Karnataka Breaking Kannada News Highlights: ಪಟಾಕಿ ಗೋಡೌನ್ ಅಗ್ನಿ ದುರಂತದಲ್ಲಿ 12 ಜನ ಸಜೀವದಹನ: SP ಮಲ್ಲಿಕಾರ್ಜುನ್ ಹೇಳಿದ್ದಿಷ್ಟು
Breaking News Today Highlights Updates: ವೀರಶೈವ ಲಿಂಗಾಯತ ಸಮುದಾಯ ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್, BJPಯಲ್ಲಿರುವ ಗುರು-ವಿರಕ್ತರು, ಸಮಾಜದ ನಾಯಕರನ್ನು ಒಂದೇ ವೇದಿಕೆಗೆ ತರಲು ಸಂಕಲ್ಪ ಮಾಡಲಾಗಿದ್ದು ಡಿ.23 ಮತ್ತು 24ರಂದು ದಾವಣಗೆರೆಯಲ್ಲಿ ಮಹಾಸಭೆಯ ಮಹಾಅಧಿವೇಶನ ಆಯೋಜನೆ ಮಾಡಲಾಗಿದೆ. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ಶುರುವಾಗಿದೆ. 10 ತಲೆಯ ರಾಹುಲ್ ಪೋಸ್ಟರ್ ಹಂಚಿಕೊಂಡಿದ್ದ ಬಿಜೆಪಿ, ರಾಹುಲ್ ಗಾಂಧಿಯನ್ನ ರಾವಣ ಎಂದು ಬಿಂಬಿಸಿ ಪೋಸ್ಟ್ ಹಾಕಿದೆ. ಇದಕ್ಕೆ ಟ್ವೀಟ್‌ನಲ್ಲಿ ಟಕ್ಕರ್ ಕೊಟ್ಟಿರೋ ಕಾಂಗ್ರೆಸ್ ಜುಮ್ಲಾಬಾಯ್ ಮೋದಿ ಅಂತಾ ಪೋಸ್ಟರ್ ಶೇರ್ ಮಾಡಿದೆ. ಜೊತೆಗೆ ಅದಾನಿ ಎಂಬ ಬರಹ ಬರೆದು, ಮೋದಿ, ಅದಾನಿಯ ಕೀಲುಗೊಂಬೆ ಅಂತಾ ತಿರುಗೇಟು ನೀಡಿದೆ. ಮತ್ತೊಂದೆಡೆ ವೀರಶೈವ ಲಿಂಗಾಯತ ಸಮುದಾಯ ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್, BJPಯಲ್ಲಿರುವ ಗುರು-ವಿರಕ್ತರು, ಸಮಾಜದ ನಾಯಕರನ್ನು ಒಂದೇ ವೇದಿಕೆಗೆ ತರಲು ಸಂಕಲ್ಪ ಮಾಡಲಾಗಿದ್ದು ಡಿ.23 ಮತ್ತು 24ರಂದು ದಾವಣಗೆರೆಯಲ್ಲಿ ಮಹಾಸಭೆಯ ಮಹಾಅಧಿವೇಶನ ಆಯೋಜನೆ ಮಾಡಲಾಗಿದೆ. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೂ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಜೋರಾಗಿದೆ. ಯುವ ಸಂಭ್ರಮ ಕಾರ್ಯಕ್ರಮಕ್ಕೆ ಸಚಿವ ಮಹದೇವಪ್ಪ ಚಾಲನೆ ನೀಡಿದ್ದಾರೆ.
