ಇಂದಿನಿಂದ ಶಿವಮೊಗ್ಗಕ್ಕೆ ವಿಮಾನಗಳ ಹಾರಾಟ ಶುರು: ಮೊದಲ ಪ್ರಯಾಣಿಕರು ಯಾರು ಗೊತ್ತಾ?
ಮಲೆನಾಡಿಗರ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಸೇವೆ ಶುರುವಾಗಲಿದೆ. ಇದರೊಂದಿಗೆ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ. ಹಾಗಾದ್ರೆ, ಶಿವಮೊಗ್ಗಕ್ಕೆ ಮೊದಲ ವಿಮಾನ ಎಲ್ಲಿಂದ ಬರುತ್ತೆ? ಯಾರೆಲ್ಲ ಪ್ರಯಾಣಿಸಲಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಶಿವಮೊಗ್ಗ, (ಆಗಸ್ಟ್ 31) : ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Shivamogga Airport) ಇಂದಿನಿಂದ ವಿಮಾನ ಹಾರಾಟ ಶುರುವಾಗಲಿದೆ. ಇಂದು (ಆಗಸ್ಟ್ 31) ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿಯಲಿದೆ. ಬೆಳಗ್ಗೆ 9.55ಕ್ಕೆ ಬೆಂಗಳೂರಿನಿಂದ ಹೊರಡಲಿರುವ ಮೊದಲ ವಿಮಾನ ಬೆಳಗ್ಗೆ 11.05 ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಇನ್ನು ಈ ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಯಾಣಿಸುತ್ತಿರುವುದು ವಿಶೇಷ. ಇನ್ನು ಬೆಂಗಳೂರಿನಲ್ಲಿನೆಲೆಯೂರಿರುವ ಶಿವಮೊಗ್ಗ ಮೂಲದವರು ವಿಮಾನಯಾನದ ಮೂಲಕ ತಮ್ಮೂರಿಗೆ ತಲುಪುವ ಕೌತುಕದಲ್ಲಿದ್ದಾರೆ.
ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಫೆಬ್ರವರಿ.27ರಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಜನ್ಮದಿನದಂದೇ ಲೋಕಾರ್ಪಣೆಗೊಳಿಸಿದ್ದರು. ಇದರೊಂದಿಗೆ ಯಡಿಯೂರಪ್ಪನವರ ಕನಸು ನನಸಾಗಿತ್ತು. ಇದೀಗ ಇದೇ ಖುಷಿಯಲ್ಲಿ ಯಡಿಯೂರಪ್ಪ ಮೊದಲ ವಿಮಾನದಲ್ಲೇ ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಏರ್ಪೋರ್ಟ್ನಿಂದ ಇಂಡಿಗೋ ವಿಮಾನ ಹಾರಾಟ: 4 ಹೊಸ ಮಾರ್ಗಗಳಲ್ಲಿ ಹಾರಾಟಕ್ಕೆ ಅನುಮತಿ
ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,699 ರೂ. ಇದ್ದು, ಬಹುತೇಕ ಸೀಟುಗಳು ಭರ್ತಿಯಾಗಿರುವುದರಿಂದ ದರದಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನಯಾನಕ್ಕೆ ಅನುಮತಿ ಪಡೆದುಕೊಂಡಿರುವ ಇಂಡಿಗೋ ಸಂಸ್ಥೆಯು ಜು.26ರಿಂದ ಟಿಕೆಟ್ ಬುಕಿಂಗ್ ಆರಂಭಿಸಿತ್ತು. ಮೊದಲ ದಿನವೇ ಟಿಕೆಟ್ ಬುಕ್ಕಿಂಗ್‌ಗೆ ಸ್ಪರ್ಧೆ ಏರ್ಪಟ್ಟಿದ್ದು, 3999 ರೂ. ಇದ್ದ ಆರಂಭಿಕ ದರ 5900 ರೂ., 6900 ರೂ., 7300 ರೂ. ವರೆಗೆ ಏರಿಕೆಯಾಗಿತ್ತು. ಈಗಲೂ ಸ್ಪರ್ಧೆ ಮುಂದುವರಿದಿದೆ.
ಇನ್ನು ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ನೀಡಿದ್ದು, ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಕ್ಕಿದೆ.
ಮಲೆನಾಡಿನ ಏಕೈಕ ಏರ್‌ಪೋರ್ಟ್ ಇದಾಗಿದ್ದು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಕರಾವಳಿ ಭಾಗಕ್ಕೂ ಅನುಕೂಲವಾಗಲಿದೆ. ಆ.11ರಿಂದ ಆರಂಭವಾಗಬೇಕಿದ್ದ ವಿಮಾನಯಾನ ಸೇವೆಯು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು.
ಇನ್ನಷ್ಟು ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