Karnataka Breaking News: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರೇ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿದೆ. ಅಲ್ಲದೆ ಪಕ್ಷದ ಹೆಸರಿಗೂ ಡ್ಯಾಮೇಜ್ ತರುತ್ತದೆ ಎಂಬ ಆತಂಕ ರಾಜ್ಯ ಕಾಂಗ್ರೆಸ್ನ ಫಸ್ಟ್ಲೈನ್ ನಾಯಕರಿಗೆ ಕಾಡುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸದಸ್ಯರಿಗೆ ಮತ್ತು ಶಾಸಕರಿಗೆ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ನೀಡಬಾರದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಮಾಡಿಕೊಂಡು, ದಿನಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಇನ್ನು ಶ್ರೀರಾಮ ಸೇನೆಯಿಂದ ದತ್ತಮಾಲೆ ಅಭಿಯಾನ ನಡೆಯುತ್ತಿದ್ದು, ಸಾವಿರಾರು ದತ್ತ ಮಾಲಾಧಾರಿಗಳು ಇಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಹಾಸನಾಂಬೆ ದರ್ಶನಕ್ಕೆ 24 ಗಂಟೆ ಅವಕಾಶ ನೀಡಲಾಗಿದೆ.
ಶಿವಮೊಗ್ಗ: ಅನುದಾನಿತ ಶಿಕ್ಷಕರ ರಾಜ್ಯ ಮಟ್ಟದ ಸಮಾವೇಶವನ್ನುಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದ್ದಾರೆ. ಶಿವಮೊಗ್ಗ ನಗರದ ಪೇಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅನುದಾನಿತ ಶಿಕ್ಷಕರ ರಾಜ್ಯ ಸಮಾವೇಶ ಇದಾಗಿದ್ದು, ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಿದ್ದಾರೆ.
ಮಡಿಕೇರಿ ನಗರದ ಕಾಲೇಜು ರಸ್ತೆಯ IDBI ಬ್ಯಾಂಕ್ ಬಳಿ ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಹಲ್ಲೆಗೈದು ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ.ಪ್ರಭಾಕರ್ ಪತ್ನಿ ಒಬ್ಬರೇ ಇದ್ದಾಗ ದರೋಡೆಕೋರರು ಮನೆಗೆ ನುಗ್ಗಿ ಕಬ್ಬಿಣದ ರಾಡ್ನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ.
ಕೋಲಾರ: ಎರಡನೇ ಭಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ನವರು ಟಮಟೆಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಆದರೆ, ಅವರ ಸರ್ಕಾರ ತಾಳ ತಪ್ಪಿದೆ ಎಂದು ಸಿಟಿ ರವಿ ಕೋಲಾರದಲ್ಲಿ ಹೇಳಿದರು. ‘ನಾವು ಇವರ ಸರ್ಕಾರ ಐದು ವರ್ಷ ಇರುತ್ತದೆ ಎಂದುಕೊಂಡಿದ್ದೆವು, ಸರ್ಕಾರ ತಾಳ ತಪ್ಪಿರೋದು ಸ್ಪಷ್ಟವಾಗಿದೆ ಎಂದರು.
ಬಾಗಲಕೋಟೆ: ಕೆರೆದಂಡೆಯಲ್ಲಿ ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ರೈತ ನಾಪತ್ತೆಯಾದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ ನಡೆದಿದೆ. ಇನ್ನು ರೈತ ನಾಗಪ್ಪ ರಾಣಗಟ್ಟಿಯನ್ನು ಮೊಸಳೆ ಎಳೆದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆ ಬಳಿ ರೈತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಸಾವಳಗಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ರೈತನನ್ನು ಪತ್ತೆ ಹಚ್ಚಲು ಆಗ್ರಹಿಸಿದ್ದಾರೆ.
ಬಾಗಲಕೋಟೆ: ಸಿಎಂ ಬದಲಾವಣೆ ಬಗ್ಗೆ ‘ಕೈ’ ನಾಯಕರ ಗೊಂದಲ ಹೇಳಿಕೆ ವಿಚಾರ ‘ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು ‘ಅವರು ನಾನೇ ಇರ್ತೀನಿ ಅಂತ ಹೇಳಿದ್ದಾರೆ, ಮ್ಯಾಟರ್ ಕ್ಲೋಜ್ ಆಗಿದೆ. ಆ ಸಂದರ್ಭ ಉದ್ಭವ ಆದಾಗ ನೋಡೋಣ ಎಂದರು.