LIVE NEWS & UPDATES
-
Karnataka Breaking News Live: ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು: ಮಾಜಿ ಸಿಎಂ ಬೊಮ್ಮಾಯಿ
ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿ ನಡೆದ ಪಟಾಕಿ ದುರಂತದಲ್ಲಿ 13 ಜನ ಕಾರ್ಮಿಕರು ಸಜೀವ ದಹನವಾಗಿರುವ ಸುದ್ದಿ ಕೇಳಿ ಮನಸಿಗೆ ಅತ್ಯಂತ ಆಘಾತವಾಗಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ದೊರಕಿಸಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿ ನಡೆದ ಪಟಾಕಿ ದುರಂತದಲ್ಲಿ 13 ಜನ ಕಾರ್ಮಿಕರು ಸಜೀವ ದಹನವಾಗಿರುವ ಸುದ್ದಿ ಕೇಳಿ ಮನಸಿಗೆ ಅತ್ಯಂತ ಆಘಾತವಾಗಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ದೊರಕಿಸಲಿ. ಸರ್ಕಾರ ಇಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ಸೂಕ್ತ ತನಿಖೆ ನಡೆಸಬೇಕು.…
— Basavaraj S Bommai (@BSBommai) October 7, 2023
-
Karnataka Breaking News Live: ಪಟಾಕಿ ಅಂಗಡಿಗೆ ಬೆಂಕಿ ಪ್ರತ್ಯಕ್ಷದರ್ಶಿ ಹೇಳಿದ್ದೇನು?
-
-
Karnataka Breaking News Live: ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡೌನ್ ಅಗ್ನಿ ದುರಂತದಲ್ಲಿ 12 ಜನ ಸಜೀವದಹನವಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ.
-
Karnataka Breaking News Live: ರಾಜ್ಯದ 122 ಕೇಂದ್ರದ ಡಯಾಲಿಸಿಸ್ ಯಂತ್ರಗಳು ಸ್ಥಗಿತವಾಗಿವೆ
ರಾಜ್ಯದ 122 ಕೇಂದ್ರದ ಡಯಾಲಿಸಿಸ್ ಯಂತ್ರಗಳು ಸ್ಥಗಿತವಾಗಿವೆ. ಅ.1ರಿಂದ ಎಸ್.ಕೆ.ಸಂಜೀವಿನಿ ಸೇವೆ ನಿಲ್ಲಿಸುತ್ತೇವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೊಸ ಯಂತ್ರ ಇಲ್ಲ, ದುರಸ್ತಿಯೂ ಆಗದೆ ರೋಗಿಗಳಿಗೆ ಸಂಕಷ್ಟವಾಗಿದೆ. ರೋಗಿಗಳ ಡಯಾಲಿಸಿಸ್ ಬಿಲ್ ಸರ್ಕಾರವೇ ನೀಡಬೇಕು. ರಾಜ್ಯ ವಿನಂತಿ ಮಾಡಿದರೆ ಕೇಂದ್ರ ಸಹಕಾರ ಮಾಡುತ್ತದೆ. ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
-
Karnataka Breaking News Live: ನಾನಿಲ್ಲಿ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ
ನಾನಿಲ್ಲಿ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ, ಶಾಸಕನಾಗಿಯೂ ಬಂದಿಲ್ಲ, ಈ ಊರಿನ ಸದಸ್ಯನಾಗಿ ಬಂದಿದ್ದೇನೆ. ಅಧಿಕಾರದಲ್ಲಿ ಯಾವತ್ತೂ ನನ್ನ ಕ್ಷೇತ್ರಕ್ಕೆ ಬರಲು ಇಷ್ಟ ಇಲ್ಲ. ನನ್ನನ್ನ ಸಾಕಿದ್ದೀರಿ, ಬೆಳಸಿದ್ದೀರಿ ಎಂದು ಹಾರೋಬೆಲೆ ಗ್ರಾಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
-
-
Karnataka Breaking News Live: ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ
ಭಾರತದಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಮಂದಿ ಹಿಂದುಗಳಿದ್ದೇವೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಭೆಯಲ್ಲಿ ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ. ಗಣಪತಿ ಮೂರ್ತಿ ಕೂರಿಸಲು ಕಾಂಗ್ರೆಸ್ ಬಹಳ ನಿರ್ಬಂಧ ಹಾಕುತ್ತೆ. ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದಿದ್ದಾರೆ.
