಹೇಳುತ್ತಿದೆ. ಮತ್ತೊಂದೆಡೆ ಯಾವುದೇ ಶೋಕಾಸ್ ನೋಟಿಸಿಗೂ ಬಗ್ಗದ ಬಸನಗೌಡ ಪಾಟೀಲ್ ಯತ್ನಾಳ್ ಎಂಡ್ ಟೀಂ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆಯೂ, ಯಡಿಯೂರಪ್ಪ ಕುಟುಂಬದ ವಿರುದ್ದ ಸರಣಿ ಟೀಕೆಯನ್ನು ಮುಂದುವರಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಇತ್ತ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿ ಅವರನ್ನು ಭೇಟಿ ಮಾಡಿದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿಜಯೇಂದ್ರ ಏಕಾಏಕಿ ಏಕೆ ಮೋದಿಯನ್ನು ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಸಹ ನಡೆದಿದೆ.
ಇದನ್ನೂ ಓದಿ: ಮತ್ತೆ ಸೈಲೆಂಟ್, ವೈಲೆಂಟ್ ಆಟ ಮುಂದುವರಿಸಿದ ಯತ್ನಾಳ್ ಟೀಂ: ಬೆಳಗಾವಿಯಲ್ಲಿ ರೆಬೆಲ್ಸ್ ಮಹತ್ವದ ಸಭೆ
ಸುಮಾರು 15 ನಿಮಿಷಗಳ ಕಾಲ ವಿಜಯೇಂದ್ರ, ಮೋದಿ ಜೊತೆ ಚರ್ಚಿಸಿದ್ದು, ಈ ವೇಳೆ ಸದ್ಯದ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಪಕ್ಷದಲ್ಲಿನ ಚಟುವಟಿಕೆ, ಯತ್ನಾಳ್ ಮತ್ತು ತಂಡದಿಂದ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್, ಭಿನ್ನರ ಹೇಳಿಕೆಯಿಂದಾಗಿ ಕಾಂಗ್ರೆಸ್ ಸರ್ಕಾರದ ಎದುರು ಆಗುತ್ತಿರುವ ಮುಜುಗರವನ್ನು ಮೋದಿ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಯತ್ನಾಳ್ ಬಣ ಪಟ್ಟು ಹಿಡಿದಿದ್ದು, ಹೈಕಮಾಂಡ್ ಭೇಟಿಗೆ ಸಮಯ ಸಿಗದಿದ್ದಕ್ಕೆ ರೆಬೆಲ್ಸ್ ಟೀಂ ವಾಪಸ್ ಆಗಿತ್ತು. ಆದ್ರೆ, ಇದೀಗ ದಿಢೀರ್ ವಿಜಯೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ವಿಜಯೇಂದ್ರ, ಪಕ್ಷದ ವರಿಷ್ಠರು ನನ್ನ ಪರವಾಗಿದ್ದಾರೆ ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ. ಮೋದಿ ಭೇಟಿ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಬೀಳುತ್ತಾ ಎನ್ನುವುದು ಮುಂದಿರುವ ಪ್ರಶ್ನೆ.
ಇನ್ನು ಮೋದಿ ಭೇಟಿ ಬಳಿಕ ಟ್ವೀಟ್ ಮಾಡಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ಪ್ರಧಾನಿ ಮೋದಿಜೀಯವರ ಕಾರ್ಯ ಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ.ಅವರ ಆಶೀರ್ವಾದದ ಮಾರ್ಗದರ್ಶನ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ, ಇಂದಿನ ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪೋತ್ಸವ: ಏನಿದು ಬರ್ತ್ಡೇ ಸೀಕ್ರೆಟ್?
ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸನ್ಮಾನ್ಯ ಪ್ರಧಾನಿ ಶ್ರೀ @narendramodi ಜೀ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ಪ್ರಧಾನಿ ಮೋದಿಜೀಯವರ… pic.twitter.com/okGgDi3YIG
— Vijayendra Yediyurappa (@BYVijayendra) December 18, 2024
ಭಾರತದ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿ ಜಾಗತಿಕ ಮಟ್ಟದಲ್ಲಿ ಅಗ್ರ ಸಾಧನೆಗೈಯಲು ಮಹತ್ವದ ಪಾತ್ರ ವಹಿಸಲಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ಕೊಡುಗೆ ಮುಂಚೂಣಿ ಸ್ಥಾನದಲ್ಲಿರುವಂತೆ ಕಾಳಜಿ ವಹಿಸಲು ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಬೇಕು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಯೋಜಿತವಾಗಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲು ಸೂಚಿಸಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿಯ ಅಪೂರ್ವ ಕ್ಷಣಗಳು-ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Wed, 18 December 24