ಬೆಂಗಳೂರು, ಫೆ.15: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಾಳೆ 15ನೇ ಬಜೆಟ್ (Karnataka Budget 2024) ಮಂಡಿಸಲಿದ್ದು, ಇಂದು ಅಂತಿಮ ಕ್ಷಣದ ಸಿದ್ಧತೆಯ ಚಿತ್ರ ವೀಕ್ಷಿಸಿದರು. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಮಹತ್ವ ಪಡೆದ ನಾಳಿನ ಬಜೆಟ್ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆಯೂ ಇದೆ. ಈ ಬಜೆಟ್ ರಾಜ್ಯಕ್ಕೆ ಹೊಸ ದಿಕ್ಸೂಚಿ ಕೊಡಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜನರು ಅದರಲ್ಲೂ ರೈತರು ತಮಗೇನು ಘೋಷಣೆಯಾಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ, ಯಾವುದೇ ನಿರೀಕ್ಷೆಗಳಿಲ್ಲ, ಕಿವಿಗೆ ಹೂವು ಗ್ಯಾರಂಟಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ.
ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ದಾಟಿರಲಿಲ್ಲ. ಆದರೆ, ಈ ಬಾರಿ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಪಂಚ ಗ್ಯಾರಂಟಿ ಹೊರೆ ಹಾಗೂ ಬರದ ಬರೆ ಸರ್ಕಾರಕ್ಕೆ ಸವಾಲಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜಸ್ವ ಸಂಗ್ರಹ ನಿಗದಿತ ಗುರಿ ತಲುಪದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಹೀಗಾಗಿ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಸಮತೋಲಿತ ಬಜೆಟ್ ಮಂಡಿಸಬೇಕಿದೆ. ಆದ್ರೂ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಜನತೆಗೆ ಒಂದಷ್ಟು ಬಂಪರ್ ಕೊಡುವೆ ಕೊಡುವ ನಿರೀಕ್ಷೆ ಹೊಂದಲಾಗಿದೆ.
ನಾಳಿನ ಬಜೆಟ್ ಕರ್ನಾಟಕ ರಾಜ್ಯಕ್ಕೆ ಹೊಸ ದಿಕ್ಸೂಚಿ ಕೊಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಶಕ್ತಿ ತುಂಬಲು ಕಾರ್ಯಕ್ರಮವನ್ನ ರೂಪಿಸಿದ್ದೇವೆ. ಅನೇಕ ಹೊಸ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಗ್ಯಾರಂಟಿ ಯೋಜನೆ ಹೊರತಾಗಿ ನೀರಾವರಿಗೆ ಚಿಂತನೆ ಮಾಡಲಾಗಿದೆ. ಬಜೆಟ್ ಕುರಿತು ಏನೂ ಹೇಳುವುದಕ್ಕೆ ಬರಲ್ಲ, ನಾಳೆ ಗೊತ್ತಾಗುತ್ತದೆ ಎಂದರು.
ಹಲವು ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಯಾವ ಯೋಜನೆಗಳನ್ನು ಸೇರಿಸುತ್ತೇವೆ ಅಂತಾ ಚರ್ಚೆ ಆಗಿಲ್ಲ ಎಂದರು. ಬಜೆಟ್ ಮೇಲೆ ನಿರೀಕ್ಷೆ ಇಲ್ಲ ಎಂದು ಬಿಜೆಪಿಗರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾಳೆ ಉತ್ತರ ಸಿಗುತ್ತೆ ಎಂದರು.
ಸಿದ್ದರಾಮಯ್ಯ ಬಜೆಟ್ ಬಗ್ಗೆ ನಮಗೆ ಯಾವ ನಿರೀಕ್ಷೆಯೂ ಇಲ್ಲ ಎಂದು ಬೆಂಗಳೂರಲ್ಲಿ ಟಿವಿ9ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಆ ಇಲಾಖೆಯಿಂದ ಈ ಇಲಾಖೆಗೆ ಹುಡುಕುವ ಕೆಲಸ ಮಾಡುತ್ತಾರೆ. ನೀರಾವರಿ, ಕೃಷಿ, ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಹಿಂದಿನ ಬಜೆಟ್ನಲ್ಲಿಯೇ ಎಲ್ಲದಕ್ಕೂ ಹಣ ಕಡಿತ ಮಾಡಿದ್ದಾರೆ. ಹೀಗಾದರೆ ಏನು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ? ಈ ದರಿದ್ರ ಸರ್ಕಾರದಿಂದ ನಮಗೆ ಏನೂ ನಿರೀಕ್ಷೆ ಇಲ್ಲ ಎಂದರು.
ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಎಷ್ಟೇ ನಿರೀಕ್ಷೆ ಇಟ್ಟುಕೊಂಡರು ಸರ್ಕಾರ ಈಡೇರಿಸುವುದಿಲ್ಲ ಎಂದು ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಬೆಂಗಳೂರಿನ ಸಮಸ್ಯೆಗಳು ಬೆಟ್ಟದಷ್ಟಿವೆ. ರಸ್ತೆ, ಇನ್ಫ್ರಾಸ್ಟ್ಕಚರ್, ಫುಟ್ ಪಾತ್ ಸರಿಪಡಿಸಬೇಕು. ಆದರೆ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದೆ ಎಂದರು.