-
Karnataka Breaking News Live: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಸ್ಥಾನ ಗೆಲ್ಲುವುದು ನಿಶ್ಚಿತ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಬಂಕಾಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಲೋಸಕಭಾ ಚುನಾವಣೆಗೆ ಕೇಂದ್ರ ಸಚಿವ ಜೋಶಿ, ಬೊಮ್ಮಾಯಿ, ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ ಎಂದು ಹೇಳಿದ್ದಾರೆ.
-
Karnataka Breaking News Live: ಜೆಡಿಎಸ್ನ ಮುಖಂಡರಿಗೆ ಚೆಲುವರಾಯ ಸ್ವಾಮಿ ಖಡಕ್ ಟಾಂಗ್
-
Karnataka Breaking News Live: ಮೈಸೂರಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಾಕ್ಷ್ಯಚಿತ್ರ ಬಿಡುಗಡೆ
69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮೈಸೂರಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗಿದೆ. ಮೈಸೂರು ನಗರ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಮಾಡಲಾಗಿದೆ. ಇದೇ ವೇಳೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಅಂಚೆ ಲಕೋಟೆ ಹಾಗೂ ತಾಂತ್ರಿಕ ವರದಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ಬಿಡುಗಡೆ ಮಾಡಿದ್ದಾರೆ.
-
Karnataka Breaking News Live: ಇಸ್ರೇಲ್ನಲ್ಲಿ ಯುದ್ಧ: ಕರಾವಳಿ ಜನರು ಸೇಫ್
ಮಂಗಳೂರು: ಇಸ್ರೇಲ್ನಲ್ಲಿ ಯುದ್ಧ ಮುಂದುವರೆದಿದ್ದು, ಬಾಂವ್ಗಳ ಸದ್ದಿಗೆ ನಿವಾಸಿಗಳು ಬೆಚ್ಚಿ ಬಿದಿದ್ದಾರೆ. ಭಾರತೀಯರು ವಾಸಿಸುವ ಪ್ರದೇಶಗಳ ಬಳಿ ಕೂಡ ಬಾಂಬ್ ಸ್ಪೋಟ ಮಾಡಲಾಗಿದೆ. ಸದ್ಯಕ್ಕೆ ಭಾರತೀಯರು ಸೇಫ್ ಎನ್ನಲಾಗುತ್ತಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ ದಾಳಿ: ಸದ್ಯಕ್ಕೆ ಕರಾವಳಿಯ ಜನರು ಸೇಫ್
-
Karnataka Breaking News Live: ಮೈಸೂರಿನಲ್ಲಿ 69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ
ಮೈಸೂರಿನಲ್ಲಿ 69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಖಂಡ್ರೆ, ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ದರ್ಶನ್ ಧ್ರುವನಾರಾಯಣ್, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಡಾ.ತಿಮ್ಮಯ್ಯ ಭಾಗಿ ಆಗಿದ್ದಾರೆ.
-
Karnataka Breaking News Live: ಬಾರ್ ಲೈಸನ್ಸ್ ವಿಚಾರದಲ್ಲಿ ಸಿಎಂ,ಡಿಸಿಎಂ ದ್ವಂದ್ವ ಹೇಳಿಕೆ
ರಾಜ್ಯದಲ್ಲಿ ಸಿಎಂ ಇದಾರೋ ಅಥವಾ ಸೂಪರ್ ಸಿಎಂ ಇದಾರೋ ಎನ್ನೊದು ತಿಳಿತ್ತಿಲ್ಲ. ಇದರ ದುಷ್ಪರಿಣಾಮ ಜನರ ಮೇಲೆ ಬಿಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
-
Karnataka Breaking News Live: ಜೆಡಿಎಸ್ ಪಕ್ಷ ಯಾವತ್ತೂ ಚುನಾವಣಾ ಪೂರ್ವ ಮೈತ್ರಿಗೆ ಹೋಗಿಲ್ಲ
ಜೆಡಿಎಸ್ ಪಕ್ಷ ಯಾವತ್ತೂ ಚುನಾವಣಾ ಪೂರ್ವ ಮೈತ್ರಿಗೆ ಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಹೀನಾಯವಾಗಿದೆ. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿಯವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
-
Karnataka Breaking News Live: SC, ST ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ಸಂಪುಟ ಉಪಸಮಿತಿ ರಚನೆ
SC, ST ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ಸಂಪುಟ ಉಪಸಮಿತಿ ರಚನೆ ಮಾಡಲಾಗಿದ್ದು, ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿ ಡಾ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ನಾಗೇಂದ್ರ, ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ ನೇಮಕ ಮಾಡಲಾಗಿದೆ.