ಧಾರವಾಡ: ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪಾಪದ ಕೆಲಸ ನಾವು ಮಾಡಲ್ಲ ಎಂದು ಧಾರವಾಡದಲ್ಲಿ ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ‘ಹಾಲು ಕುಡಿದು ಸಾಯುವವರೆಗೆ ನಾವು ವಿಷ ಹಾಕುವುದಿಲ್ಲ, ಅಂಥವರಿಗೆ ವಿಷ ಹಾಕುವ ಪಾಪದ ಕೆಲಸ ನಾವು ಮಾಡುವುದಿಲ್ಲ ಎಂದರು.
ಬಾಗಲಕೋಟೆ: ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆ ಆಗುವ ಎಲ್ಲ ಅರ್ಹತೆ ಇದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಹೇಳಿದ್ದರು. ಈ ಮಾತಿಗೆ ಪ್ರಕತಿಕ್ರಿಯಿಸಿದ ಸಚಿವರು ‘ ಹಾಗೆ ಹೇಳಿದ್ದಾರೆ, ಅದರ ಜೊತೆಗೆ ಸಮಯ ಕಾಯಬೇಕು ಅಂತಾನು ಹೇಳಿದ್ದಾರೆ. ಕಾಯಬೇಕಾಗುತ್ತದೆ, ಅದಕ್ಕೆ ಪಕ್ಷವಿದೆ, ಶಾಸಕರು ಇದ್ದಾರೆ. ಎಲ್ಲ ಕೂಡಿ ಬಂದಾಗ ಮಾತ್ರ ಅವಕಾಶ ಎಂದರು.
ದಾವಣಗೆರೆ: ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಮಾಡುವುದನ್ನ ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಲಿ, ರಾಜ್ಯದ ಕಷ್ಟದ ಬಗ್ಗೆ ಹೇಳಲಿ. ಅಗತ್ಯ ಇರುವ ಅನುದಾನ ತರಲಿ ಎಂದು ದಾವಣಗೆರೆಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಇದೇ ಕಾರಣ ಬರ ಅಧ್ಯಯನ ಸೇರಿದಂತೆ ಹತ್ತಾರು ಪ್ರವಾಸ ಮಾಡುತ್ತಿದ್ದಾರೆ. ಅವರಿಗೆ ದೈರ್ಯ ಇದ್ರೆ ಪ್ರಧಾನಿ ಬಳಿ ಹೋಗಿ ಮಂಡಿಯೂರಿ ಕುಳಿತುಕೊಳ್ಳುವುದನ್ನ ಬಿಟ್ಟು, ಧೈರ್ಯದಿಂದ ಮಾತಾಡಿ ಅನುದಾನ ತರಲಿ ಎಂದರು.
ಮೈಸೂರು: ಸಿಎಂ ವಿಚಾರದಲ್ಲಿ ಇನ್ಮುಂದೆ ಯಾರೂ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ‘ನಿನ್ನೆ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೇನೆ. ಕಾಂಗ್ರೆಸ್ ಶಾಸಕರು ಮತ್ತು ಸಚಿವರಿಗೆ ಸೂಚಿಸಿದ್ದೇನೆ ಎಂದರು.
ಧಾರವಾಡ: ಜಿಲ್ಲೆಯ ಬಿಜೆಪಿಯ ಮತ್ತೊಬ್ಬ ನಾಯಕ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೌದು, ಕುಂದಗೋಳ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಚಿಕ್ಕನಗೌಡರ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರು ಮಾಜಿ ಸಿಎಂ ಯಡಿಯೂರಪ್ಪರ ಸಂಬಂಧಿಯಾಗಿದ್ದಾರೆ.
