Karnataka Budget 2023: ರಾಜಕೀಯ ಲೇಪದ ಮೂಲಕ ಬಜೆಟ್ ಮೂಲ ತತ್ವವನ್ನೇ ಉಲ್ಲಂಘಿಸಿದರೇ ಸಿದ್ದರಾಮಯ್ಯ?
ಕೋವಿಡ್ ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಇದು ವಿಶೇಷ. ಯಾಕೆಂದರೆ, ಯಾವುದೇ ಆರೋಪ ಸಾಬೀತಾಗುವವರೆಗೆ ಅದನ್ನು ಆರೋಪ ಎಂದು ಮಾತ್ರ ಹೇಳಲಾಗುತ್ತದೆ. ಇದು ಪ್ರಾಯಶಃ ಮುಂಗಡಪತ್ರ ತಯಾರಿಸುವ ತತ್ವವನ್ನೇ ಉಲ್ಲಂಘಿಸಿದಂತೆ ಆಗಿದೆ ಎಂದರೂ ತಪ್ಪಾಗಲಾರದು.
ರಾಜಕೀಯ ಆರೋಪಗಳನ್ನು ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಶುಕ್ರವಾರ) ಮಂಡನೆ ಮಾಡಿರುವ ಬಜೆಟ್ (Karnataka Budget 2023) ವಿವಾದಕ್ಕೆ ಗ್ರಾಸವಾಗಿದೆ. ಕಾಂಗ್ರೆಸ್ನ ಐದು ಗ್ಯಾರೆಂಟಿಗಳ ಬಗ್ಗೆ ಟೀಕೆ ಮಾಡಲು ಪ್ರತಿಪಕ್ಷಗಳಿಗೆ ಸಾಕಷ್ಟು ಕಾರಣಗಳಿರಬಹುದು. ಆದರೆ ಸಿದ್ದು ತಮ್ಮ ಬಜೆಟ್ ಭಾಷಣದಲ್ಲೇ ಬಹುಪಾಲು ರಾಜಕೀಯ ವಿಚಾರಗಳನ್ನು ತುರುಕಿಸಿ ಪ್ರತಿಪಕ್ಷದ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ, ಸಿದ್ದು ಮಂಡಿಸಿದ್ದು ಪೊಲಿಟಿಕಲ್ ಬಜೆಟ್ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರ ‘ಬಜೆಟ್ ರಾಜಕೀಯ’ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಬಜೆಟ್ ಭಾಷಣದ ಪ್ರತಿ 134 ಪುಟಗಳನ್ನು ಹೊಂದಿದ್ದು 372 ಪ್ಯಾರಾಗಳನ್ನು ಹೊಂದಿದೆ. ಅದರಲ್ಲಿ 34 ಪ್ಯಾರಾದಲ್ಲಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರವನ್ನು ಟೀಕಿಸಿದ್ದು, ಸಂಪ್ರದಾಯದ ಮುಂಗಡ ಪತ್ರ ಭಾಷಣಕ್ಕೆ ಬದಲಾಗಿ ಕೇಳಿಸಿಕೊಂಡವರಿಗೆ ಚುನಾವಣಾ ಭಾಷಣದಂತೆ ಕೆಲವು ಬಾರಿ ಅನ್ನಿಸಿದೆ. ಅಂಕಿ ಅಂಶವನ್ನು ಮಾತ್ರ ನೋಡಿದರೆ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ. ತುಂಬಾ ಯೋಜನೆಗಳಿಗೆ ಹಿಂದಿನ ಸರ್ಕಾರ ಹಣ ನೀಡಿಲ್ಲ. ಆದರೆ, ಶತಮಾನಕ್ಕೊಮ್ಮೆ ಬಂದ ಕೋವಿಡ್ ಮೂರು ಅಲೆ ನೀಡಿದ ಹೊಡೆತವನ್ನು ಪರಿಗಣಿಸಬೇಕಿತ್ತು. ಅದರ ಹೊಡೆತ ಆರ್ಥಿಕ ಶಿಸ್ತನ್ನು ಮುರಿಯುವಂತಿತ್ತು. ಆ ಸಂದರ್ಭದಲ್ಲಿ ಹಲವಾರು ಇಲಾಖೆಗಳಿಗೆ ಹಣ ಹಂಚಿಕೆಯಲ್ಲಿ ಖಂಡಿತ ಕಡಿಮೆ ಆಗಿದೆ.