ಕರ್ನಾಟಕಕ್ಕೆ ಕೇಂದ್ರದ ಅನುದಾನದಲ್ಲಿ ಅನ್ಯಾಯವಾಗಿದೆ ಅಂತಿದ್ದಾರೆ. 5ನೇ ಹಣಕಾಸಿನ ಆಯೋಗದಿಂದ ಅನ್ಯಾಯವಾಗಿದೆ ಅಂತಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಭಾರತ ಸರ್ಕಾರ ಯಾವ ರಾಜ್ಯಕ್ಕೆ ಏನು ಕೊಡಬೇಕು ಚರ್ಚಿಸಿ ಕೊಡುತ್ತದೆ. ಬೆಂಗಳೂರಿನ ಫೆರಿಫೆರಲ್ ರಸ್ತೆಗೆ ಹಣ ಬೇಕು. 26 ಸಾವಿರ ಕೋಟಿ 5 ವರ್ಷದ ಹಿಂದೆ ಇತ್ತು. ಆಗ ಬಿಜೆಪಿ ಸರ್ಕಾರನೂ ಏನು ಮಾಡಲಿಲ್ಲ, ಕಾಂಗ್ರೆಸ್ ಕೂಡ ಏನು ಮಾಡಿಲ್ಲ ಎಂದರು.
ಇದನ್ನೂ ಓದಿ: ಕರ್ನಾಟಕ ಬಜೆಟ್: ಕೂಡಲಸಂಗಮದಲ್ಲಿ ವಚನಗಳ ವಿವಿ ಘೋಷಣೆ ಮಾಡಬೇಕು: ಬಸವ ಜಯಮೃತ್ಯುಂಜಯ ಶ್ರೀ
ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. 15-20 ವರ್ಷದಿಂದ ಎಲ್ಲವನ್ನೂ ಹೇಳುತ್ತಿದ್ದೇವೆ. ಆದರೆ ಯಾವ ಬಜೆಟ್ನಲ್ಲೂ ಯಾವುದೇ ನಿರೀಕ್ಷೆ ಈಡೇರಿಲ್ಲ. ಉಚಿತ ಗ್ಯಾರಂಟಿಗಳನ್ನು ಎಲ್ಲರಿಗೂ ಕೊಡುವ ಅಗತ್ಯಯಿಲ್ಲ. ಈ ಬಜೆಟ್ನಲ್ಲಿ ಯಾರು ಬಡವರಿದ್ದಾರೆ ಅವರಿಗೆ ಮಾತ್ರ ಮೀಸಲಿಡಿ ಎಂದು ಸಲಹೆ ನೀಡಿದರು.
ಬಜೆಟ್ ಬಗ್ಗೆ ನಮಗೆ ಅಲ್ಪ ನಿರೀಕ್ಷೆ ಇದೆ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಎಲ್ಲ ವರ್ಗದ ಹಿತ ಕಾಯುವ ಬಜೆಟ್ ನೀಡುವ ಬಗ್ಗೆ ಕುತೂಹಲವಿದೆ. ಇರುವ ಯೋಜನೆಗೆ ಹಣ ಕೊಡಲು ಆಗುತ್ತಿಲ್ಲ, ಹೊಸ ಯೋಜನೆ ಜಾರಿ ಹೇಗೆ ಸಾಧ್ಯ? ಎಲ್ಲಾ ವರ್ಗದವರನ್ನು ಪರಿಗಣಿಸಿ, ವಿಶೇಷವಾಗಿ ರೈತರಿಗೆ ಆದ್ಯತೆ ನೀಡಿ. ನಮ್ಮ ಜಿಲ್ಲೆಗೆ ಇದುವರೆಗೆ ಒಂದು ರೂಪಾಯಿ ಅನುದಾನ ಬಂದಿಲ್ಲ. ಸರ್ಕಾರ ಅಭಿವೃದ್ಧಿ ಪರವಾಗಿ ಯೋಜನೆ ಮಾಡಲಿ ಎಂದರು.
ಜನರಿಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಯನ್ನು ಜಾರಿ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಹೇಳಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಗ್ಯಾರಂಟಿ ಯೋಜನೆಯಿಂದ 4.5 ಕೋಟಿ ಜನರಿಗೆ ಅನುಕೂಲ ಆಗಿದೆ. ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿಗೂ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ, ಕಷ್ಟಕರ ಸವಾಲನ್ನು ಮುಖ್ಯಮಂತ್ರಿ ಸಮರ್ಥವಾಗಿ ನಿಭಾಯಿಸುತ್ತಾರೆ. ನುಡಿದಂತೆ ನಮ್ಮ ಗ್ಯಾರೆಂಟಿ ನಡೆಯುತ್ತದೆ. ಅಭಿವೃದ್ಧಿ ಆಗುತ್ತದೆ. ಸಮಗ್ರ ಕರ್ನಾಟಕ, ಎಲ್ಲ ಜನರ ಅಭಿವೃದ್ಧಿ ಆಗಬೇಕು ಎಂದರು.
ರಾಜಕೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