ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿರುವ ನಡುವೆಯೇ ಮತ್ತೆ ಕಾವೇರಿ ನೀರು ವಿಚಾರವಾಗಿ ಕಂಟಕ ಎದುರಾಗಿದೆ. ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿತ್ತು. ಕಾವೇರಿ ನೀರು ನಿರ್ವಹಣ ಸಭೆಯಲ್ಲಿ ಮುಂದಿನ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಇದರಿಂದ ಕಾವೇರಿ ತೀರದ ರೈತರು ಆಕ್ರೋಶಗೊಂಡಿದ್ದು, ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇನ್ನು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ನಾಳೆ (ಆ.30) ಚಾಲನೆ ದೊರೆಯಲಿದೆ. ಈ ಸಂಬಂಧ ಸಿದ್ದತೆ ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈಸೂರು ಜಿಲ್ಲೆ ಪ್ರವಾಸದಲ್ಲಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್ ಇಲ್ಲಿದೆ…
ಮೈಸೂರು: ಕೋರ್ಟ್‌ನಲ್ಲಿ ವಕೀಲರಿಂದ ಸಿಎಂಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಈ ವೇಳೆ ತಮ್ಮ ವಕೀಲ ವೃತ್ತಿಯ ಅನುಭವ ಬಿಚ್ಚಿಟ್ಟಿದ್ದಾರೆ. ‘ವಕೀಲರ ಸಂಖ್ಯೆ ಜಾಸ್ತಿ ಆಗುವುದು ಮುಖ್ಯ ಅಲ್ಲ. ಕಕ್ಷಿದಾರರ ಪರ ಎಷ್ಟು ಶ್ರದ್ಧೆಯಿಂದ ವಾದ ಮಾಡುತ್ತೀರಿ ಅನ್ನೋದು ಮುಖ್ಯ. ಚಿಕ್ಕಬೋರಯ್ಯ ಎಂಬುವವರ ಬಳಿ ನಾನು ಲಾ ಪ್ರಾಕ್ಟೀಸ್ ಮಾಡುತ್ತಿದೆ ಎಂದರು.
ಹಾವೇರಿ: ಪಟಾಕಿ ಗೋದಾಮಿಗೆ ಬೆಂಕಿ ಬಿದ್ದು, ಮೂವರು ಸಾವು ಪ್ರಕರಣ ಇದೀಗ ಪಟಾಕಿ ಅವಘಢದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕೂಡಲೆ ಸ್ಥಳಕ್ಕೆ ಹೊಗುವಂತೆ ಜಿಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆ ಮೆರೆಗೆ ಅನ್ಯ ಕಾರ್ಯಕ್ರಮ ರದ್ದುಗೊಳಿಸಿರುವ ಶಿವಾನಂದ ಪಾಟೀಲ್ ಬೆಂಗಳೂರಿನಿಂದ ಹೊರಟು, ನಾಳೆ ಬೆಳಿಗ್ಗೆ ಪಟಾಕಿ ಅವಘಡ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಮೈಸೂರು: ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಅವರು ಸಿಎಂ ಸಿದ್ದರಾಮಯ್ಯಗೆ 2 ಕೆಜಿ ತೂಕದ ಬೆಳ್ಳಿ ಗದೆ ಸಮರ್ಪಣೆ ಮಾಡಿದ್ದಾರೆ. ಲಾ ಗೈಡ್ ಕಾನೂನು ಪತ್ರಿಕೆ ಸಂಪಾದಕ ವೆಂಕಟೇಶ್ರಿಂದ ಕೊಡುಗೆ ನೀಡಲಾಗಿದೆ. ಕಳೆದ 15 ದಿನಗಳಿಂದ ಗದೆ ಸಿದ್ದಪಡಿಸುವ ಕೆಲಸವಾಗಿತ್ತು.
ಬೆಂಗಳೂರು: ಸರ್ಕಾರಿ ಬಸ್ಗಳಲ್ಲಿ ನಾರಿಯರ ಪ್ರಯಾಣ ಮುಂದುವರೆದಿದ್ದು, ಶಕ್ತಿ ಯೋಜನೆ ಜಾರಿಯಾದ ದಿನದಿಂದ ಆಗಸ್ಟ್ 28 ರವರೆಗೆ 48 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಸರ್ಕಾರಿ ಸಾರಿಗೆ ನಿಗಮಗಳಲ್ಲಿ 1,116 ಕೋಟಿ ರೂಪಾಯಿ ದಾಟಿದೆ.