ಹಾವೇರಿ: ಬಿ.ಎಸ್ ಯಡಿಯೂರಪ್ಪ ವಿರುದ್ದ ಯತ್ನಾಳ್ ವಾಗ್ದಾಳಿ ಎಫೆಕ್ಟ್ನ್ನು ಕೆಎಸ್ ಈಶ್ವರಪ್ಪ ಅವರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಒಳ ಜಗಳದ ಬಗ್ಗೆ ಮಾತಾಡುತ್ತಾ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದಾದ ವೈಫಲ್ಯವನ್ನು ನೆನೆದಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತು, ಅದಕ್ಕೋಸ್ಕರ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ಚಿಕ್ಕಬಳ್ಲಾಫುರ: ರಾಜ್ಯ ಸರ್ಕಾರದ ಖಜಾನೆಯ ಕೀಲಿಕೈ ಒಂದು ವೇಣುಗೋಪಾಲ್ ಹಾಗೂ ಮತ್ತೊಂದು ಕಿ ಸುರ್ಜೆವಾಲ ಬಳಿ ಇದೆ ಎಂದು ಸಿಟಿ ರವಿ ಹೇಳಿದರು. ‘ದಸಾರದಲ್ಲಿ ಬಾಗಿಯಾಗಿದ್ದ ಕಲಾವಿದರ ಸಂಭಾವನೆ ನೀಡಲು ಇವರ ಬಳಿ ಹಣವಿಲ್ಲವೆ ಎಂದು ಶಿಡ್ಲಘಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಕೇವಲ ಒಂದೂವರೆ ತಿಂಗಳಲ್ಲಿಯೇ 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಪೂಜೆ ಸಲ್ಲಿಸುವ ಅರ್ಚಕನಿಂದ ದುರ್ಗಾದೇವಿ ಮೂರ್ತಿ ವಿರೂಪ ಹಿನ್ನೆಲೆ ಗ್ರಾಮದಲ್ಲಿ ಜನರ ಸಾವು ಆಗುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಬೆ
ಮೈಸೂರು: ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ? ಕಾಂತರಾಜ್ ವರದಿಯಲ್ಲಿ ಏನಿದೆ ಎಂಬುದೇ ನನಗೆ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡೋದು ಹೇಗೆ? ನವೆಂಬರೆ ಒಳಗೆ ಜಾತಿಗಣತಿ ವರದಿ ಕೊಡಬಹುದೆನೋ? ಕಾಂತರಾಜ್ ವರದಿಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರೋಧ ವಿಚಾರವಾಗಿ ಮಾತನಾಡಿದ ಅವರು ಕೆಎಸ್ ಈಶ್ವರಪ್ಪ ಒಬ್ಬ ಸವಕಲು ನಾಣ್ಯ. ಸವಕಲು ಎಂಬ ಕಾರಣಕ್ಕೆ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆಂಗಳೂರು: ಸಿಎಂ, ಸಚಿವರ ಉದ್ಧಟನದ ಹೇಳಿಕೆ ರಾಜ್ಯಕ್ಕೆ ಮಾರಕ ಆಗುತ್ತಿದೆ. ಜನರ ಒಳಿತಿಗಾಗಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು. ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರ ಯೋಚಿಸಬೇಕು. ಪ್ರಧಾನಿ ಜೊತೆ ಚರ್ಚಿಸಲು ಅಧಿಕಾರಿಗಳನ್ನಾದರೂ ಕಳಿಸಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಸರಿಯಾಗಿ ಸ್ಪಂದಿಸಿ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಹಣ ದೊರೆಯಲಿದೆ. ಬರದ ವಿಚಾರದಲ್ಲಾದರೂ ರಾಜಕೀಯ ಮಾಡುವುದನ್ನು ಬಿಡಬೇಕು ಕಾಂಗ್ರೆಸ್ ವಿರುದ್ಧ ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಬೆಂಗಳೂರು: ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ನಲ್ಲಿ ಇನ್ನೂ 8 ರಿಂದ 10 ಜನ ಮುಖ್ಯಮಂತ್ರಿ ಸಾಲಿನಲ್ಲಿ ನಿಂತಿದ್ದಾರೆ. ನನಗೂ ಡಿಸಿಎಂ ಸ್ಥಾನ ಕೊಡಿ ಅಂತಾ 18-20 ಜನ ಕಾಯ್ತಿದ್ದಾರೆ. ಈ ಪರಿಸ್ಥಿತಿ ದೇಶದ ಯಾವುದೇ ರಾಜ್ಯದಲ್ಲಿ ನೋಡಲು ಆಗಲ್ಲ. ಜಾತಿ ಗಣತಿ ವರದಿ ಸ್ವೀಕಾರಕ್ಕೆ ರಾಜ್ಯ ಸರ್ಕಾರ ಸಿದ್ಧತೆ ವಿಚಾರವಾಗಿ ಮಾತನಾಡಿದ ಅವರು ಲಿಂಗಾಯತರು, ಒಕ್ಕಲಿಗರು ಎಂಬ ಪ್ರಶ್ನೆ ಅಲ್ಲ ಎಲ್ಲಾ ವರ್ಗದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಯೋಚಿಸಬೇಕು. ಬೆಂಕಿ ಹಚ್ಚುವ ಕೆಲಸ ಮಾಡಿದರೆ ಜನ ಕ್ಷಮಿಸಲ್ಲ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಚಿಕ್ಕಬಳ್ಳಾಫುರ: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಪತನವಾಗುತ್ತೆ ಎಂಬುವ ರಮೇಶ ಜಾರಕಿಹೊಳೆ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೇಸ್ಗೆ ಅಜೀರ್ಣವಾಗುವಷ್ಟು ಬಹುಮತ ಇದೆ. ಇದು ಸಾಲದು ಅಂತ ಬೇರೆ ಬೇರೆ ಪಕ್ಷಗಳ ಶಾಸಕರ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಕಾಂಗ್ರೇಸ್ ಗೆ ಬೇರೆಯವರ ಹಂಗು ಯಾಕೆ? ಎಂದು ಮಾಜಿ ಸಚಿವ ಸಿಟಿ ರವಿ ಪ್ರಶ್ನಿಸಿದರು.
