ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಇಡೀ ಕುಟುಂಬಕ್ಕೆ ವಿಷ ಹಾಕಿದ್ಲು! ಮುಂದಾಗಿದ್ದೇನು?
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಪತ್ನಿ ತನ್ನ ಪತಿ, ಮಕ್ಕಳು, ಅತ್ತೆ ಮತ್ತು ಮಾವರಿಗೆ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಪತಿ ಅನುಮಾನದಿಂದಾಗಿ ಈ ಕೃತ್ಯ ಬೆಳಕಿಗೆ ಬಂದಿದೆ. ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ, ಜೂನ್ 07: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಅಂತ ಗಂಡ, ಮಕ್ಕಳು, ಅತ್ತೆ ಮತ್ತು ಮಾವನಿಗೆ ಸೊಸೆ ಅನ್ನದಲ್ಲಿ ವಿಷ ಹಾಕಿದ್ದ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿದೆ. ವಿಷ ಹಾಕಿದ್ದ ಆರೋಪಿ ಚೈತ್ರಳನ್ನು (33) ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆರಳೂರು ಗ್ರಾಮದ ಗಜೇಂದ್ರ ಹಾಗೂ ಚೈತ್ರ ಮದುವೆಯಾಗಿ 10 ವರ್ಷವಾಗಿದೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ.
ಇತ್ತೀಚಿಗೆ ಪತ್ನಿ ಚೈತ್ರಾ ಅತಿಯಾಗಿ ಫೊನ್ನಲ್ಲಿ ಮಾತನಾಡುವುದು ಪತಿ ಗಜೇಂದ್ರರಿಗೆ ಅನುಮಾನ ತರಿಸಿದೆ. ಸ್ವಲ್ಪ ಗಮನಿಸಿ ನೋಡಿದಾಗ ಅದ್ಯಾರೊ ಹುಡುಗನ ಜೊತೆ ಪತ್ನಿ ಪರಸಂಗ ಹೊಂದಿರುವುದು ತಿಳಿದಿದೆ. ಕೂಡಲೆ ಎಚ್ಚೆತ್ತ ಗಜೇಂದ್ರ, ಚೈತ್ರಾ ತವರು ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ರಾಜಿ ಸಂಧಾನಕ್ಕೆ ಕೂತಾಗ, “ನಾನು ತಪ್ಪು ಮಾಡಿದೆ. ಇನ್ಮುಂದೆ ಹೀಗಾಗಲ್ಲ” ಎಂದು ಚೈತ್ರಾ ಬೇಡಿಕೊಂಡಿದ್ದಾಳೆ. ಆಗ, ಗಜೇಂದ್ರ ಮಕ್ಕಳಿಗಾಗಿ ಮತ್ತೆ ಪತ್ನಿ ಚೈತ್ರಾ ಜೊತೆ ಸಂಸಾರ ಆರಂಭಿಸಿದ್ದಾರೆ. ಆದರೆ, ಕೆಲ ತಿಂಗಳ ನಂತರ ಚೈತ್ರಾ ಪಕ್ಕದ ಮನೆಯ ಶಿವು ಎಂಬುವನ ಜೊತೆ ಗೆಳೆತನ ಮಾಡಿದ್ದಾಳೆ. ವಿಚಾರ ಗೊತ್ತಾಗಿ ಪ್ರಶ್ನೆ ಮಾಡಿದಾಗ, ಚೈತ್ರಾ ಮನೆಯಲ್ಲಿ ಗಲಾಟೆ ಮಾಡಿದ್ದಾಳೆ.
ಅಲ್ಲದೆ, ಶಿವು ಮತ್ತು ಚೈತ್ರಾ ಒಟ್ಟಿಗೆ ಸೇರಿ ಗಜೇಂದ್ರ ಅವರ ವಿರುದ್ಧ ಕಳೆದ ವರ್ಷ ದೂರು ನೀಡಿ ಜೈಲಿಗೆ ಹೋಗುವ ಹಾಗೆ ಮಾಡಿದ್ದರು. ಆದರೆ, ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಗಜೇಂದ್ರ ಅವರಿಗೆ ಅದ್ಯಾಕೋ ದಿಢೀರ್ನೆ ಆರೋಗ್ಯ ಕೈ ಕೊಡಲು ಶುರುವಾಗಿದೆ. ಬಳಲಿಕೆ, ಸುಸ್ತು, ನಿತ್ರಾಣ, ಅತಿಯಾದ ನಿದ್ರೆ ಹೀಗೆ ಹತ್ತಾರು ಸಮಸ್ಯೆ ಶುರುವಾಗಿದೆ.
ಏನಾಯಿತು ಅಂತ ಗಜೇಂದ್ರ ಆತಂಕದಲ್ಲಿರುವಾಗಲೇ, ಚೈತ್ರಾ ಮನೆಯಲ್ಲಿ ಜಗಳ ತೆಗೆದು ತವರು ಮನೆಗೆ ಹೊರಡಲು ಮುಂದಾಗಿದ್ದಾಳೆ. ಈ ವೇಳೆ, ಚೈತ್ರಾಳ ಬ್ಯಾಗ್ ಪರಿಶೀಲನೆ ನಡೆಸಿದಾಗ ಸತ್ಯ ಬಯಲಾಗಿದೆ. ಕದ್ದು ಮುಚ್ಚಿ ಮಾತನಾಡಲು ಮೊಬೈಲ್, ಬ್ಯಾಗ್ ಒಳಗೆ ಮಾತ್ರೆಗಳು ಸಿಕ್ಕಿವೆ. ಇವೆಲ್ಲವನ್ನೂ ತೆಗೆದುಕೊಂಡು ಗಜೇಂದ್ರ, ಪತ್ನಿ ಚೈತ್ರಾಳನ್ನು ಬಿಟ್ಟು ಒಬ್ಬರೇ ವೈದ್ಯರ ಬಳಿಗೆ ಹೋಗಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿಯ ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ
ಈ ಮಾತ್ರೆಗಳು ಆರೋಗ್ಯವಂತರು ಬಳಸುವುದಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಮಾತ್ರೆಗಳನ್ನು ತಿಂಗಳುಗಳಿಂದ ಸ್ವಲ್ಪ ಸ್ವಲ್ಪವೇ ಗಂಡ, ಮಕ್ಕಳು, ಅತ್ತೆ ಮತ್ತು ಮಾವನಿಗೆ ನೀಡಿದ್ದ ಚೈತ್ರಾ ಐದೂ ಜನರನ್ನು ಮುಗಿಸುವ ಪ್ಲಾನ್ ಮಾಡಿದ್ದಳು ಎಂಬ ಭಯಾನಕ ಸತ್ಯ ಹೊರಬಿದ್ದಿದೆ. ಕೂಡಲೆ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಾದ ಗಜೇಂದ್ರ, ಇತನ ಮಕ್ಕಳು ಚಿಕಿತ್ಸೆ ಪಡೆದು ಹೊರ ಬಂದಿದ್ದಾರೆ. ಬೇಲೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆ ಯತ್ನ ಕೇಸ್ನಲ್ಲಿ ಚೈತ್ರಾ ಜೈಲು ಪಾಲಾಗಿದ್ದಾಳೆ. ಚೈತ್ರಾ ಪ್ರಿಯಕರನ ವಿರುದ್ಧವೂ ಕೇಸ್ ದಾಖಲಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.