ಬೆಂಗಳೂರು: ಕರ್ನಾಟಕ ಬಜೆಟ್ 2021ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಠಗಳಿಗೆ ಅನುದಾನ ನೀಡುವುದು ಮುಂದುವರಿಸಿದ್ದಾರೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಅನುದಾನ ಒದಗಿಸಲಾಗಿದೆ. ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರೂ. ಒದಗಿಸಲಾಗಿದೆ. ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ ನೀಡಲಾಗಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು. ಯಾತ್ರಿ ನಿವಾಸ ಕಾಮಗಾರಿಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ.
ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ₹200 ಕೋಟಿ ರೂ. ನೀಡಲು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೂ ಭರಪೂರ ಅನುದಾನ ನೀಡಿರುವ ಸಿಎಂ ಬಿಎಸ್ವೈ 1,500 ಕೋಟಿ ರೂಪಾಯಿ ಒದಗಿಸಿದ್ದಾರೆ.
ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕವನ್ನು ರಾಜ್ಯಾದ್ಯಂತ ರಂಗಾಯಣಗಳ ಮೂಲಕ ನಾಟಕ ಪ್ರದರ್ಶನಕ್ಕೆ 1 ಕೋಟಿ ಹಣ ವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.
ರಾಜ್ಯಾದ್ಯಂತ ಗೋಶಾಲೆ ನಿರ್ಮಾಣ
ಗೋಹತ್ಯೆ ತಡೆಯಲು ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ನಿರ್ಮಾಣಗೊಳಿಸಿ, ದೇಶೀಯ ಜಾನುವಾರು, ಕುರಿ, ಮೇಕೆ, ಕುಕ್ಕುಟ ತಳಿಗಳ ಸಂವರ್ಧನ ತರಬೇತಿಗೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ನಂದಿಗುರ್ಗ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ.
ದೇಶಿ ತಳಿಗಳಾದ ಗೀರ್, ಸಾಹಿವಾಲ್, ವಂಗೋಲ್, ಥಾರ್ ಪಾರ್ಕ್, ದೇವಣಿ ತಳಿಗಳ ಅಭಿವೃದ್ಧಿಗೆ ಸಮಗ್ರ ಗೋಸಂಕುಲ ಸಂವರ್ಧನ ಯೋಜನೆ ಘೋಷಣೆ ಮಾಡಲಾಗಿದೆ. ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಆಕಸ್ಮಿಕವಾಗಿ ಮರಣಹೊಂದಿದ ಕುರಿಗಳ ಪರಿಹಾರಕ್ಕೆ ಅನುಗ್ರಹ ಕೊಡುಗೆ ಮುಂದುವರಿಕೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
Published On - 1:33 pm, Mon, 8 March 21