ಬೆಂಗಳೂರು: ಇನ್ಮುಂದೆ ಯಾರೂ ಸಿಎಂ ವಿಚಾರವಾಗಿ ನನ್ನ ಪ್ರಶ್ನೆ ಕೇಳಬೇಡಿ. ಸಿಎಂ ವಿಚಾರವಾಗಿ ನಾನು ಇನ್ಮುಂದೆ ಪ್ರತಿಕ್ರಿಯೆ ಕೊಡುವುದಿಲ್ಲ. ನಮ್ಮ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಜನರಿಗೆ ಕೊಟ್ಟ ಭರವಸೆಯನ್ನು ಚಾಚು ತಪ್ಪದೆ ಈಡೇರಿಸ್ತಿದ್ದೇವೆ. ಹೇಳಿದಂತೆ ನಡೆದುಕೊಂಡಿದ್ದಾರೆಂದು ಜನ ಸಂತೋಷವಾಗಿದ್ದಾರೆ. ಬೇರೆಯವರ ಹೇಳಿಕೆ ಅಷ್ಟೇನೂ ಜಾಸ್ತಿ ಎಫೆಕ್ಟ್ ಆಗುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ: ನಮ್ಮದು ಅಪ್ಪಟ ದೇಶ ಭಕ್ತರ ಪಾರ್ಟಿ. ಅವರು ಹೇಳುವ ಹಾಗೆ ಇಲ್ಲ. ನಾವು ಕೊಡುವಹಾಗಿಲ್ಲ. ಬಿಜೆಪಿ ಕಾಂಗ್ರೇಸ್ ಎಣ್ಣೆ ಸೀಗೆಕಾಯಿ ಇದ್ದಂತೆ. ಡಿ.ಕೆ ಶಿವಕುಮಾರ್ ಕಾಂಗ್ರೇಸ್ ಬಿಟ್ಟು ಬಂದ್ರೆ ಬಿಜೆಪಿ ಯೋಚನೆ ಮಾಡುತ್ತೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆದರೆ ನಾವು ಬೆಂಬಲ ಕೊಡುತ್ತೇವೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ಸುಮ್ಮನೇ ನಾಟಕೀಯ ಹೇಳಿಕೆ ಇದು. ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಯಾರೂ ಗೊಂದಲ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಬೆಂಗಳೂರು: ವಿಪಕ್ಷ ನಾಯಕರಾಗುವುದಕ್ಕೆ ಬಿಜೆಪಿಯವರೆಲ್ಲಾ ಅಸಮರ್ಥರಾ? ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಸುನೀಲ್ ಕುಮಾರ್, ಯತ್ನಾಳ್ ಇವರೆಲ್ಲರೂ ಅಸಮರ್ಥರಾ? ಇವರಿಗೆ ವಿರೋಧ ಪಕ್ಷದ ನಾಯಕನಾಗುವ ಸಾಮರ್ಥ್ಯ ಇಲ್ವಾ? ಈಗ ಹೆಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಅಂತ ಬಿಂಬಿಸಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಚಿಕ್ಕೋಡಿ: ಭೀಕರ ಬರಗಾಲ ಮಧ್ಯೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಡ್‌ಶೆಡ್ಡಿಂಗ್‌ನಿಂದ ತರಕಾರಿ ಬೆಳೆಯುವ ಸಣ್ಣಪುಟ್ಟ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಹೊಲದಲ್ಲಿ ಬೋರ್‌ವೆಲ್ ಇದ್ದರೂ ನೀರು ಬಳಸದ ಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ ನಿರಂತರ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ರೈತ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ನಗರದ ಶಂಕರಮಠ ಮುಂಭಾಗ ಧರ್ಮಸಭೆ ನಡೆಸಲು ತೀರ್ಮಾನಿಸಲಾಗಿದೆ. ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಗಂಗಾಧರ್ ಕುಲಕರ್ಣಿ ಸೇರಿದಂತೆ ಸಾವಿರಾರು ಶ್ರೀ ರಾಮ ಸೇನೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಧರ್ಮಸಭೆ ನಡೆಸಲಿದ್ದಾರೆ. ಧರ್ಮ ಸಭೆ ಬಳಿಕ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಲಿದೆ.
