ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ(Gruha Lakshmi Scheme) ಆಗಸ್ಟ್ 30ರಂದು ಅರಮನೆ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈಗಾಗಲೇ ಕೆಲ ಮಹಿಳೆಯರ ಖಾತೆಗೆ 2ಸಾವಿರ ಹಣವೂ ವರ್ಗಾವಣೆಗೊಂಡಿದೆ. ಇನ್ನು ಇಂದಿನಿಂದ ಶಿವಮೊಗ್ಗ ಏರ್ಪೋರ್ಟ್ನಲ್ಲಿ(Shivamogga Airport) ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭವಾಗಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಮೊದಲ ವಿಮಾನ ಆಗಮಿಸಲಿದೆ. ಬಿಬಿಎಂಪಿ(BBMP) ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಬೆಂಕಿ ಪ್ರಕರಣದಲ್ಲಿ ಗಾಯಗೊಂಡಿದ್ದ ಬಿಬಿಎಂಪಿ ಅಧೀಕ್ಷಕ ಅಭಿಯಂತರ ಶಿವಕುಮಾರ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದೆ. ಮತ್ತೊಂದೆಡೆ ಮತದಾರರ ಜಾಗೃತಿ ಅಭಿಯಾನ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮೀಟಿಂಗ್ ಜರುಗಲಿದೆ. ಇದೆಲ್ಲದರ ನಡುವೆ ತಮಿಳುನಾಡಿಗೆ ಕಾವೇರಿ ನದಿ(Cauvery Water Dispute) ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಮಂಡ್ಯ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆಗಳು ಮುಂದುವರಿದಿವೆ. ಇಂದು ಕೂಡ ಮಂಡ್ಯ ಜಿಲ್ಲಾ ರೈತ ಹಿತಾರಕ್ಷಣಾ ಸಮಿತಿ ಧರಣಿ ನಡೆಸಲಿದೆ. ಇದರೊಂದಿಗೆ ಇಂದಿನ ಕರ್ನಾಟಕದ ಲೇಟೆಸ್ಟ್ ಸುದ್ದಿಗಳ ಅಪ್ಡೇಟ್ಸ್ ಇಲ್ಲಿದೆ.
ಬೆಂಗಳೂರು: ರಾಜಕೀಯವಾಗಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು. ವಚನಕಾರ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಎಸ್.ಸಿ ಸಮುದಾಯದಿಂದ ಕುಳುವ, ಕೊರಮ, ಕೊರಚ ಸೇರಿದಂತೆ ಈ ಸಮುದಾಯವನ್ನು ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ. ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು, ಬಸವಣ್ಣನವರಿಗಿಂತ ಹಿರಿಯರು, ಎಲ್ಲರಿಗೂ ಬಸವಣ್ಣನವರ ನಾಯಕತ್ವದಲ್ಲಿ ಎಲ್ಲಾ ಬಸವಾದಿ ಶರಣರು ಸಮಾಜದ ಬದಲಾವಣೆ ಸಂಕಲ್ಪ ಮಾಡಿದ್ದವರು. ಅಸಮಾನತೆ ಈ ಹಿಂದಿನಿಂದಲೂ ಇದೆ ಎಂದರು.
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ್ದ ಕಾವ್ಯ ಹೆಸರಿನ ಶ್ವಾನ ನಿಧನವಾಗಿದೆ. ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶ್ವಾನ ಕಾವ್ಯ. ವಯೋಸಹಜವಾಗಿ ಸಾವನ್ನಪ್ಪಿದೆ. 2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಯಾಗಿತ್ತು. ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿತ್ತು. ಮೂರು ದಿನಗಳ ಹಿಂದೆ ಸಾವನ್ನಪ್ಪಿದೆ. ಬಳಿಕ ಇಲಾಖೆಯಿಂದ ಶ್ವಾನ ಕಾವ್ಯಗೆ ಪೊಲೀಸ್ ಗೌರವ ವಂದನೆ ಸಲ್ಲಿಸಿಸಲಾಯಿತು.