ರಾಯಚೂರು: ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಅಂಗವಾಗಿ ಇಂದಿನಿಂದ ಮಂತ್ರಾಲಯದ ರಾಯರ ಮಠದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸಿದರು.
ಕೊಡಗು: ವಿಷ ಕುಡಿದು KSRTC ನೌಕರ ಅಭಿಷೇಕ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದಿದೆ. ಅಸ್ವಸ್ಥಗೊಂಡ ನೌಕರ ಅಭಿಷೇಕ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಪೋ ವ್ಯವಸ್ಥಾಪಕಿ ಗೀತಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ಮಡಿಕೇರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಮೈಸೂರಿನ ಟಿ.ಕೆ.ಲೇಔಟ್ನಲ್ಲಿರುವ ಸಿಎಂ ನಿವಾಸದಲ್ಲಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಒಬ್ಬೊಬ್ಬರಾಗಿ ಶಾಸಕರು ಆಗಮಿಸುತ್ತಿದ್ದು, ಸದ್ಯ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಕುತೂಹಲ ಮೂಡಿಸಿದೆ.
ಶಿವಮೊಗ್ಗ: ಮಹಿಳೆ ವಿರುದ್ದ ಚಕ್ರವರ್ತಿ ಸೂಲಿಬೆಲೆ ಅವಹೇಳನಕಾರಿ ಕಾಮೆಂಟ್ ಹಿನ್ನಲೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ಪ್ರತಿಭಟನೆ ನಡೆಯುತ್ತಿದೆ. ಹೌದು, ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿ.ಹೆಚ್ ರಸ್ತೆಯ ಕರ್ನಾಟಕ ಸಂಘ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಸೂಲಿಬೆಲೆ ಅವರು ಫೇಸ್ ಬುಕ್ನಲ್ಲಿ ಅವಾಚ್ಯ ಶಬ್ದದಿಂದ ಕಾಮೆಂಟ್ ಮಾಡಿದ್ದರು. ಇದೀಗ ಕಾಮೆಂಟ್ ವಿರೋಧಿಸಿ, ಕೈಯಲ್ಲಿ ಪೊರಕೆ ಹಿಡಿದು ಚಕ್ರವರ್ತಿ ಸೂಲಿಬೆಲೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಪ್ರತಿ ಎಲ್‌ಪಿಜಿ ಸಿಲಿಂಡರ್ ದರ 200 ರೂ. ಇಳಿಸಿದೆ. ಜೊತೆಗೆ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ಒಟ್ಟು 400 ರೂ. ಸಬ್ಸಿಡಿ ಕೊಟ್ಟಿದ್ದು, ಇತರ ಎಲ್ಲಾ ಎಲ್‌ಪಿಜಿ ಬಳಕೆದಾರರಿಗೆ 200 ರೂ. ರಿಯಾಯಿತಿ ನಿಗದಿ ಮಾಡಿದೆ.
ಚಿಕ್ಕಬಳ್ಳಾಫುರ: ಯಾರು ಕೂಡ ದ್ವೇಷದ ರಾಜಕಾರಣ ಮಾಡಬಾರದು, ದ್ವೇಷದ ರಾಜಕಾರಣ ಮಾಡಿದರೆ ಪ್ರದೀಪ್ ಈಶ್ವರ್ ಅಂತಹವರು ಹುಟ್ಟಿಕೊಳ್ತಾರೆ ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಮೈಸೂರು: ಕೆ.ಆರ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ‘ಇದು 1,200 ಬೆಡ್ಗಳಿರುವ ಬೃಹತ್ ಆಸ್ಪತ್ರೆಯಾಗಿದೆ. ನಿರಂತರವಾಗಿ ಕೆ.ಆರ್.ಆಸ್ಪತ್ರೆಯ ಕಾಯಕಲ್ಪ ನಡೆಯಲಿದೆ. ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ 5 ಜಿಲ್ಲೆಗಳಿಂದ ಜನ ಬರುತ್ತಾರೆ. ಜನರ ಅನುಕೂಲಕ್ಕಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸ್ತೇವೆ ಎಂದರು.