ಬೆಂಗಳೂರು: ಯಾರಾದರು ಶಾಸಕರು ನನ್ನ ಪರವಾಗಿ ಮಾತನಾಡಿದರೇ ನೋಟಿಸ್ ನೀಡುವೆ. ಪಕ್ಷದಲ್ಲಿ ಒಂದು ಶಿಸ್ತು ಇರಬೇಕು. ನನಗೆ ಯಾವ ಶಾಸಕರ ಬೆಂಬಲವೂ ಬೇಡ, ಯಾವ ಶಾಸಕರೂ ಬೇಡ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ಗೆ ನೋಟಿಸ್ ಕೊಡಬೇಕೆಂದುಕೊಂಡಿದ್ದೇನೆ. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ. ಐ ಡೋಂಟ್ ವಾಂಟ್ ಏನೀ ರೆಕಮೆಂಡೇಶನ್ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಮಂಡ್ಯ: ಡಿ.ಕೆ.ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿ ಆಗುವ ಅರ್ಹತೆ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಸೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಬರಲು ಡಿ.ಕೆ.ಶಿವಕುಮಾರ್ ಕಾರಣ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಗಾಗಿ ಡಿಕೆ ಶಿವಕುಮಾರ್ ಸಾಕಷ್ಟು ದುಡಿದಿದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಬೇಕೆಂಬುದು ನನ್ನ ಆಸೆಯಾಗಿದೆ. ಡಿ.ಕೆ.ಶಿವಕುಮಾರ್ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಪಕ್ಷವನ್ನು ಉಳಿಸಿ ಬೆಳೆಸಬೇಕೆಂಬ ಸಾಕಷ್ಟು ಇಚ್ಛಾಶಕ್ತಿ ಇದೆ. ಮುಖಂಡರು ಹಾಗೂ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿದರೇ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗುತ್ತೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆರಂಭವಾಗಿದೆ. ನವೆಂಬರ್ 7 ರಂದು ಬೆಳಗಾವಿಗೆ ಸಭಾಪತಿ ಭೇಟಿ ನೀಡಿ, ಸುವರ್ಣ ವಿಧಾನಸೌಧದಲ್ಲಿ ಸಿದ್ಧತೆ ಪರಿಶೀಲಿಸಲಿದ್ದಾರೆ. ಬಳಿಕ ನ.7ರಂದು ಅಧಿಕೃತವಾಗಿ ಅಧಿವೇಶನದ ದಿನಾಂಕ ಘೋಷಣೆ ಮಾಡಲಿದ್ದಾರೆ. ಊಟ, ವಸತಿ, ಇಂಧನ, ಮುದ್ರಣ, ವಾಹನ ಸೇರಿ 10 ಸಮಿತಿಗಳನ್ನು ರಚನೆ ಮಾಡಲಾಗಿದೆ. ಯಶಸ್ವಿ ಅಧಿವೇಶನಕ್ಕೆ ಡಿಸಿ ನಿತೇಶ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡದಿಂದ ಸಿದ್ಧತೆ ಕೈಗೊಳ್ಳುತ್ತಿದೆ. ಜಿಲ್ಲಾಡಳಿತ ಕಳೆದ ವರ್ಷ ಸರ್ಕಾರಕ್ಕೆ ಎರಡೂವರೆ ಕೋಟಿ ಉಳಿತಾಯ ಮಾಡಿತ್ತು.
ಚಿಕ್ಕಮಗಳೂರು: ದತ್ತಮಾಲೆ ಧರಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು (ನ.05) ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ
Published On - 8:10 am, Sun, 5 November 23