Karnataka Budget 2021: ಕರ್ನಾಟಕ ಸರ್ಕಾರದ ಬಜೆಟ್ ಆದ್ಯತೆ ಯಾವುದಾಗಿರಬೇಕು?

ಕರ್ನಾಟಕ ಬಜೆಟ್ 2021ರಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ವಸತಿ, ಆಹಾರ ಇಂಥವುಗಳಿಗೆ ಎಷ್ಟು ಆದ್ಯತೆ ಸಿಗಬಹುದು ಎಂದು ನೋಡುತ್ತಿದ್ದೇನೆ ಎನ್ನುತ್ತಾರೆ ಮಲ್ನಾಡ್ ಕೋಚಿಂಗ್ ಸೆಂಟರ್ ನಿರ್ದೇಶಕ ತೀರ್ಥಹಳ್ಳಿ ಕೇಶವಮೂರ್ತಿ.

Karnataka Budget 2021: ಕರ್ನಾಟಕ ಸರ್ಕಾರದ ಬಜೆಟ್ ಆದ್ಯತೆ ಯಾವುದಾಗಿರಬೇಕು?
ತೀರ್ಥಹಳ್ಳಿ ಕೇಶವಮೂರ್ತಿ
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 01, 2021 | 6:40 PM

ಕರ್ನಾಟಕ ಬಜೆಟ್ 2021ಕ್ಕೆ ಸರ್ಕಾರದ ಆದ್ಯತೆ ಏನಾಗಿರಬೇಕು? ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು? ಇತ್ಯಾದಿ ಪ್ರಶ್ನೆಗಳೊಂದಿಗೆ ಮಲ್ನಾಡ್ ಕೋಚಿಂಗ್ ಸೆಂಟರ್ ನಿರ್ದೇಶಕರು ಹಾಗೂ ದಶಕಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಥಶಾಸ್ತ್ರ, ಇತಿಹಾಸ ಸೇರಿದಂತೆ ಇತರ ವಿಷಯಗಳನ್ನು ಬೋಧಿಸುವ ತೀರ್ಥಹಳ್ಳಿ ಕೇಶವಮೂರ್ತಿ ಅವರನ್ನು ‘ಟಿವಿ-9 ಕನ್ನಡ ಡಿಜಿಟಲ್​’ಗಾಗಿ ಮಾತನಾಡಿಸಲಾಯಿತು. ಒಂದು ರಾಜ್ಯ ಅಂದರೆ, ಅದು ಕೂಡ ಆ ಕಾಲಘಟ್ಟದಲ್ಲಿ ದೇಶ ಹಾಗೂ ಇಡೀ ವಿಶ್ವ ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನೇ ಎದುರಿಸುತ್ತಿರುತ್ತದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗುತ್ತದೆ ಅಂತಲೇ ಮಾತಿಗಾರಂಭಿಸಿದರು ಅವರು. ಕೇಶವಮೂರ್ತಿ ದೃಷ್ಟಿಯಲ್ಲಿ ಕರ್ನಾಟಕ ಬಜೆಟ್ 2021 ಹೇಗಿರಬೇಕು ಎಂಬುದರ ಆಯ್ದ ಭಾಗ ಇಲ್ಲಿದೆ.

ಸರ್ಕಾರಗಳು ಇಲ್ಲಿಯ ತನಕ ಘೋಷಣೆ ಮಾಡಿದ ಯೋಜನೆಗಳು ಅನುಷ್ಠಾನಕ್ಕೆ ತಂದುಬಿಟ್ಟಿದ್ದಲ್ಲಿ ಈ ದೇಶ ಬೇರೆ ಹೇಗೋ ಇರುತ್ತಿತ್ತು. ಮುಂದಿನ ವರ್ಷ ಆಗಸ್ಟ್​​ಗೆ ಭಾರತ ಸ್ವಾತಂತ್ರ್ಯ ಪಡೆದು, 75 ವರ್ಷ ಪೂರ್ಣಗೊಳ್ಳುತ್ತದೆ. ನಾವು ಇಂದಿಗೂ ಕುಡಿಯುವ ನೀರು, ಕೃಷಿಗೆ ನೀರು, ಶಿಕ್ಷಣ, ಗ್ರಾಮೀಣ ರಸ್ತೆ, ಉತ್ತಮ ಆರೋಗ್ಯ, ವಸತಿ, ಸಾರಿಗೆ ಸಂಪರ್ಕ ಒದಗಿಸುವುದಕ್ಕೆ ಸಾಧ್ಯವಾಗಿಲ್ಲ. ಜಿಡಿಪಿ, ತಲಾದಾಯ, ವಿತ್ತೀಯ ಕೊರತೆ ಇಂಥವೆಲ್ಲ ಜನ ಸಾಮಾನ್ಯರಿಗೆ ದುಬಾರಿ ಪದಗಳು. ತಮ್ಮ ಗ್ರಾಮಕ್ಕೆ ರಸ್ತೆ, ಮಕ್ಕಳಿಗೆ ಶಿಕ್ಷಣ, ಉತ್ತಮ ನೀರು, ಕೃಷಿಗೆ ನೀರು, ತಲೆ ಮೇಲೆ ಸೂರು ಮಾಡಿಕೊಳ್ಳಲು ಸರ್ಕಾರ ಯಾವ ರೀತಿಯ ಅನುಕೂಲ ಮಾಡಿಕೊಡುತ್ತವೆ ಎಂದು ಎದುರು ನೋಡುತ್ತಾರೆ.