ಬೆಂಗಳೂರು: ಬಿಬಿಎಂಪಿ ಸೀವೇಜ್ ವಾಟರ್ ಮ್ಯಾನೇಜ್ಮೆಂಟ್ AEE ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು 50 ಸಾವಿರ ಲಂಚ ಬೇಡಿಕೆಯಿಟ್ಟಿದ್ದರು. ಇಂದು ಮುಂಗಡ10 ಸಾವಿರ ಲಂಚ ಸ್ವೀಕರಿಸುವಾಗ ಎಇಇ ಶಿವಣ್ಣ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೈಸೂರು: ಕೆ.ಆರ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಸುಟ್ಟಗಾಯಗಳ ಆಸ್ಪತ್ರೆಯ ಹೊಸ ಕಟ್ಟಡವನ್ನು ಇಂದು(ಆ.29) ಸಿಎಂ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಿದರು.
ಚಾಮರಾಜನಗರ: ಜಿಲ್ಲೆಯ ಬಿ.ಆರ್.ಟಿ ಹುಲಿಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನುಮಾಸ್ಪದವಾಗಿ ಹುಲಿಯೊಂದು ಮೃತ ಪಟ್ಟ ಘಟನೆ ನಡೆದಿದೆ. ಅರಣ್ಯಾಧಿಕಾರಿಗಳು ಇಂದು ಬಿ.ಆರ್.ಟಿ ಹುಲಿಸಂರಕ್ಷಿತ ಪ್ರದೇಶ ಅತ್ತಿಕಾನೆ ಬಳಿ ರೌಂಡ್ಸ್ ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ: ಹಾವೇರಿಯಲ್ಲಿ ಪಟಾಕಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋಡಾನ್ಗೆ ಪರವಾನಗೆ ನೀಡಿದ್ದಾರೆಯೇ ಎಂಬ ತನಿಖೆ ನಡೆಯುತ್ತಿದ್ದು, ಪರವಾನಗೆ ಇರದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದಮೂರ್ತಿ ಹೇಳಿದರು. ಇನ್ನು ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈಗ ಶೂನ್ಯ ಬಡ್ಡಿಯಲ್ಲಿ ರೈತರಿಗೆ ಸಾಲ ಸಿಗುತ್ತಿಲ್ಲ, ಕೇವಲ ಸಾಲ ವಸೂಲಿ ಹೆಚ್ಚಾಗಿದೆ. ಆದ್ದರಿಂದಲೇ ರೈತರ ಆತ್ಮಹತ್ಯೆ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ 4 ರಿಂದ5 ಸಾವಿರ ರೈತರ ಆತ್ಮಹತ್ಯೆ ಆಗಿತ್ತು. ಈಗ ಮತ್ತೆ ಅದು ಮರುಕಳಿಸುತ್ತಿದೆ ಎಂದರು.
ದಾವಣಗೆರೆ: ಸಿಎಂ, ಡಿಸಿಎಂ ಸಭೆಯಾದರು ಕೆಲ ಸಚಿವರು ಸುಧಾರಿಸಿಲ್ಲ. ಶಾಸಕರ ಪೋನ್ ಕೂಡ ರಿಸೀವ್ ಮಾಡುತ್ತಿಲ್ಲ. ಅವರ ಪಿಎ ಗಳು ಕೂಡ ಅದೇ ದಾರಿ ಹಿಡಿದಿದ್ದಾರೆ. ಒಬ್ಬ ಸಚಿವರಿಗೆ 135 ಕ್ಷೇತ್ರದ ಶಾಸಕರ ಪೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್ನಲ್ಲಿ ಮೆಮೊರಿ ಇರೋದಿಲ್ವಾ ? ಈ ರೀತಿಯಾಗಬಾರದು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಣ್ಣ. ಅವರ ಮೇಲೆ ಯಾವುದೇ ಬೇಸರ, ಮುನಿಸು ಇಲ್ಲ. ನಮ್ಮ ಉಸ್ತುವಾರಿ ಸಚಿವರು ಪೋನ್ ರಿಸೀವ್ ಮಾಡುತ್ತಾರೆ. ನಮ್ಮ ಸಚಿವರ ವಿರುದ್ಧ ದೂರು ಇಲ್ಲ, ಬೇರೆ ಸಚಿವರು ಹಾಗೇ ಮಾಡುತ್ತಾರೆ. ಇನ್ನು ಸ್ವಲ್ಪ ದಿನ ನೋಡುತ್ತೇನೆ ಅಮೇಲೆ ನಿಮ್ಮ ಮುಂದೆ ಬರುತ್ತೇನೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ಗದಗ: ಬಿಜೆಪಿ ಲೋಸಭಾ ಚುನಾವಣೆಯನ್ನು ನವೆಂಬರ್, ಡಿಸೆಂಬರ್, ಜನವರಿ ಯಾವಾಗಾದರೂ ಮಾಡ್ಲಿ, ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಅನ್ನೋದು ರಾಜ್ಯದ ಮತದಾರರ ಮನಸ್ಸಿನಲ್ಲಿದೆ. ಆದ್ದರಿಂದ ಆ ಕಾರಣಕ್ಕೆ ನಮ್ಮ ಪಕ್ಷದತ್ತ ನಾಯಕರು, ಜನ, ಕಾರ್ಯಕರ್ತರು ಬರುತ್ತಿದ್ದಾರೆ. ಇದೊಂದು ಉತ್ತಮವಾದ ರಾಜಕೀಯ ಬೆಳವಣಿಗೆ ಎಂದು ಸಚಿವ ಹೆಚ್ಕೆ ಪಾಟೀಲ್ ಹೇಳಿದರು.