-
Karnataka Breaking News Live: ರಸ್ತೆ ಗುಂಡಿ ಮುಚ್ಚಲು ಸೂಚನೆ: ಡಿ.ಕೆ.ಶಿವಕುಮಾರ್
ಒತ್ತುವರಿ ತೆರವು ಮಾಡುವುದನ್ನು ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
-
Karnataka Breaking News Live: ಸಿಎಂ ಭಾಷಣದ ವೇಳೆ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದ ವ್ಯಕ್ತಿ
ಭಾಷಣದ ವೇಳೆ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವ್ಯಕ್ತಿ ಓರ್ವ ಹೇಳಿದ್ದು, ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಏನೂ ಇಲ್ಲ. ರೈತರ ಮಕ್ಕಳಿಗೆ ಎಲ್ಲರೂ ಹೆಣ್ಣು ಕೊಡುತ್ತಾರೆ. ಸುಮ್ಮನೆ ಏನೇನೋ ಮಾತಾಡಬಾರದು. ಹಾಗಾದರೆ ರೈತರ ಹೆಣ್ಣು ಮಕ್ಕಳು, ಗಂಡು ಮಕ್ಕಳು ಮದುವೆನೇ ಆಗಿಲ್ವಾ? ನಾನು ಮದ್ವೆ ಆಗಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
-
Karnataka Breaking News Live: ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದ ಕಡೆಗಣನೆಯೂ ಆಗಿಲ್ಲ -ಈಶ್ವರ ಖಂಡ್ರೆ
ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗಿಲ್ಲ ಎಂದು ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದ ಕಡೆಗಣನೆಯೂ ಆಗಿಲ್ಲ. ಸಮುದಾಯವನ್ನು ಕಡೆಗಣಿಸುವುದಕ್ಕೆ ಸಿಎಂ ಅವಕಾಶವೂ ಕೊಡಲ್ಲ. ಈ ಮಾತನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ. ಎಲ್ಲಾ ಯೋಜನೆಗಳು ಜಾತಿರಹಿತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ಸಿದ್ದರಾಮಯ್ಯ ಬಸವಣ್ಣನ ತತ್ವ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರವನ್ನು ಕಡ್ಡಾಯಗೊಳಿಸಿದ್ದಾರೆ ಎಂದರು.
-
Karnataka Breaking News Live: ಕಾಫಿನಾಡ ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವಿನ ಸೆರೆ
ಕಾಫಿನಾಡ ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವಿನ ಸೆರೆ ಹಿಡಿಯಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇದು ಕಂಡುಬರಲಿದ್ದು ಅಳಿವಿನಂಚಿನಲ್ಲಿದೆ. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದು. ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಮನೆಯ ಅಂಗಳದಲ್ಲಿ ಬ್ಯಾಂಬೋ ಪಿಟ್ ವೈಫರ್ ಕಂಡು ಬಂದಿದೆ. ಈ ಹಾವು ಕಡಿದರೆ ಸಾಯುವುದಿಲ್ಲ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ.