ಮಾನವ ಅಭಿವೃದ್ಧಿ ಸೂಚ್ಯಂಕ 131ನೇ ಸ್ಥಾನದಲ್ಲಿ ಭಾರತ ಸರ್ಕಾರಗಳು ಯಾವುದೆಲ್ಲ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿವೆಯೋ ಅವೆಲ್ಲ ತಾವಾಗಿಯೇ ಸೃಷ್ಟಿ ಆಗಿರುವಂಥವು. 138 ಕೋಟಿ ಜನಸಂಖ್ಯೆಯ ದೇಶ ಇದು. ಅದೇ ರೀತಿ ನಮ್ಮ ದೇಶದ ಜಿಡಿಪಿಗೆ ಸೇವಾ ವಲಯದ ಕೊಡುಗೆ ಶೇ 54+, ಕೈಗಾರಿಕೆ ವಲಯದ್ದು ಶೇ 27+ ಹಾಗೂ ಕೃಷಿಯ ಕೊಡುಗೆ ಶೇ 17+ ಇದೆ. ಆದರೆ ಇಂದಿಗೂ ಜನರಿಗೆ ಒದಗಿಸಬೇಕಾದ ಕನಿಷ್ಠ ಸಾಮಾನ್ಯ ಅಗತ್ಯಗಳಾದ ನೀರು, ಶಿಕ್ಷಣ, ಆರೋಗ್ಯ, ಗ್ರಾಮೀಣ ಸೌಕರ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ವಿಶ್ವಸಂಸ್ಥೆಯಿಂದ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಒಟ್ಟು 189 ಸ್ಥಾನಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ. ಹೀಗೆ ಶ್ರೇಯಾಂಕ ನೀಡುವಾಗ ವಿಶ್ವಸಂಸ್ಥೆಯಿಂದ ಗಣನೆಗೆ ತೆಗೆದುಕೊಂಡಿರುವುದು ಆಯಾ ದೇಶದ ಸಾಕ್ಷರತೆ, ಸರಾಸರಿ ಆಯುಷ್ಯ ಹಾಗೂ ಜೀವನ ಮಟ್ಟ. ಒಬ್ಬ ವ್ಯಕ್ತಿ ಸಾಕ್ಷರ ಆಗುತ್ತಿದ್ದಂತೆ ಕೆಲಸ ಸಿಗುತ್ತದೆ. ಹೊಟ್ಟೆ ತುಂಬ ಆಹಾರ ಸಿಕ್ಕು, ಜೀವನ ಗುಣಮಟ್ಟ ಹೆಚ್ಚಾಗಿ, ಆಯುಷ್ಯ ಜಾಸ್ತಿ ಆಗುತ್ತದೆ. ಇದು ವಿಶ್ವಸಂಸ್ಥೆಯ ಅಳತೆಗೋಲಿನ ಹಿಂದಿರುವ ಲೆಕ್ಕಾಚಾರ.