ಬೆಂಗಳೂರು: ಗ್ಯಾರಂಟಿಗಳಿಗೆ ಹಣವಿಲ್ಲದೆ ಸಿದ್ದರಾಮಯ್ಯ ಪತರಗುಟ್ಟಿ ಹೋಗಿದ್ದಾರೆ. ಸಚಿವರು ಅಕ್ರಮ ದಂಧೆಗಳಿಗೆ ನಾಂದಿಯಾಡಿದರು. ತನ್ನ ಹಿಂದಿನ ಹಳೆಯ ವೈಖರಿಯಂತೆ ಮರಳು ಮಾಫಿಯಾ ಜಾರಿಗೆ ತಂದಿತು. ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ತವರು ಜಿಲ್ಲೆಯಲ್ಲೇ ಮರಳು ಮಾಫಿಯಾ ನಡೆಯುತ್ತಿದೆ. ಕಾನ್ಸ್ಟೇಬಲ್ ಮೇಲೆ ಮರಳು ಮಾಫಿಯಾ ಟ್ರ್ಯಾಕ್ಟರ್ ಹರಿಸಿ ಬಲಿ ಪಡೆಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರುಗಳ ದೌಲತ್ತು, ಧಿಮಾಕುಗಳು ಜೋರಾಯಿತು. ಆಯಾ ಜಿಲ್ಲೆಗಳಲ್ಲಿ ಅಕ್ರಮ ದಂಧೆಗಳು ತಲೆ ಎತ್ತಲಾರಂಭಿಸಿದವು. ಅಸಲಿಗೆ ತುಘಲಕ್ ದರ್ಬಾರ್‌ಗೆ ಕಡಿವಾಣವೇ ಇಲ್ಲದಂತಾಯಿತು ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.
ಗ್ಯಾರಂಟಿಗಳ ಪುಂಗಿ ಊದಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದ್ದೂ ಅಲ್ಲದೆ ಇಂದಿಗೂ ಅವುಗಳನ್ನು ಸರಿಯಾಗಿ ಜಾರಿ ಮಾಡಲಾಗಲಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಶುರುವಾಗಿದ್ದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾದದ್ದು ಎಷ್ಟು ಎಂಬುದನ್ನು ಎಲ್ಲವನ್ನೂ ತಿಳಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ತಿಳಿಸಬೇಕಷ್ಟೆ ಎಂದು ಬಿಜೆಪಿ ಟ್ವೀಟ್ ಮಾಡಿ ಹರಿಹಾಯ್ದಿದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ @INCKarnataka ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ. @siddaramaiah ಅವರ ಸರ್ಕಾರ ನೂರು ದಿನ ಸಾಧಿಸಿದ್ದೇನು ಎಂದು ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡಗಳೇ ಹೆಚ್ಚು.
ಅಧಿಕಾರಿಗಳ ದುರುಪಯೋಗ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ಕಾಸಿಗಾಗಿ ಪೋಸ್ಟಿಂಗ್, ಮರಳು ಮಾಫಿಯಾ, ರೈತರ…
— BJP Karnataka (@BJP4Karnataka) August 29, 2023
ಮಂಡ್ಯ: ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಸ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಖಂಡಿಸಿ ಕೆ ಆರ್ ಎಸ್ ಜಲಾಶಯದ ಬಳಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಜ್ಞಾನ ಇಲ್ಲದವರು ನ್ಯಾಯಾಧೀಕರಣದಲ್ಲಿ ಇದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿನ ಸ್ನೇಹ ಬೆಳೆಸಿಕೊಳ್ಳಲು ನೀರು ಬಿಟ್ಟಿದೆ. ರಾಜ್ಯದ ರೈತರ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನ ವಿರೋಧಿಸಿ ಸಭೆ ಜಲ ಸಂರಕ್ಷಣಾ ಸಮಿತಿ ಕರ್ನಾಟಕ ವತಿಯಿಂದ ಸಭೆ ನಡೆಯುತ್ತಿದೆ. ನಮ್ಮ ಜಲ – ನಮ್ಮದು ಎಂಬ ಘೋಷವಾಕ್ಯದೊಂದಿಗೆ ಸಭೆ ನಡೆಯುತ್ತಿದೆ. ವಿವಿಧ ಕ್ಷೇತ್ರಗಳ ಪ್ರಮುಖರು, ಪ್ರಮುಖ ಪಕ್ಷಗಳು ಹಾಗೂ ಸಂಘಟನೆಗಳು ಸಭೆಯಲ್ಲಿ ಭಾಗಿಯಾಗಿವೆ.
