ಕೊರೊನಾ ಸಂಕಷ್ಟವನ್ನು ಎದುರಿಸಿದ ನಂತರ ಮೊದಲ ಬಜೆಟ್ಗೆ ಕರ್ನಾಟಕ ರಾಜ್ಯ ಸಾಕ್ಷಿಯಾಗುತ್ತಿದೆ. ಕಳೆದ ವರ್ಷ ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡೇ ಬಜೆಟ್ ಮಂಡನೆ ಮಾಡಲಾಗಿತ್ತಾದರೂ ನಂತರ ಆವರಿಸಿಕೊಂಡ ಕೊರೊನಾ ವೈರಸ್ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಿತು. ಲಾಕ್ಡೌನ್, ಸ್ಥಗಿತಗೊಂಡ ವ್ಯಾಪಾರ ವಹಿವಾಟು, ಜನರ ಆದಾಯದಲ್ಲಾದ ಕುಸಿತ ಹೀಗೆ ಮೇಲಿಂದ ಮೇಲೆ ಕಷ್ಟಗಳು ಒದಗಿ ಬಂದ ಕಾರಣ 2020 ಈ ಹಿಂದೆ ಕಂಡು ಕೇಳರಿಯದ ಆರ್ಥಿಕ ಹೊಡೆತವನ್ನು ಅನುಭವಿಸಿತು. ಸದ್ಯ ಕೊರೊನಾ ಭಯ ಕೊಂಚ ಕಡಿಮೆಯಾಗಿ, ರಾಜ್ಯ ಚೇತರಿಕೆ ಕಾಣುತ್ತಿರುವುದರಿಂದ ಸಹಜವಾಗಿಯೇ ಈ ಬಾರಿಯ ಬಜೆಟ್ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಆರ್ಥಿಕತೆ ಸುಧಾರಣೆ, ಬೆಲೆ ಏರಿಕೆ ತಡೆಗಟ್ಟುವಿಕೆ ಸೇರಿದಂತೆ ಜನಸಾಮಾನ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ಸರ್ಕಾರದಿಂದ ಆಶಾದಾಯಕ ಬಜೆಟ್ ಬಯಸುತ್ತಿದ್ದಾರೆ.
ಕಳೆದ ವರ್ಷ ₹2,37,893 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಬಿ.ಎಸ್.ಯಡಿಯೂರಪ್ಪ ಇಲಾಖಾವಾರು ಬಜೆಟ್ ಮಂಡಿಸುವ ಬದಲು ಕೃಷಿ ಮತ್ತು ಪೂರಕ ಚಟುವಟಿಕೆಗಳು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ – ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ಎಂಬ 6 ವಲಯಗಳನ್ನಿಟ್ಟುಕೊಂಡು ಬಜೆಟ್ ಮಂಡಿಸಿದ್ದರು. ರಾಜ್ಯದಲ್ಲಾಗಲೇ ಆರ್ಥಿಕ ಮುಗ್ಗಟ್ಟಿನ ಲಕ್ಷಣಗಳಿದ್ದ ಕಾರಣ ಈ ಮಾರ್ಗವನ್ನು ಅನುಸರಿಸಿದ್ದರು.
ಅಂತೆಯೇ ಆ ಬಜೆಟ್ನಲ್ಲಿ ಈ ವರ್ಷದ ಅಂತ್ಯಕ್ಕೆ ರಾಜ್ಯದ ಸಾಲದ ಮೊತ್ತ ₹3,68,692 ಕೋಟಿಯಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಅದಾದ ನಂತರ ಲಾಕ್ಡೌನ್ ಆಯಿತು, ಕೊರೊನಾ ನಿರ್ವಹಣೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಖರ್ಚುಗಳಿಗಾಗಿ ಸುಮಾರು ₹10 ಸಾವಿರ ಕೋಟಿಯಷ್ಟು ಹಣ ತೆಗೆದಿರಿಸಲಾಯಿತು. ₹1,900ರಿಂದ ₹2,500 ಕೋಟಿ ಆಸುಪಾಸಿನ ಹಣವನ್ನು ಸಹಾಯ ಧನ ರೂಪದಲ್ಲಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಪ್ರಸ್ತುತ ಇಷ್ಟೆಲ್ಲಾ ಖರ್ಚು-ವೆಚ್ಚ, ಹೊರೆ, ಹೊಣೆ ಇರುವ ಸಂದರ್ಭದಲ್ಲಿ ಮತ್ತೊಂದು ಬಜೆಟ್ ಎದುರಾಗಿದೆ. ಈಗ ಆರ್ಥಿಕ ಸಂಕಷ್ಟವೂ ಬಿಗುವಾಗಿರುವುದರಿಂದ ಈ ಬಾರಿಯ ಬಜೆಟ್ ಗಾತ್ರವೂ ಕುಗ್ಗಿಸಿದರೆ ಉತ್ತಮ ಎಂಬ ಸಲಹೆಯನ್ನೂ ಕೆಲವರು ಮುಂದಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ನಿರೀಕ್ಷೆಗಳೇನು ಎಂಬ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ FKCCI ಅಧ್ಯಕ್ಷ ಪರಿಕಲ್ ಸುಂದರ್, ಆರ್ಥಿಕ ತಜ್ಞ ಹಾಗೂ ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಆರ್.ಕೇಶವ್, ಕೃಷಿ ತಜ್ಞೆ ಡಾ.ಚೈತ್ರಾ ಭರತ್ ಅವರೊಂದಿಗೆ ಆ್ಯಂಕರ್ ಹರಿಪ್ರಸಾದ್ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ವ್ಯಕ್ತವಾದ ಮುಖ್ಯ ವಿಚಾರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಈ ಬಗ್ಗೆ ಮಾತನಾಡಿದ FKCCI ಅಧ್ಯಕ್ಷ ಪರಿಕಲ್ ಸುಂದರ್, ಕೊರೊನಾ ದೆಸೆಯಿಂದ ಕಳೆದ 2020-21ರ ಅವಧಿಯಲ್ಲಿ ಉದ್ಯಮ ವಲಯ ತೀರಾ ನಷ್ಟ ಅನುಭವಿಸಿದೆ. ಹೀಗಾಗಿ FKCCI ವತಿಯಿಂದ ಕೆಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪ್ರಧಾನಿ ಉತ್ತೇಜನ ನೀಡುತ್ತಿದ್ದಾರೆ. ಹೀಗಾಗಿ ಉದ್ಯಮಗಳಿಗೆ ಸಂಬಂಧಿಸಿದಂತೆ ಸರ್ಕಾರದ ಕೆಲ ನಿಯಮಗಳನ್ನು ಸಡಿಲಿಸಲು ಕೋರಲಾಗಿದೆ. ಈಗ ತಂದಿರುವ ಕೈಗಾರಿಕಾ ನಿಯಮಗಳು ಹೊಸ ಉದ್ಯಮಗಳ ಆರಂಭಕ್ಕೆ ಪ್ರೋತ್ಸಾಹ ನೀಡುವ ನಿರೀಕ್ಷೆಯೂ ಇದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲೂ ಉದ್ಯಮ ಪ್ರಾರಂಭಕ್ಕೆ ಹೆಚ್ಚು ಒತ್ತು ನೀಡಬೇಕು ಆಗ ಬೆಂಗಳೂರಿನ ಮೇಲೆ ಬೀಳುತ್ತಿರುವ ಎಲ್ಲಾ ರೀತಿಯ ಒತ್ತಡಗಳೂ ಕಡಿಮೆಯಾಗಲಿವೆ. ಅಂತೆಯೇ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಗಮನ ಹರಿಸಬೇಕು ಹಾಗೂ ಪ್ರತಿ ಜಿಲ್ಲೆಗೂ ಕನಿಷ್ಠ 50 ಎಕರೆಯಷ್ಟಾದರೂ ಫುಡ್ಪಾರ್ಕ್ ಮೀಸಲಿಡಬೇಕು. ಅದರಿಂದ ಜನಸಾಮಾನ್ಯರಿಗೆ, ಕೃಷಿಕರಿಗೆ ಅನುಕೂಲವಾಗಲಿದೆ. ಜೊತೆಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳತ್ತ ಗಮನ ಹರಿಸಿದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಅನುಕೂಲವಾಗಲಿದೆ. ಉದ್ಯಮವನ್ನು ಅರಸಿ ಬರುವವರ ಸಂಖ್ಯೆ ಹೆಚ್ಚುತ್ತಿರುವಾಗ ಅದಕ್ಕೆ ತಕ್ಕನಾದ ವಾತಾವರಣ ಹುಟ್ಟುಹಾಕುವ ಹೊಣೆಯನ್ನು ಸರ್ಕಾರ ವ್ಯವಸ್ಥಿತವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.