ಬ್ಯಾಂಬೋ ಪಿಟ್ ವೈಫರ್
-
Karnataka Breaking News Live: ಲಿಂಗಾಯತ ಅಧಿಕಾರಿಗಳ ಕಡೆಗಣನೆ ಅನ್ನೋದು ಏನೂ ಇಲ್ಲ -ರಾಮಲಿಂಗಾರೆಡ್ಡಿ
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಲಿಂಗಾಯತ ಸಮುದಾಯ ಕೂಡ ಈ ಬಾರಿ ಹೆಚ್ಚು ಮತ ನೀಡಿದೆ. ಒಕ್ಕಲಿಗರು, ಬ್ರಾಹ್ಮಣರು, ಜೈನರು, ಬೌದ್ಧರು, ಒಬಿಸಿ ಸೇರಿದಂತೆ ಎಲ್ಲ ಸಮುದಾಯದವರೂ ಮತ ನೀಡಿದ್ದಕ್ಕೆ ಅಧಿಕಾರಕ್ಕೆ ಬಂದಿದ್ದೇವೆ. ಲಿಂಗಾಯತ ಅಧಿಕಾರಿಗಳ ಕಡೆಗಣನೆ ಅನ್ನೋದು ಏನೂ ಇಲ್ಲ. ಶಾಮನೂರು ಶಿವಶಂಕರಪ್ಪ ಹಿರಿಯ ನಾಯಕರು. ಲೋಪದೋಷ ಇದ್ದರೆ ಸಿಎಂ ಜೊತೆ ಚರ್ಚಿಸಿ ಸರಿಪಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
-
Karnataka Breaking News Live: ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ-ಡಿಸಿಎಂ
ಬೆಂಗಳೂರು ಜನರಿಗೆ ಯಾವುದೇ ಹೊಸ ಟ್ಯಾಕ್ಸ್ ಹಾಕುವುದಿಲ್ಲ ಎಂದು ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇರುವ ಟ್ಯಾಕ್ಸ್ ಸರಿಯಾಗಿ ಕಟ್ಟಬೇಕು. ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಎಲ್ಲವನ್ನೂ ನೋಡಬೇಕು, ಸ್ಟ್ರೀಮ್ ಲೈನ್ ಮಾಡಲು ಪ್ರಯತ್ನ ಮಾಡ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.
-
Karnataka Breaking News Live: ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಅವಕಾಶವಿಲ್ಲ -ಸಿದ್ದರಾಮಯ್ಯ
ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗೆ ಅವಕಾಶವಿಲ್ಲ. ಡಿಕೆ ಶಿವಕುಮಾರ್ ಅವರದ್ದು ಅಭಿಪ್ರಾಯ ಅಷ್ಟೇ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹೊಸ ಬಾರ್ ಲೈಸೆನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಡಿ.ಕೆ ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ. ಸದ್ಯಕ್ಕೆ ಆ ವಿಚಾರದಲ್ಲಿ ಯಾವ ಚರ್ಚೆಗಳು ಬೇಡ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಹೊಸ ಲೈಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
-
Karnataka Breaking News Live: ಶಿವಮೊಗ್ಗದ ರಾಗಿಗುಡ್ಡದಲ್ಲಿ 7ನೇ ದಿನವೂ ಮುಂದುವರಿದ ನಿಷೇಧಾಜ್ಞೆ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದ ರಾಗಿಗುಡ್ಡದಲ್ಲಿ 7ನೇ ದಿನವೂ ನಿಷೇಧಾಜ್ಞೆ ಮುಂದುವರಿದಿದೆ. ಇಂದು ಕೂಡ ರಾಗಿಗುಡ್ಡದಲ್ಲಿ ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ನೀಡಲಾಗಿದೆ. ಪೊಲೀಸರು ಹಂತ ಹಂತವಾಗಿ ನಿಷೇಧಾಜ್ಞೆ ಸಡಿಲಿಕೆ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಈವರೆಗೆ 61 ಜನರ ಬಂಧನ, 24 FIR ದಾಖಲಾಗಿದೆ.
-
Karnataka Breaking News Live: ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಅಪಘಾತ
ಬೆಂಗಳೂರಿನ ಮಹಾರಾಣಿ ಕಾಲೇಜ್ ಆವರಣದಲ್ಲಿ ಕಾರು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂಗ್ಲಿಷ್ ಪ್ರೊಫೆಸರ್ ನಾಗರಾಜ್ ಅನ್ನೋರ ಕಾರು ಬಿಕಾಂ ವಿದ್ಯಾರ್ಥಿನಿ ಅಶ್ವಿನಿ ಸೇರಿ ಮತ್ತೋರ್ವ ವಿದ್ಯಾರ್ಥಿನಿ ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿ ಅನ್ನೋರಿಗೂ ಡಿಕ್ಕಿ ಹೊಡೆದಿದೆ.
-
Karnataka Breaking News Live: ಕೆಎಸ್ಆರ್ಟಿಸಿ ಪಲ್ಲಕ್ಕಿ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಪಲ್ಲಕ್ಕಿ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಪಲ್ಲಕ್ಕಿ ಉತ್ಸವ ಹೆಸರಿನ 40 ನಾನ್ ಎಸಿ ಸ್ಲೀಪರ್ ಬಸ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಒಟ್ಟು 148 ಬಸ್ಗಳಿಗೆ ಚಾಲನೆ ನೀಡಲಾಗಿದ್ದು 148 ಬಸ್ಸುಗಳ ಪೈಕಿ 100 ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, 44 ಎಸಿ ಸ್ಲೀಪರ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. 4 ನಾನ್ ಎಸಿ ಸ್ಲೀಪರ್ ಬಸ್ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.
-
Karnataka Breaking News Live: ಮಿಷನ್ ಗಗನಯಾನಗೆ ಸಿದ್ಧತೆ ಶುರು ಮಾಡಿದ ಇಸ್ರೋ
ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಇಸ್ರೋದಿಂದ ಮತ್ತೊಂದು ಯೋಜನೆಗೆ ಸಿದ್ಧತೆ ನಡೆದಿದೆ. ಮಿಷನ್ ಗಗನಯಾನಗೆ ಇಸ್ರೋ ಸಿದ್ಧತೆ ಶುರು ಮಾಡಿದೆ. ಗಗನಯಾನ ಮಿಷನ್‌ಗಾಗಿ ಇಸ್ರೋ ಮಾನವರಹಿತ ಹಾರಾಟದ ಪರೀಕ್ಷೆಯನ್ನು ಪ್ರಾರಂಭಿಸಿದೆ. ಮಿಷನ್ ಗಗನಯಾನ ಮಾನವರಹಿತ ಯೋಜನೆಯಾಗಿದೆ. ಗಗನಯಾನಗೆ ಕ್ರ್ಯೂ ಎಸ್ಕೇಪ್ ಸಿಸ್ಟಮ್‌ನ ಪರೀಕ್ಷೆ ನಡೆಸಲು ಇಸ್ರೋ ವಿಜ್ಞಾನಿಗಳು ಮುಂದಾಗಿದ್ದಾರೆ.
-
Karnataka Breaking News Live: ಶ್ರೀರಂಗಪಟ್ಟಣದ ದಸರೆಯ ಹೊಣೆ ಮಹೇಂದ್ರ ಹೆಗಲಿಗೆ ಬಹುತೇಕ ಖಚಿತ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2023 ಅಂಗವಾಗಿ ಶ್ರೀರಂಗಪಟ್ಟಣದ ದಸರೆಯ ಹೊಣೆ ಮಹೇಂದ್ರ ಹೆಗಲಿಗೆ ಏರುವುದು ಬಹುತೇಕ ಖಚಿತವಾಗಿದೆ. 41 ವರ್ಷದ ಮಹೇಂದ್ರ ಆನೆ ಎರಡನೇ ಬಾರಿ ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊರಲಿದೆ. ಮಹೇಂದ್ರ ಆನೆಗೆ ವರಲಕ್ಷ್ಮೀ, ವಿಜಯಾ ಸಾಥ್ ನೀಡಲಿದ್ದಾರೆ. ಯದುವಂಶದ ಪ್ರಮೋದಾದೇವಿ ಒಡೆಯರ್ ಅವರು ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಲಿದ್ದಾರೆ.