ದೆಹಲಿ: ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠದ ವಿಚಾರಣಾ ಪಟ್ಟಿಯಲ್ಲಿ ಕಾವೇರಿ ಪ್ರಕರಣ ಇಲ್ಲವಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ನಾಳೆ ಕಾವೇರಿ ವಿಚಾರಣೆ ನಡೆಯುವುದು ಅನುಮಾನವಾಗಿದೆ. ನಾಳೆ ಸಂವಿಧಾನಿಕ ಪೀಠದಲ್ಲಿ ಆರ್ಟಿಕಲ್ 370 ವಿಚಾರಣೆ ಮುಂದುವರೆಯುವ ಕಾರಣ ಬಹುತೇಕ ವಿಚಾರಣೆ ಅನುಮಾನವಾಗಿದೆ. ಕಾರಣ ಸಂವಿಧಾನ ಪೀಠದಲ್ಲಿ ಬಿಆರ್ ಗವಾಯಿ ಅವರು ಇದ್ದಾರೆ . ಈ ಹಿನ್ನಲೆ ನಾಳೆಯ ಕಾವೇರಿ ನೀರು ಅರ್ಜಿ ವಿಚಾರಣೆ ಅನುಮಾನವಾಗಿದೆ.
ಬೆಂಗಳೂರು: ಅಡುಗೆ ಅನಿಲ ಬೆಲೆ 200 ರೂ. ಕಡಿತ ಮಾಡಿರುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್.ಪಿ.ಜಿ ಸಿಲಿಂಡರ್ ಬೆಲೆ ರೂ.200 ಕಡಿಮೆ ಮಾಡಿರುವುದಕ್ಕಾಗಿ ಮೋದಿಯವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು ಎಂದಿದ್ದಾರೆ.
ಉಡುಪಿ: ಲಂಚ ಪಡೆಯುವಾಗ ನಾಡಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ. ನಿಜಾಮುದ್ದಿನ್ ಲೋಕಾಯುಕ್ತ ಬಲೆಗೆ ಬಿದ್ದ ನಾಡ ಕಚೇರಿ ಸಿಬ್ಬಂದಿ. ಇತ ಸಂತತಿ ನಕ್ಷೆ ಸಿದ್ದಪಡಿಸಲು 1 ಸಾವಿರ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ, ಆ.31: ಹಲವಾರು ದಿನಗಳಿಂದ ಮಳೆ ಬಾರದ ಹಿನ್ನಲೆ ಗ್ರಾಮಸ್ಥರೆಲ್ಲರೂ ಸೇರಿ ಮಳೆಗಾಗಿ ಮಳೆರಾಯನ ಮೂರ್ತಿ ಪೂಜೆ ಮೊರೆಹೋಗಿದ್ದಾರೆ. ಈಗಾಗಲೇ ರೈತರು ಬೆಳೆದ ಬೆಳೆಗೆ ಮಳೆಯ ಅವಶ್ಯಕತೆ ಇದೆ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಮಳೆಗಾಗಿ ಮೂರ್ತಿ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ಮಳೆರಾಯನ ಮೂರ್ತಿ ಮೇಲೆ ನೀರು ಸುರಿಸಿಕೊಂಡು ಪೂಜೆ ಮಾಡಿ, ಹುಯ್ಯೋ ಹುಯ್ಯೋ ಮಳೆರಾಯ,ಹೂವಿನ ತೋಟಕ್ಕೆ ನೀರಿಲ್ಲ, ಬಾರಪ್ಪೋ ಮಳೆರಾಯ, ಮಳೆ ಕುರಿತು ಹಾಡುಗಳನ್ನು ಹಾಡಿಕೊಂಡು ಪ್ರತಿ ಮನೆಯಲ್ಲೂ ಮಳೆರಾಯನಿಗಾಗಿ ಪೂಜೆ ಮಾಡಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ ಮಾಡಲಾಗಿದ್ದು, ಸೆಪ್ಟೆಂಬರ್ 1ರಿಂದ ನವೆಂಬರ್ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಒಕ್ಕಲಿಗ ಸಂಘ ಮಾಹಿತಿ ನೀಡಿದೆ. ಇಂದು ಸಂಘದ ಸದಸ್ಯತ್ವ ನೋಂದಣಿಯ ಅರ್ಜಿ ಸಲ್ಲಿಕೆಗೆ ಕೊನೆ ದಿನ ಆಗಿತ್ತು. ಮತ್ತೆ ಮೂರು ತಿಂಗಳ ಕಾಲ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದೇವೆ. ಈವರೆಗೂ 56,889 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಬೆಂಗಳೂರು: ರೈತ ವಿರೋಧಿ ನೀತಿ ವಿರೋಧಿಸಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸೆಪ್ಟೆಂಬರ್ 8ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ. ‘ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಯಾಕಿಷ್ಟು ದ್ವೇಷ, ದ್ವೇಷ ಮಾಡಲು ರಾಜ್ಯದ ಜನರು ನಿಮಗೆ ಅಧಿಕಾರ ಕೊಟ್ಟಿಲ್ಲ. ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ತಡೆಹಿಡಿಯಲಾಗಿದೆ. ರೈತ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು ಎಂದಿದ್ದಾರೆ.