ಬಾಗಲಕೋಟೆ: ಐದು ಗ್ಯಾರಂಟಿಗಳಲ್ಲಿ ನಾಲ್ಕು ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆ ಅಡಿಯಲ್ಲಿ 46 ಕೋಟಿ ಜನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಂದು ಸಾವಿರ ಕೋಟಿ ರೂ. ಟಿಕೆಟ್ ದುಡ್ಡು ಆಗಿದೆ. ಆರಂಭದಲ್ಲಿ ಹೆಚ್ಚು ಮಹಿಳೆಯರೇ ಪ್ರಯಾಣ ಮಾಡಿದ್ದರಿಂದ ಸ್ವಲ್ಪ ಸಮಸ್ಯೆ ಆಗಿತ್ತು. ಬಳಿಕ ಅಧಿಕಾರಿಗಳು ಹೆಚ್ಚಿನ ಶೆಡ್ಯೂಲ್ ಮಾಡಿ ಸಾಕಷ್ಟು ಸುಧಾರಣೆ ಆಗಿದೆ. ರಾಜ್ಯದಲ್ಲಿ ನಾಲ್ಕು ವಿಭಾಗಗಳು ಸೇರಿ ಪ್ರತಿದಿನ 1.54 ಲಕ್ಷ ಟ್ರಿಪ್ ಇರುತ್ತೆ. ರಾಜ್ಯದಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ವಿಜಯಪುರ: ಕೆಲ ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಏನಾದರೂ ಪಾಕಿಸ್ತಾನದ ಮುಖ್ಯಮಂತ್ರಿನಾ? ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ಮುಖ್ಯಮಂತ್ರಿ ಅಂದರೆ ಶಾಸಕರು ಅವರ ಬಳಿ ಹೋಗುವುದು ಸಹಜ. ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನ ನೋಡಲು ಬಂದಿದ್ದರು. ಸದ್ಯ ಯಾಕೋ ಸಿದ್ದರಾಮಯ್ಯ ಅವರು ಈಗ ಬಹಳ ಸೈಲೆಂಟ್ ಆಗಿದ್ದಾರೆ. ಯಾಕೆ ಈಗ ಸೈಲೆಂಟ್ ಆಗಿದ್ದೀರಾ ಕೇಳಿದ್ದೆ. ಏನ್ ಮಾಡೋದು ಯತ್ನಾಳ್ ಇದು ನನ್ನ ಕೊನೆ ಅವಧಿ ಎಂದಿದ್ದರು. ಆದರೆ ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುತ್ತೇನೆ ಅಂತ ಹೇಳಿದ್ದರು ಎಂದು ಯತ್ನಾಳ ತಿಳಿಸಿದರು.