ಕೃಷಿ ತಜ್ಞೆ ಡಾ.ಚೈತ್ರಾ ಭರತ್ ಮಾತನಾಡಿ, ಕೃಷಿಯಲ್ಲಿ ಈಗಾಗಲೇ ಹವಮಾನ ಬದಲಾವಣೆಯಿಂದ ಹಿಡಿದು ತೀವ್ರ ಸಮಸ್ಯೆಗಳಿವೆ. ಹೀಗಾಗಿ ಇದನ್ನು ಎದುರಿಸಲು ಸಿದ್ಧರಾಗಿ ಒಂದಷ್ಟು ಮೊತ್ತವನ್ನು ತೆಗೆದಿರಿಸಬೇಕು. ಪೆಟ್ರೋಲ್, ಡೀಸೆಲ್ ಬೆಲೆಯೂ ಏರುತ್ತಿರುವುದರಿಂದ ಸಹಜವಾಗಿ ಕೃಷಿ ಚಟುವಟಿಕೆಯ ವೆಚ್ಚ ಹೆಚ್ಚಲಿದೆ ಹಾಗೂ ಸಾಗಾಟಕ್ಕೆ ತಗುಲುವ ಖರ್ಚು ಸಹ ಹೆಚ್ಚಾಗುತ್ತದೆ. ಕೊನೆಯಲ್ಲಿ ಇದು ಗ್ರಾಹಕರ ಜೇಬಿಗೇ ಕತ್ತರಿಯಾಗಲಿದೆ. ಇದನ್ನು ತಡೆಗಟ್ಟಲು ಸರ್ಕಾರ ಯಾವುದಾದರೂ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ರೈತರಿಗೆ ಸಬ್ಸಿಡಿ ರೂಪದಲ್ಲಾದರೂ ಹೊರೆ ತಗ್ಗಿಸಲು ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಯಾರು ಯಾರೋ ಬಂದು ಏಕರೂಪ ಬೆಳೆ ಪದ್ಧತಿಗೆ ಕೈ ಹಾಕುವ ಅಪಾಯ ಇರುವುದರಿಂದ ಅದನ್ನು ಸರ್ಕಾರ ಜಾಗರೂಕತೆಯಿಂದ ನಿರ್ವಹಿಸಬೇಕು. ಕೃಷಿಕರಿಗೆ ಅನುಕೂಲಕರವಾಗುವಂತಹ ಮಾರುಕಟ್ಟೆ ಸೃಷ್ಟಿಸುವ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು.
ಈ ವಿಚಾರದ ಬಗ್ಗೆ ಮಾತನಾಡಿದ ಆರ್ಥಿಕ ತಜ್ಞ ಹಾಗೂ ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಆರ್.ಕೇಶವ್, ಕೊರೊನಾದಿಂದಾಗಿ ಕರ್ನಾಟಕದ ಆರ್ಥಿಕತೆ ನಿರೀಕ್ಷೆಗಿಂತ ಶೇ 12ರಷ್ಟು ಕುಗ್ಗಿರುವುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಅಂದರೆ ನಮ್ಮ ಆದಾಯ ಹಾಗೂ ಖರ್ಚು ಮಾಡುವ ಶಕ್ತಿ ಎರಡೂ ಕಮ್ಮಿಯಾಗಲಿದೆ ಎಂದರ್ಥ. ಇಷ್ಟೆಲ್ಲಾ ಸವಾಲಿರುವಾಗ ಒಳ್ಳೆಯ ಬಜೆಟ್ ಘೋಷಿಸುವುದು ಸವಾಲಿನ ಸಂಗತಿ. ಹೀಗಾಗಿ ಜನಪ್ರಿಯ ಮಾದರಿಯ ಬಜೆಟ್ ಮೊರೆಹೋಗುವುದು ಕಷ್ಟವಾಗಲಿದೆ. ಜೊತೆಗೆ, ತೆರಿಗೆ ವಿಚಾರದಲ್ಲೂ ಕೇಂದ್ರದಿಂದ ಬರಬೇಕಾದ ಹಣವೂ ಕಡಿಮೆ ಆಗಿರುವುದರಿಂದ ಸಾಲ ಮಾಡಿಯಾದರೂ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂಬ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಈಗ ಮಾಡಬೇಕು ಎಂದು ಅನ್ನಿಸುತ್ತಿದ್ದರೂ ಸರ್ಕಾರ ಅದನ್ನು ಮುಂದೂಡುವುದು ಒಳ್ಳೆಯದು. ಏಕೆಂದರೆ ಸಾಲ ಮಾಡಿ ಅದನ್ನು ಹಿಂದಿರುಗಿಸಲಾಗದಿದ್ದರೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು. ಈ ವರ್ಷದ ಮಟ್ಟಿಗೆ ಸರ್ಕಾರ ಜನಪರ ಬಜೆಟ್ಗೆ ಒತ್ತು ಕೊಡುವುದು ಒಳಿತೇ ಹೊರತು ಜನಪ್ರಿಯ ಬಜೆಟ್ ದಾರಿ ಬೇಡ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ:
Karnataka Budget 2021: ಕರ್ನಾಟಕ ಸರ್ಕಾರದ ಬಜೆಟ್ ಆದ್ಯತೆ ಯಾವುದಾಗಿರಬೇಕು?
ಕರ್ನಾಟಕ ಬಜೆಟ್ 2021: ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡದ ಬಜೆಟ್ ಹೇಗೆ ಪರಿಣಾಮಕಾರಿ?