ಚಿಕ್ಕೋಡಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಮಾಡುವ ಹಿನ್ನೆಲೆ ಇಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 3 ರಂದು ನಿಪ್ಪಾಣಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ, ಬಿಜೆಪಿ ರಾಜ್ಯ ಕಚೇರಿಯಲ್ಲಿ ಮತದಾರರ ಜಾಗೃತಿ ಅಭಿಯಾನ ಕುರಿತು ಸಭೆ ಹಮ್ಮಿಕೊಳ್ಳಲಾಗಿತ್ತು. ಇದೀಗ ಆ ಸಭೆ ಮುಕ್ತಾಯವಾಗಿದ್ದು, ಸೆಪ್ಟೆಂಬರ್ 6 ರಿಂದ ಸಂಸದರು, ಶಾಸಕರು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಲು ಸಭೆಯಲ್ಲಿ ಸಂತೋಷ್ ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಏರ್ಪೋರ್ಟ್ ಆಗಬೇಕೆಂದು ಬಹಳ ವರ್ಷಗಳ ಕನಸಿತ್ತು. ನಿಮ್ಮೆಲ್ಲರ ಆಶೀರ್ವಾದ, ಬೆಂಬಲ, ಪ್ರಧಾನಿ ವಿಶೇಷ ಆಸಕ್ತಿಯಿಂದ ನನಸು. ಮುಂದಿನ ದಿನಗಳಲ್ಲಿ ಶಿವಮೊಗ್ಗಕ್ಕೆ ಕೈಗಾರಿಕೆ ಬರುವುದರಲ್ಲಿ ಸಂಶಯವಿಲ್ಲ. ಶಿವಮೊಗ್ಗ ಏರ್ಪೋರ್ಟ್ನಲ್ಲಿ ನೈಟ್ ಲ್ಯಾಂಡಿಂಗ್ ಕೂಡ ಆರಂಭವಾಗಲಿದೆ. ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಶಿವಮೊಗ್ಗ ನಗರಕ್ಕೆ ಏನೇನು ಬೇಕೋ ಅದನ್ನೆಲ್ಲ ಮಾಡಿದ ತೃಪ್ತಿ ನನಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಲಂಚ ಪಡೆಯುವಾಗ ಕಂದಾಯ ಇಲಾಖೆಯ ಸರ್ವೆಯರ್ ರಮೇಶಪ್ಪ ಬಲೆಗೆ ಬಿದ್ದಿದ್ದಾರೆ. ಜಮೀನಿನ ಸರ್ವೆಗಾಗಿ ಒಂದು ಲಕ್ಷ ರೂ. ಲಂಚ ಕೇಳಿದ್ದ ರಮೇಶಪ್ಪ 3 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಾರೆ. ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲುಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ ಆದರೂ ಅದರ ವಿರುದ್ದ ಯಾವುದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ.