-
Karnataka Breaking News Live: ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದವನ ಬಂಧನ
ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದ ವಿನಯ್ ಎಂಬಾತನನ್ನು ಬೆಂಗಳೂರು ಗ್ರಾ. ಜಿಲ್ಲೆ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ನ 150ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕನಂತೆ ನಿಲ್ಲುತ್ತಿದ್ದ ಆರೋಪಿ ವಿನಯ್, ಬಸ್ ಹತ್ತುತ್ತಿದ್ದವರ ಬಳಿ ಮೊಬೈಲ್, ಪರ್ಸ್ ಕದಿಯುತ್ತಿದ್ದ. ಆರೋಪಿ ಬಂಧಿಸಿ 150ಕ್ಕೂ ಹೆಚ್ಚು ಮೊಬೈಲ್ ಜಪ್ತಿ ಮಾಡಲಾಗಿದೆ.
-
Karnataka Breaking News Live: ಮಹಿಳಾ ಪ್ರಯಾಣಿಕರ ಎಡವಟ್ಟಿಗೆ ಕೆಲಸ ಕಳೆದುಕೊಳ್ಳುತ್ತಿರುವ ನಿರ್ವಾಹಕರು
ಶಕ್ತಿ ಯೋಜನೆ ಜಾರಿಯದ ಬಳಿಕ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮ ಸೇರಿ ಒಟ್ಟು 300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿದೆ.
ಶಕ್ತಿ ಯೋಜನೆ ಜಾರಿ ಬಳಿಕ 300 ಜನ ಕಂಡಕ್ಟರ್ಸ್ ಸಸ್ಪೆಂಡ್#KSRTC @siddaramaiah @RLR_BTM @BJP4Karnataka @DKShivakumar @BSBommai https://t.co/NSj4rGLi0I
— TV9 Kannada (@tv9kannada) October 7, 2023
-
Karnataka Breaking News Live: ಹಿಂದೂ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ FIR ದಾಖಲು
ಹಿಂದೂ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ FIR ದಾಖಲಾಗಿದೆ. ನಿನ್ನೆ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಅರುಣ್ಕುಮಾರ್ ಪುತ್ತಿಲ, ನಿಷೇಧಾಜ್ಞೆ ನಡುವೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ.
-
Karnataka Breaking News Live: ಹಣ ವರ್ಗಾವಣೆ ಜಾಡುಹಿಡಿದ ಸಿಐಡಿ ಎಸ್‌ಐಟಿಯಿಂದ ಮತ್ತಿಬ್ಬರ ಬಂಧನ
ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್‌ಮಾಡಿ 11.5ಕೋಟಿ ವಂಚನೆ ಕೇಸ್ಗೆ ಸಂಬಂಧಿಸಿ ಹಣ ವರ್ಗಾವಣೆ ಜಾಡುಹಿಡಿದ ಸಿಐಡಿ ಎಸ್‌ಐಟಿಯಿಂದ ಮತ್ತಿಬ್ಬರ ಬಂಧನವಾಗಿದೆ. ನಾಗಪುರದ ನಿತಿನ್ ಮೆಶ್ರಾಮ್, ದರ್ಶಿತ್ ಪಟೇಲ್ ಬಂಧಿತ ಆರೋಪಿಗಳು. ಹ್ಯಾಕರ್ ಶ್ರೀಕಿ ಜೊತೆ ಬಂಧಿತ ಆರೋಪಿಗಳಿಗೆ ನಂಟಿತ್ತು. ಶ್ರೀಕಿ ವೆಬ್‌ಸೈಟ್ ಹ್ಯಾಕ್ ಮಾಡಿ 11.5 ಕೋಟಿ ರೂಪಾಯಿ ಲೂಟಿ ಮಾಡಿದ್ದ. ಆ ಹಣವನ್ನು ಉತ್ತರ ಭಾರತದ ಕೆಲ ವ್ಯಕ್ತಿಗಳ ಖಾತೆಗೆ ಹಾಕಿದ್ದ.