ಕರ್ನಾಟಕಕ್ಕೆ ಅನ್ವಯಿಸಿಕೊಂಡು ಹೇಳುವುದಾದರೆ, ಅಮರ್ತ್ಯ ಸೇನ್ ಅಭಿಪ್ರಾಯವೊಂದನ್ನು ಉದಾಹರಿಸಬೇಕು. ಜನರಿಗೆ ಕೆಲಸ ಸಿಗಬೇಕು, ಆ ಮೂಲಕ ಸಂಪಾದನೆ ಆಗಿ, ಕೈಗೆಟುಕುವ ದರದಲ್ಲಿ ವಸ್ತುಗಳನ್ನು ಖರೀದಿಸುವ ಶಕ್ತಿ ಬರಬೇಕು. ಆಗ ಆರ್ಥಿಕತೆಗೆ ಬಲ ಬರುತ್ತದೆ ಎಂದಿದ್ದರು. ಆ ಅರ್ಥಶಾಸ್ತ್ರಜ್ಞರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅವರು ಕೈಗೆಟುಕುವ ದರದಲ್ಲಿ ವಸ್ತುಗಳು ಸಿಗಬೇಕು ಎನ್ನುತ್ತಾರೆಯೇ ವಿನಾ ಕಡಿಮೆ ದರಕ್ಕೆ ಎನ್ನುವುದಿಲ್ಲ. ಜತೆಗೆ ಜನರಿಗೆ ಹಣ ಬಂದರಷ್ಟೇ ಸಾಲದು, ಅದಕ್ಕೆ ಖರೀದಿಸುವ ಶಕ್ತಿಯೂ ಬಹಳ ಮುಖ್ಯ. ನಾನು ಸಾಮಾನ್ಯವಾಗಿ ಒಂದು ಬಜೆಟ್ ನೋಡುವುದು ಹೇಗೆಂದರೆ, ಶಿಕ್ಷಣ, ಆರೋಗ್ಯ, ವಸತಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯಕ್ಕಾಗಿ ಒಂದು ಸರ್ಕಾರ ಎಷ್ಟು ಹಣ ಮೀಸಲಿಟ್ಟಿದೆ? ಅದೇ ರೀತಿ ಎಸ್ಸಿ, ಎಸ್ಟಿ, ಮಹಿಳೆಯರು, ಅಲ್ಪಸಂಖ್ಯಾತರು, ಮಕ್ಕಳ ಸಾಮಾಜಿಕ ಭದ್ರತೆಗೆ ಏನು ಕ್ರಮ ಕೈಗೊಳ್ಳಲಾಗಿದೆ? ಉದ್ಯೋಗ ಸೃಷ್ಟಿಗೆ ಸರ್ಕಾರದ ಆಲೋಚನೆಗಳೇನು ಅಂತ ನೋಡುತ್ತೇನೆ.

ಹೊಸ ಘೋಷಣೆ, ಭಾಷಣಗಳು ಬೋರ್ ಆಗಿವೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ (PDS) ಅದ್ಭುತ ಶಕ್ತಿ ಬಹಳ ಮಂದಿಗೆ ಗೊತ್ತಿಲ್ಲ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಇದು ಬಹಳ ಸಹಕಾರಿ. ನಿಮ್ಮ ಕೈಗೆ ಬಜೆಟ್ ಪ್ರತಿ ಸಿಕ್ಕ ತಕ್ಷಣ ಒಂದು ಸರ್ಕಾರ ಯಾವ್ಯಾವುದಕ್ಕೆ ಆದ್ಯತೆ ಮೇಲೆ ಹಣ ನೀಡಿದೆ ಅಂತ ನೋಡಿದರೆ ಹಣೆಬರಹ ಗೊತ್ತಾಗುತ್ತದೆ. ಆದರೆ ಸಮಸ್ಯೆ ಎದುರಾಗುವುದು ಅನುಷ್ಠಾನದಲ್ಲಿ.

ಯಾವುದೇ ಇಲಾಖೆಯಲ್ಲಿ ಸಿಎಂ ಕಚೇರಿ ಮೂಗು ತೂರಿಸಬಾರದು. ಅಸಮಾಧಾನಗೊಂಡ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ, ಉಳಿದವರಿಗೆ ಕಡಿಮೆ, ಜಾತಿ ಹಾಗೂ ಚುನಾವಣೆಗಳ ಲೆಕ್ಕಾಚಾರದಲ್ಲಿ ಅನುದಾನ ಬಿಡುಗಡೆ ಮಾಡುವುದು ಅಕ್ಷಮ್ಯ. ಹೇಗೆ ಬ್ಯಾಂಕ್​ಗಳ ಎನ್​ಪಿಎ ಶುದ್ಧೀಕರಣಕ್ಕೆ ಸರ್ಕಾರ ಮುಂದಾಗಿದೆಯೋ ಅದೇ ಥರ ಈ ತನಕ ಘೋಷಣೆ ಆಗಿರುವ ಎಲ್ಲ ಯೋಜನೆಗಳನ್ನು ಎದುರಿಗಿಟ್ಟುಕೊಂಡು, ಅವುಗಳಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕೇ ಬಜೆಟ್ ಮೀಸಲಿಡಬೇಕು. ಹೊಸ ಘೋಷಣೆ, ಭಾಷಣಗಳು ಬೋರ್ ಆಗಿವೆ.

(ನಿರೂಪಣೆ: ಶ್ರೀನಿವಾಸ ಮಠ)

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡದ ಬಜೆಟ್ ಹೇಗೆ ಪರಿಣಾಮಕಾರಿ?

Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