ಇನ್ನು ಕೋವಿಡ್ ಭ್ರಷ್ಟಾಚಾರದ ಬಗ್ಗೆ ಸಿದ್ದು ಪ್ರಸ್ತಾಪಿಸಿದ್ದಾರೆ. ಇದು ವಿಶೇಷ. ಯಾಕೆಂದರೆ, ಯಾವುದೇ ಆರೋಪ ಸಾಬೀತಾಗುವವರೆಗೆ ಅದನ್ನು ಆರೋಪ ಎಂದು ಮಾತ್ರ ಹೇಳಲಾಗುತ್ತದೆ. ಇದು ಪ್ರಾಯಶಃ ಮುಂಗಡಪತ್ರ ತಯಾರಿಸುವ ತತ್ವವನ್ನೇ ಉಲ್ಲಂಘಿಸಿದಂತೆ ಆಗಿದೆ ಎಂದರೂ ತಪ್ಪಾಗಲಾರದು.
ಹಾಗೆ ನೋಡಿದರೆ, ಈ ಸಂಪ್ರದಾಯ ಹುಟ್ಟು ಹಾಕಿದವರು ಕೇಂದ್ರದಲ್ಲಿ ಚಿದಂಬರಂ ಮತ್ತು ಈಗ ನಿರ್ಮಲಾ ಸೀತಾರಾಮನ್. ಆದರೆ, ಅವರ ಟೀಕೆಗಳು ಮೂರ್ನಾಲ್ಕು ಕಡೆ ಇರುವುದನ್ನು ನೋಡಿದ್ದೇವೆ. ವಿರೋಧಿ ಕಾಂಗ್ರೆಸ್ ಪಕ್ಷವನ್ನು ಮಟ್ಟ ಹಾಕಲು ಅಂಕಿ ಅಂಶ ನೀಡಿರುವುದು ಅಲ್ಲಿಯೂ ಇದೆ. ಆದರೆ, 34 ಬಾರಿ ಹೇಳುವುದು ಅತಿಯಾಯಿತು.
ಒಂದು ಇಲಾಖೆಗೆ ನೀಡುವ ವಾರ್ಷಿಕ ಹಣಕ್ಕಿಂತ ಹೆಚ್ಚು ಕೆಲಸದ ಬಿಲ್ ಪೆಂಡಿಂಗ್ ಇಟ್ಟು ಹೋಗಿದ್ದಾರೆ ಎಂಬ ಆರೋಪ ತುಂಬಾ ಕಡೆ ಬಂದಿದೆ, ನಿಜ. ಅದು ಆರ್ಥಿಕ ಅಶಿಸ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಸಣ್ಣ ನೀರಾವರಿ ಇಲಾಖೆ ಬಗ್ಗೆ ಚರ್ಚೆ ಮಾಡುವಾಗ ಹಣಕಾಸು ಸಚಿವರು 2017 ರಲ್ಲಿ ಅವರದೇ ಸರಕಾರ ಎಷ್ಟು ಹೆಚ್ಚು ಬಿಲ್ ಬಾಕಿ ಇಟ್ಟಿತ್ತು ಎನ್ನುವುದನ್ನು ಅವರೇ ಹೇಳಿದ್ದಾರೆ. ಅಂದರೆ, ಪ್ರತಿ ಶಾಸಕರ ಒತ್ತಾಯಕ್ಕೆ ಕೆಲಸ ಮಾಡಿಸಿ ಬಿಲ್ ಪೆಂಡಿಂಗ್ ಇಟ್ಟು ಹೋಗುವ ಚಾಳಿ ಬಹಳ ಕಾಲದಿಂದ ನಡೆದುಬಂದಿದೆ. ಇದು ಹೊಸದಲ್ಲ. ಆದರೆ, ರಾಜ್ಯದ ಆರ್ಥಿಕ ಶಿಸ್ತಿನ ವಿಚಾರದ ಪರಿಮಿತಿಯಲ್ಲಿ ಈ ವಿಚಾರವನ್ನು ಪರಾಮಿರ್ಶಸಿದರೆ, ಇದು ಅಶಿಸ್ತು.