1/3— Basavaraj S Bommai (@BSBommai) August 31, 2023
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಬಂದರು ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಪಲ್ಟಿಯಾಗಿ ಓರ್ವ ಮೀನುಗಾರ ಸಾವನ್ನಪ್ಪಿದ್ದಾನೆ. ಪ್ರಜ್ವಲ್ ಮಾಬ್ಲ ಖಾರ್ವಿ(19) ಮೃತಪಟ್ಟಿದ್ದು, ರಾಜು ಶೇಷಗಿರಿ ಎಂಬ ಮೀನುಗಾರನನ್ನು ರಕ್ಷಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KRSನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಚಾಮರಾಜನಗರದಲ್ಲೂ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಸೂಚನೆ ಹಿನ್ನೆಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಭುವನೇಶ್ವರಿ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಾರಿ ಸಂಸದ ಪ್ರತಾಪ್ ಸಿಂಹನನ್ನು ದಯವಿಟ್ಟು ಗೆಲ್ಲಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿದ ಸಿದ್ದರಾಮಯ್ಯ ವಿಡಿಯೋ ವೈರಲ್ ಆಗಿದೆ. ನರೇಂದ್ರ ಮೋದಿ ಪ್ರಧಾನಿಯಾಗಿ ಒಂಬತ್ತು ವರ್ಷ ಆಯಿತು. ಇಷ್ಟು ವರ್ಷದಲ್ಲಿ ಅವರು ಬರಿ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ. ಹಿಂದು ಮುಸ್ಲಿಂ, ಹಿಜಾಬ್, ಹಲಾಲ್ ಕಟ್ ವಿಚಾರಗಳನ್ನು ಮುಂದಿಟ್ಟು ಸಮಾಜದ ಸಾಮರಸ್ಯವನ್ನೇ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಈ ಬಾರಿ ದಯಮಾಡಿ ಮೈಸೂರಿನ ಜನ ಪ್ರತಾಪ್ ಸಿಂಹನನ್ನು ಆಯ್ಕೆ ಮಾಡಬೇಡಿ. ಇವರೆಲ್ಲ ಸಮಾಜ ವಿರೋಧಿ ಶಕ್ತಿಗಳು ಎಂದು ಸಿದ್ದರಾಮಯ್ಯ ಹೇಳಿರುವ ವಿಡಿಯೋ ವೈರಲ್ ಆಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ JDS ಮುಖಂಡರು ಹೆಚ್ಡಿ ಕುಮಾರಸ್ವಾಮಿ ಶೀಘ್ರ ಗುಣಮುಖವಾಗಲಿ ಎಂದು ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮನಗರದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ 101 ಈಡುಗಾಯಿ ಒಡೆದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಕಾವೇರಿ ಹೋರಾಟ ಕಾವೇರುತ್ತಿದೆ. ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಸೂಚನೆ ಹಿನ್ನೆಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. KRSನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೂತನ ನಾಮನಿರ್ದೇಶಿತ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವಿಕರಿಸಿದ್ದಾರೆ. ಎಂ.ಆರ್.ಸೀತಾರಾಂ, ಉಮಾಶ್ರೀ, ಸುಧಾಮ್ ದಾಸ್ ಪದಗ್ರಹಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಭಾಪತಿ ಹೊರಟ್ಟಿ ಭಾಗಿಯಾಗಿದ್ದರು.
ಜೆಡಿಎಸ್ ಶಾಸಕರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಮನೆಗಳನ್ನು ಶಿಫ್ಟ್ ಮಾಡಿದ್ದು ಕಾಂಗ್ರೆಸ್ ಕ್ಷೇತ್ರದ ಶಾಸಕರಿಗೆ ಮನೆ ಮಂಜೂರು ಮಾಡಿದೆ. ತುರುವೇಕೆರೆಗೆ ಮಂಜೂರು ಆಗಿದ್ದ 3,375 ಮನೆಗಳನ್ನು ಕುಣಿಗಲ್ಗೆ ಶಿಫ್ಟ್ ಮಾಡಿದೆ. ಈ ಹಿನ್ನೆಲೆ ವಸತಿ ಇಲಾಖೆ ಸಚಿವ ಜಮೀರ್ ವಿರುದ್ಧ ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ HDKಗೆ ಚಿಕಿತ್ಸೆ ಹಿನ್ನೆಲೆ ತಂದೆ ಆರೋಗ್ಯ ವಿಚಾರಿಸಲು ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಆಗಮಿಸಿದ್ದಾರೆ. ವಿದೇಶ ಪ್ರವಾಸದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ತಂದೆಗೆ ಅನಾರೋಗ್ಯ ಹಿನ್ನೆಲೆ ವಿದೇಶದಿಂದ ವಾಪಸಾಗಿದ್ದಾರೆ.
