ಬೆಂಗಳೂರು, ಜನವರಿ 4: ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಹೈಕಮಾಂಡ್ ಅಭಯ ಮತ್ತಷ್ಟು ಶಕ್ತಿ ತುಂಬಿದಂತಿದೆ. ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಚಿವ ಅಮಿತ್ ಶಾರನ್ನೂ, ಜೆಪಿ ನಡ್ಡಾರನ್ನೂ ಭೇಟಿಯಾಗಿದ್ದರು. ಅದಾದ ಬೆನ್ನಲ್ಲೇ ರಾಜ್ಯಕ್ಕೂ ಜೆಪಿ ನಡ್ಡಾ, ವಿಜಯೇಂದ್ರ ಶುಕ್ರವಾರ ಒಟ್ಟಿಗೇ ಆಗಮಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ವಿಜಯೇಂದ್ರ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದು, ಯತ್ನಾಳ್ಗೆ ಡೋಂಟ್ಕೇರ್ ಅನ್ನುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಇದ್ದ ವಿಜಯೇಂದ್ರ ಅಮಿತ್ ಶಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದರು. ಅಮಿತ್ ಶಾ ಬಳಿಯೂ ಯತ್ನಾಳ್ ನಡೆಯ ಬಗ್ಗೆ ದೂರು ಕೊಟ್ಟಿದ್ದರು. ಇದಿಷ್ಟೇ ಅಲ್ಲ ಜೆಪಿ ನಡ್ಡಾರನ್ನೂ ಭೇಟಿಯಾಗಿ ಯತ್ನಾಳ್ ನಡೆಯ ಬಗ್ಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.
ಇದೀಗ, ಪ್ರತ್ಯೇಕ ಸಮರ ಸಾರಿರುವ ಯತ್ನಾಳ್ ವಿರುದ್ಧ ಮತ್ತೆ ವಿಜಯೇಂದ್ರ ಬೆಂಕಿಯುಗುಳಿದ್ದಾರೆ. ಯಾರೋ ಒಂದಿಬ್ಬರು ಮಾತನಾಡೋದನ್ನು ಬದಿಗಿಟ್ಟು, ಉಳಿದೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೀನೆ. ರಾಜ್ಯಾಧಕ್ಷನಾಗಿ ಪಕ್ಷವನ್ನ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದಿದ್ದಾರೆ.
ಇದಿಷ್ಟೇ ಅಲ್ಲ, ವರಿಷ್ಠರು, ಹಿರಿಯರು ನನಗೆ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟಿದ್ದಾರೆ. ಕಳೆದ ಒಂದು ವರ್ಷದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಯತ್ನಾಳ್ ಬಣಕ್ಕೆ ವಿಜಯೇಂದ್ರ ಸಂದೇಶ ರವಾನೆ ಮಾಡಿದ್ದಾರೆ.
ಇತ್ತ ಬಂಡಾಯ ನಾಯಕರ ಬಣದಲ್ಲೂ ಒಂದಲ್ಲಾ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಇದೀಗ ವಕ್ಫ್ ವಿರುದ್ಧ ಶಾಸಕ ಯತ್ನಾಳ್ ಬಣ 2ನೇ ಹಂತದ ಹೋರಾಟವನ್ನು ಆರಂಭ ಮಾಡಿಯೇ ಬಿಟ್ಟಿದೆ. ವಕ್ಫ್ ವಿರುದ್ಧ ಮೊದಲ ಹಂತದಲ್ಲಿ ಹೋರಾಟ ಮಾಡಿದ್ದ ಯತ್ನಾಳ್ ಬಣ, 2ನೇ ಹಂತದ ಹೋರಾಟಕ್ಕೂ ಕರೆ ಕೊಟ್ಟಿತ್ತು. ಇಂದಿನಿಂದ ಬಳ್ಳಾರಿಯ ಕಂಪ್ಲಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ನೇತೃತ್ವದಲ್ಲಿ ಹೋರಾಟಕ್ಕೆ ಚಾಲನೆ ಕೊಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದ ಜೆಪಿ ನಡ್ಡಾ: ಏರ್ಪೋರ್ಟ್ನಲ್ಲೇ ಬಿಜೆಪಿ ನಾಯಕರ ಜತೆ ಸಭೆ
ವಿಜಯೇಂದ್ರಗೆ ಸೆಡ್ಡು ಹೊಡೆದಿರೋ ಯತ್ನಾಳ್, ನಮಗೆ ವಕ್ಫ್ ವಿರುದ್ಧ ಪ್ರತಿಭಟನೆ ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಬಣ ಬಡಿದಾಟ ತಾರಕಕ್ಕೇರಿದೆ. ವಿಜಯೇಂದ್ರ ನೋಡಿದರೆ, ನನಗೆ ಹೈಕಮಾಂಡ್ ಬಲ ಇದೆ. ಮುಂದೆಯೂ ರಾಜ್ಯಾಧ್ಯಕ್ಷನಾಗಿ ಇರುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ. ಇತ್ತ ಯತ್ನಾಳ್ ಬಣ, 2ನೇ ಹಂತದ ಹೋರಾಟಕ್ಕೆ ಚಾಲನೆ ಕೊಟ್ಟೇ ಬಿಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