ಇದನ್ನೂ ಓದಿ: Karnataka Budget 2023: ಬಜೆಟ್ ಭಾಷಣದಲ್ಲೂ ರಾಜಕೀಯ; ಕೇಂದ್ರ, ಬಿಜೆಪಿ ವಿರುದ್ಧ ಆರೋಪಗಳ ಮಳೆಗರೆದ ಸಿದ್ದರಾಮಯ್ಯ
ಇನ್ನೊಂದು ವಿಚಾರ, ಈ ಹಿಂದಿನ ಬಾಕಿಯನ್ನು ಯಾವುದೇ ಸರಕಾರ ಇರಲಿ, ತೀರಿಸಲೇ ಬೇಕು. ಅದನ್ನು ಪರಿಗಣಿಸಿದರೆ, ಈ ಸರಕಾರದ ಮುಂದಿರುವ ಬಹುದೊಡ್ಡ ಸವಾಲು ಪಂಚ ಗ್ಯಾರೆಂಟಿ. ಅದು 52,000 ಕೋಟಿಗೆ ನಿಲ್ಲುವ ಲಕ್ಷಣ ಕಾಣಿಸದು. ಸಾಲ ಮರುಪಾವತಿ ಜೊತೆಗೆ ಇನ್ನೊಂದೆಡೆ ಹಿಂದಿನ ಬಾಕಿಯನ್ನು ಅವರು ಲೆಕ್ಕಕ್ಕೆ ತೆಗೆದುಕೊಂಡಂತೆ ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಸವಾಲೇ ಸರಿ.
ಮದ್ಯಪಾನವನ್ನು ಕೆಲವರು ನೈತಿಕ ಕನ್ನಡಿಯ ಮೂಲಕ ನೋಡಿದರೆ, ಇನ್ನು ಕೆಲವರು ಇದನ್ನು ಮೇಲ್ವರ್ಗದವರ ಟೈಂಪಾಸ್ ಎಂದು ಅಂದುಕೊಂಡಿದ್ದಾರೆ. ಇದು ಸುಳ್ಳು ಎಂದು ಹೇಳಲು ಆಧಾರ ಇಲ್ಲ. ಆದರೆ, ದಿನಗೂಲಿ ಮಾಡುವ ತುಂಬಾ ಜನ ಸಂಜೆ ಮದ್ಯ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಒಂದು ಕೈಯಲ್ಲಿ ಭಾಗ್ಯ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡರೆ, ಬಡ ಕುಟುಂಬಗಳ ಆದಾಯ ಹೆಚ್ಚುತ್ತದೆಯೇ? ಈ ಕುರಿತು ಚರ್ಚೆ ಆಗಬೇಕು, ಅದಕ್ಕಿಂತ ಹೆಚ್ಚಾಗಿ ಆದಾಯ ಹೆಚ್ಚಿಸಲು, ಮದ್ಯದ ಮೇಲೆ ಕರ ಹಾಕಿ ಶ್ರೀಮಂತರಿಂದ ಕಿತ್ತು ಬಡವರಿಗೆ ಕೊಟ್ಟೆ ಎಂಬ ರಾಜಕಾರಣಿಗಳ ಕಲ್ಪನೆ ಬಗ್ಗೆಯೇ ಸರಿಯಾದ ಚರ್ಚೆ ನಡೆದು ಒಂದು ನಿರ್ಧಾರಕ್ಕೆ ಬರುವುದು ಸೂಕ್ತ. ಮದ್ಯವನ್ನು ಅನೈತಿಕವೆಂದು ಅಥವಾ ಶ್ರೀಮಂತರ ಲೋಲುಪತೆಯ ಸಂಕೇತ ಎಂದು ಮುಂಗಡಪತ್ರ ಮಂಡಿಸುವವರು ಪದೇ ಪದೇ ವಿಚಾರ ಮಾಡುವುದೇ ತಪ್ಪು.
ಇನ್ನಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Fri, 7 July 23