ಅನಾರೋಗ್ಯದಿಂದ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಾಗಿರುವ H.D.ಕುಮಾರಸ್ವಾಮಿ ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳ ಕಾಲ ವೈದ್ಯರು ವಾರ್ಡ್ನಲ್ಲೇ ನಿಗಾ ವಹಿಸಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ನಿನ್ನೆಯಿಂದ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಕಚೇರುಗೆ ನುಗ್ಗಿ ಹೆಲ್ತ್ ಇನ್ಸ್ಪೆಕ್ಟರ್ ಧನಶೆಟ್ಟಿ ಮೇಲೆ ಹಲ್ಲೆ ನಡೆಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗ ಅವಿನಾಶ್ ಭಾಸ್ಕರ್ ಪಾಲಿಕೆ ಉಪ ಆಯುಕ್ತರ ಮುಂದೆಯೇ ಹೆಲ್ತ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಟ್ರೇಡ್ ಲೈಸೆನ್ಸ್ ವಿಚಾರವಾಗಿ ಗಲಾಟೆ ತೆಗೆದು ಹಲ್ಲೆ ಮಾಡಲಾಗಿದೆ.
ಕೆಂಪೇಗೌಡ ಏರ್ಪೋರ್ಟ್ನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹೊರಟಿದ್ದು 11 ಗಂಟೆಗೆ ಶಿವಮೊಗ್ಗ ಏರ್ಪೋಟ್ನಲ್ಲಿ ಲ್ಯಾಂಡ್ ಆಗಲಿದೆ. ಮೊದಲ ವಿಮಾನದಲ್ಲಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಆರಗ ಜ್ಞಾನೇಂದ್ರ, ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರಯಾಣ ಬೆಳೆಸಿದ್ದಾರೆ.
ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಪಾವತಿಗೆ ಸರ್ಕಾರ ಆದೇಶ ಹೊರಡಿಸಿದ್ದು ಸರ್ಕಾರದ ಆದೇಶದ ವಿರುದ್ಧ ಗೂಡ್ಸ್, ಟ್ರಕ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನ ಶಾಂತಿನಗರದ ರಸ್ತೆಯುದ್ದಕ್ಕೂ ಗೂಡ್ಸ್ ವಾಹನ ನಿಲ್ಲಿಸಿ ಆರ್ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. 250ಕ್ಕೂ ಹೆಚ್ಚು ಟ್ರಕ್ಗಳನ್ನು ನಿಲ್ಲಿಸಿ ರಸ್ತೆ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ.
ಕೆಲವೇ ಹೊತ್ತಿನಲ್ಲಿ ಕೆಂಪೇಗೌಡ ಏರ್ಪೋರ್ಟ್ನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಏರ್ಪೋರ್ಟ್ ನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಲಿದ್ದು ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಆರಗ ಜ್ಞಾನೇಂದ್ರ, ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸಲಿದ್ದಾರೆ.
ಇಂದಿನಿಂದ ಬೆಂಗಳೂರು-ಶಿವಮೊಗ್ಗ ವಿಮಾನಯಾನ ಆರಂಭ ಹಿನ್ನೆಲೆ ಮೊದಲ ವಿಮಾನದಲ್ಲಿ ಬಿಎಸ್ ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್ ಪ್ರಯಾಣಿಸಲಿದ್ದಾರೆ. ಹೀಗಾಗಿ ಡಾಲರ್ಸ್ ಕಾಲೋನಿಯ ನಿವಾಸದಿಂದ ಕೆಂಪೇಗೌಡ ಏರ್ಪೋರ್ಟ್ಗೆ ಮಾಜಿ ಸಿಎಂ ಯಡಿಯೂರಪ್ಪ ತೆರಳಿದ್ದಾರೆ.
