ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ 14ನೇ ಬಜೆಟ್ (Karnataka Budget 2023) ಅನ್ನು ಶುಕ್ರವಾರ ಮಂಡಿಸಿದರು. ಬಜೆಟ್ ಮಂಡನೆಯುದ್ದಕ್ಕೂ ಅವರು ಕೇಂದ್ರದ ಎನ್ಡಿಎ ಸರ್ಕಾರ ಹಾಗೂ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದು ಕಂಡುಬಂತು. ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ತೆರಿಗೆ ಪಾಲು, ಅನುದಾನಗಳ ಬಗ್ಗೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು. ಮುಂದುವರಿದು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಎಸಗಿತ್ತು ಎಂಬ ರಾಜಕೀಯ ಆರೋಪವನ್ನೂ ಮಾಡಿದರು.
ನಮಗೆ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಜ್ಞಾಪೂರ್ವಕವಾಗಿಯೇ ಉಲ್ಲೇಖಿಸಿದ್ದೆವು. ಯಾಕೆಂದರೆ ನಮಗೆ ವೈವಿಧ್ಯತೆ, ಎಲ್ಲರ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ. ನಾವು ವಿಭಿನ್ನ ಚಿಂತನೆಗಳ ಒಗ್ಗೂಡಿಸುವಿಕೆ, ಭಯಮುಕ್ತ ವಾತಾವರಣದಲ್ಲಿ ಬದುಕುವುದು ಮತ್ತು ಪರಸ್ಪರ ಅವಲಂಬನೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳನ್ನು ನ್ಯಾಯಯುತವಾಗಿ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಭೇದ ಭಾವ ತೋರುವುದು, ಧ್ರುವೀಕರಣ ಅಥವಾ ಸಮಾಜವನ್ನು ಒಡೆಯುವುದು ನ್ಯಾಯವಲ್ಲ. ನ್ಯಾಯವೆಂದರೆ ಸಹಾನುಭೂತಿ, ನ್ಯಾಯವೆಂದರೆ ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: Karnataka Budget 2023: ರಾಜಕೀಯ ಲೇಪದ ಮೂಲಕ ಬಜೆಟ್ ಮೂಲ ತತ್ವವನ್ನೇ ಉಲ್ಲಂಘಿಸಿದರೇ ಸಿದ್ದರಾಮಯ್ಯ?
ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಹೇಳುವ ಮೂಲಕ ಬಜೆಟ್ ಭಾಷಣದಲ್ಲೇ ರಾಜಕೀಯ ಆರೋಪ ಮಾಡಿದರು.
ಕಳದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್ ಸಾಂಕ್ರಾಮಿಕ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಮೂಲಕ ಬಜೆಟ್ ಭಾಷಣದಲ್ಲೇ ನೇರವಾಗಿ ರಾಜಕೀಯ ಆರೋಪ ಮಾಡಿದರು.
ಒಟ್ಟು 134 ಪುಟಗಳ ಬಜೆಟ್ನ 372 ಪ್ಯಾರಾಗಳಲ್ಲಿ 34ಕ್ಕೂ ಹೆಚ್ಚು ಪ್ಯಾರಾಗಳಲ್ಲಿ ಸಿದ್ದರಾಮಯ್ಯನವರು ಹಿಂದಿನ ಸರ್ಕಾರ ಹಾಗೂ ಪ್ರತಿಪಕ್ಷದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕರ್ನಾಟಕ ಬಜೆಟ್ ಇನ್ನಷ್ಟು 2023 ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:50 pm, Fri, 7 July 23