-
Karnataka Breaking News Live: ಮಹಿಳಾ ಪ್ರಯಾಣಿಕರ ಎಡವಟ್ಟಿಗೆ ಕಂಡಕ್ಟರ್ಗಳಿಗೆ ಶಿಕ್ಷೆ!
ಸರಕಾರದ ಉಚಿತ ಬಸ್ ಗ್ಯಾರಂಟಿಯಿಂದ ಕಂಡಕ್ಟರ್ಗಳಿಗೆ ಕುತ್ತು. ಮಹಿಳಾ ಪ್ರಯಾಣಿಕರ ಎಡವಟ್ಟಿಗೆ ಕಂಡಕ್ಟರ್ಗಳಿಗೆ ಶಿಕ್ಷೆ. ಇದುವರೆಗೂ ರಾಜ್ಯದಲ್ಲಿ 300ಕ್ಕೂ ಅಧಿಕ ಮಂದಿ ನಿರ್ವಾಹಕರು ಸಸ್ಪೆಂಡ್ ಆಗಿದ್ದಾರೆ. ಅನೇಕ ಪ್ರಯಾಣಿಕರು ಟಿಕೆಟ್ ಪಡೆದು ನಿಗದಿತ ನಿಲ್ದಾಣಕ್ಕೂ ಮೊದಲೇ ಇಳಿದಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಣೆಗೆ ಬಂದಾಗ ಕಂಡಕ್ಟರ್ಗಳು ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ತಪ್ಪು ಮಾಹಿತಿ ನೀಡಿದ್ದಾರೆ ಅನ್ನೋ ಆರೋಪದಡಿ ನಿರ್ವಾಹಕರು ಸಸ್ಪೆಂಡ್ ಆಗುತ್ತಿದ್ದಾರೆ.
-
Karnataka Breaking News Live: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾವೇರಿ ನೀರಿಗಾಗಿ ನಿರಂತರ ಧರಣಿ ನಡೆಸುತ್ತಿದೆ. ಇಂದು ಕೂಡ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹೋರಾಟ ನಡೆಯಲಿದೆ. ಇಂದಿನ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಶ್ರೀರಂಗಪಟ್ಟಣದಲ್ಲೂ ಭೂಮಿತಾಯಿ ಹೋರಾಟ ಸಮಿತಿಯಿಂದ ಹೋರಾಟ ಮುಂದುವರೆದಿದೆ.
-
Karnataka Breaking News Live: ಮೈಸೂರಿಗೆ ಸಿಎಂ ಭೇಟಿ
ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಲಾಗಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಸಂಘ, ಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟದಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ಮೈಸೂರಿನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ#Siddaramaiah #BasavaJayanti #Lingayatcommunity #mysorehttps://t.co/cFDoNKitf0
— TV9 Kannada (@tv9kannada) October 7, 2023
-
Karnataka Breaking News Live: ಬಾಗಲಕೋಟೆ ಜಿಲ್ಲೆಗೆ ಇಂದು ಕೇಂದ್ರ ಬರ ಅಧ್ಯಯನ ತಂಡ ಭೇಟಿ
ಬಾಗಲಕೋಟೆ ಜಿಲ್ಲೆಗೆ ಇಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಚಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಲಿದೆ. ಬಾಗಲಕೋಟೆ, ಹುನಗುಂದ, ಬಾದಾಮಿ ತಾಲೂಕಿನಲ್ಲಿ ಬರ ಅಧ್ಯಯನ ಮಾಡಲಿದೆ. ತಂಡ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲಿದೆ.
Published On - Oct 07,2023 7:57 AM