ಶಿವಮೊಗ್ಗದಲ್ಲಿ ಏರ್ಪೋರ್ಟ್ ಆಗಲು ಪ್ರಮುಖ ಕಾರಣ ರೈತರು. ತಕರಾರು ಇಲ್ಲದೆ ಜಮೀನು ಕೊಟ್ಟ ರೈತರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಜೊತೆಯಲ್ಲಿ ಕೆಲವು ರೈತರನ್ನು ಕರೆದುಕೊಂಡು ಹೋಗುತ್ತೇನೆ. ಬಹಳ ಒಳ್ಳೆಯ ಕೆಲಸ ಆಗಿದೆ, ಎಲ್ಲರಿಗೂ ಅನುಕೂಲ ಆಗಲಿದೆ ಎಂದರು.
ಅನಾರೋಗ್ಯ ಹಿನ್ನಲೆ ರೈಲಿಗೆ ಸಿಲುಕಿ ಮುನಿರಾಜು(56) ಎಂಬ ವ್ಯಕ್ತಿ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಹುಣಸನಹಳ್ಳಿ ಬಳಿ ನಡೆದಿದೆ. ಮೃತ ಮುನಿರಾಜು ಕಳೆದ ಹಲವು ದಿನಗಳಿಂದ ಕಿಡ್ನಿ ವೈಪಲ್ಯವಾಗಿ ಡಯಾಲಸಿಸ್ ನಲ್ಲಿದ್ದರು. ಇತ್ತೀಚೆಗೆ ಅನಾರೋಗ್ಯ ತೀವ್ರವಾಗಿ ಮನನೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಎದೆಯೋಡ್ಡಿದ ಹಿನ್ನೆಲೆ ದೇಹ ಎರಡು ತುಂಟಾಗಿದೆ. ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರೈತರ ಪ್ರತಿಭಟನೆ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಕೆಆರ್ಎಸ್ ಡ್ಯಾಂನಿಂದ ಕಾವೇರಿ ನದಿಗೆ 7,279 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ KRSನಿಂದ ತಮಿಳುನಾಡಿಗೆ 4448 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 100.96 ಅಡಿ ಇದೆ.
ಕೈಕೊಟ್ಟ ಮಳೆಯಿಂದ ಬೆಳೆ ನಾಶ ಆದ ಹಿನ್ನೆಲೆ ಹೊಲದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ. ಮಳೆ ಬಾರದೆ ಎರಡು ಎಕರೆ ಈರುಳ್ಳಿ ಬೆಳೆ ನಾಶ ಆಗಿದ್ದು ಮನನೊಂದು ರೈತ ಸತೀಶ್( 49)ನೇಣಿಗೆ ಶರಣಾಗಿದ್ದಾರೆ.
ಸ್ವಚ್ಚತಾ ಅಭಿಯಾನದಲ್ಲಿ ನಂಬರ್ 1 ಸ್ಥಾನ ಪಡೆಯಲು ಮೈಸೂರು ಮುಂದಾಗಿದ್ದು ಸ್ವಚ್ಚತಾ ರಾಯಭಾರಿಯಾಗಿ ಮಂಡ್ಯ ರಮೇಶ್ ಆಯ್ಕೆ ಆಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಅಧಿಕೃತವಾಗಿ ನಟ ಮಂಡ್ಯ ರಮೇಶ್‌ಗೆ ಆಹ್ವಾನ ನೀಡಿದ್ದು ಪಾಲಿಕೆ ಪ್ರಸ್ತಾವನೆಯನ್ನು ಮಂಡ್ಯ ರಮೇಶ್ ಒಪ್ಪಿಕೊಂಡಿದ್ದಾರೆ. ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆ ನೀಡಿದ್ದಾರೆ.
Published On - 8:17 am, Thu, 31 August 23