ಮೈಸೂರು: ಸರ್ಕಾರ 100 ದಿನ ಪೂರೈಸಿದ ವಿಚಾರವಾಗಿ ನಮಗೆ ಇದೇನು ಸವಾಲು ಎನ್ನಿಸಲಿಲ್ಲ. ಗ್ಯಾರಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣ ಅನಿಸಲಿಲ್ಲ. ಮಾತು ಕೊಟ್ಟಂತೆ ಗ್ಯಾರಂಟಿಗಳ ಜಾರಿ ಮಾಡುತ್ತಿದ್ದೇವೆ. ಖುದ್ದು ಪ್ರಧಾನಿಗಳು ಕೂಡ ಗ್ಯಾರಂಟಿಗಳ ಬಗ್ಗೆ ಆರೋಪ ಮಾಡುತ್ತಿದ್ದರು. ಎಲ್ಲವನ್ನೂ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದ್ದೇವೆ. ಗೃಹಲಕ್ಷ್ಮಿಗೆ ವಾರ್ಷಿಕ 32 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು: ಇಂದು (ಆ.29) ನಡೆಯಲಿರುವ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುತ್ತೇವೆ. ನಮ್ಮ ರೈತರ ಹಿತ ಕಾಪಾಡುವ ಕೆಲಸ ರಾಜ್ಯ ಸರ್ಕಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದರು. ತಾಯಿ ಚಾಮುಂಡಿಗೆ ಹಸಿರು ಮತ್ತು ಕೆಂಪು ಸೀರೆ ನೀಡಿ ಹರಕೆ ಸಲ್ಲಿಸಿದರು. ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತು ಫಲ ಸಮರ್ಪಣೆ ಮಾಡಿದರು. ಸಿಎಂ ಮತ್ತು ಡಿಸಿಎಂ ಗ್ಯಾರಂಟಿ ಕಾರ್ಡ್ ಇಟ್ಟು ಪೂಜೆ ಸಲ್ಲಿಸುವಾಗ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈಗ ಹರಕೆ ಸಲ್ಲಿಸಿದ್ದಾರೆ.
ಕಲಬುರಗಿ: ಇಂದು (ಆ.29) ಮಧ್ಯಾಹ್ನ 2.30ಕ್ಕೆ ನಗರದಲ್ಲಿರುವ ಕೆಕೆಆರ್ಡಿಬಿ ಕಚೇರಿಯಲ್ಲಿ, ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭೆ ನಡೆಯಲಿದೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಮೊದಲ ಕೆಕೆಆರ್ಡಿಬಿಯ ಮೊದಲ ಸಭೆ ಇದಾಗಿದೆ. ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಉಸ್ತುವಾರಿ ಸಚಿವರು ಭಾಗಿಯಾಗಲಿದ್ದಾರೆ.
ಮೈಸೂರು: ನಾಳೆ (ಆ.30) ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ನಾಳೆಯ ಕಾರ್ಯಕ್ರಮದ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಿ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎ-2 ಆರೋಪಿಯಾಗಿರುವ ಜುನೈದ್ ಸಹಚರನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಆ.29) ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತ ಚಾರ್ಜ್ ಶೀಟ್
ಸಿದ್ಧಪಡಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗಿನ ವಿಫಲತೆಗಳ ಕುರಿತು ಬಿಜೆಪಿ ಪಟ್ಟಿ ಮಾಡಿದೆ. ಬೆಲೆಯೇರಿಕೆ, ಗ್ಯಾರಂಟಿ ಘೋಷಣೆಗಳ ವಿಳಂಬ, ಕಾಂಟ್ರಾಕ್ಟರ್ಗಳ ಬಾಕಿ ಬಿಡುಗಡೆ ವಿಳಂಬ, ಸಿಎಂ ಪುತ್ರನ ಹಸ್ತಕ್ಷೇಪ ಆರೋಪ, ಒಂದೇ ಹುದ್ದೆಗೆ ಹಲವು ಶಿಫಾರಸು ಪತ್ರ ಸೇರಿದಂತೆ ವೈಫಲ್ಯಗಳ ಪಟ್ಟಿ ಮಾಡಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪುಲ್ ಆ್ಯಕ್ಟೀವ್ ಆಗಿದ್ದಾರೆ. ಎರಡನೇ ದಿನವೂ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಜೊತೆ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ನಂತರ 10.30ಕ್ಕೆ ಗೃಹಲಕ್ಷ್ಮಿ ಯೋಜನೆ ಲೋಕಾರ್ಪಣೆ ಹಿನ್ನೆಲೆ ಹಲವು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟಗೆ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಕ್ರಮ ನೂತನ ಅಡಿಕೆ ಘಟಕ ಉದ್ಘಾಟನೆ ಮಾಡಲಿದ್ದಾರೆ. 3 ಗಂಟೆಗೆ ಗೃಹಲಕ್ಷ್ಮಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಮೈಸೂರು ಮಂಡ್ಯ ಹಾಸನ ಚಾಮರಾಜನಗರ ಕೊಡಗು ಜಿಲ್ಲಾಧಿಕಾರಿಗಳು ಸಿಇಓಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ಭೇಟಿ ನೀಡಿ ನೂತನವಾಗಿ ಕಟ್ಟಿರುವ ಭುವಿವನ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಕೃಷ್ಣಮೂರ್ತಿ ಪುರಂನಲ್ಲಿ ಅರಸು ಮಂಡಳಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
Published On - 7:59 am, Tue, 29 August 23