ಹಿಂದೂ ಧರ್ಮ ವರ್ಸಸ್ ಲಿಂಗಾಯತ: ಪಂಚಮಸಾಲಿ ಮುಖಂಡರ ಸಭೆಯಲ್ಲಿ ಜಟಾಪಟಿ

ಜಾತಿಗಣತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಹೆಸರು ಇರೋದಕ್ಕೆ ಬಿಜೆಪಿ ವಿರೋಧಿಸಿದೆ. ಇದರ ಮಧ್ಯೆ ಲಿಂಗಾಯತ ಲಡಾಯಿಯೂ ಶುರುವಾಗಿದೆ. ಲಿಂಗಾಯತರಲ್ಲಿ ಪ್ರತ್ಯೇಕ ಧರ್ಮದ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಯಾವ ಕಾಲಂನಲ್ಲಿ ಏನು ಬರೆಸಬೇಕು ಎಂಬುದು ಜಿಜ್ಞಾಸೆಯಾಗಿದೆ. ಈ ಸಂಬಂಧ ಲಿಂಗಾಯತ ಪಂಚಮಸಾಲಿ ಮುಖಂಡರ ಸಭೆಯಲ್ಲಿ ಗದ್ದಲ, ಗಲಾಟೆಯಾಗಿದೆ.

ಹಿಂದೂ ಧರ್ಮ ವರ್ಸಸ್ ಲಿಂಗಾಯತ: ಪಂಚಮಸಾಲಿ ಮುಖಂಡರ ಸಭೆಯಲ್ಲಿ ಜಟಾಪಟಿ
Panchamasali Lingayat

Updated on: Sep 17, 2025 | 4:54 PM

ಬೆಂಗಳೂರು, (ಸೆಪ್ಟೆಂಬರ್ 17): ಇದೇ ಸೆಪ್ಟೆಂಬರ್ 22 ಸೋಮವಾರದಿಂದ ರಾಜ್ಯಾದ್ಯಂತ ಜಾತಿಗಣತಿ (caste census)  ಆರಂಭವಾಗುತ್ತಿದೆ. ಈ ನಡುವೆ ಲಿಂಗಾಯತ ಸಮುದಾಯದಲ್ಲಿ ತಾವು ಏನೆಂದು ಬರೆಸಬೇಕು. ಧರ್ಮದ ಕಾಲಂನಲ್ಲಿ ಬರೆಸಬೇಕಾ? ಜಾತಿಯ ಕಾಲಂನಲ್ಲಿ ಬರೆಸಬೇಕಾ ಎಂಬ ಗೊಂದಲ ಸೃಷ್ಟಿಯಾಗಿದೆ. ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ ಮಹಾಸಭಾ ಸೂಚನೆ ನೀಡಿದೆ. ಆದ್ರೆ, ಮತ್ತೊಂದೆಡೆ ಪಂಚಮಸಾಲಿ ಲಿಂಗಾಯತ (panchamasali lingayat) ಮುಖಂಡರ ಸಭೆಯಲ್ಲೂ ಸಹ ಇದೇ ವಿಚಾರಕ್ಕೆ ಗಲಾಟೆಯಾಗಿದ್ದು, ಅಂತಿಮವಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್​ ನಲ್ಲಿ ನಡೆದ ಪಂಚಮಸಾಲಿ ಲಿಂಗಾಯತ ಸಮುದಾಯದ ಸಭೆ ನಡೆದಿದ್ದು, ಈ ವೇಳೆ ಧರ್ಮದ ಕಾಲಂನಲ್ಲಿ ಇರ್ದಿಷ್ಟವಾಗಿ ಒಂದು ಹೆಸರು ಬರೆಸಲು ಭಾರೀ ಗಲಾಟೆ, ಗುದ್ದಲ ಉಂಟಾಗಿದೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸೋಣ ಎಂದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದ್ರೆ, ಇದಕ್ಕೆ ಪಂಚಮಸಾಲಿ ನಾಯಕ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಲಿಂಗಾಯತ ಧರ್ಮ ಎಂದು ಬರೆಸೋಣ ಎಂದು ವಾದಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಹಿಂದೂ ಅಂತಾನೇ ಬರೆಸೋಣ ಎಂದ ಹಲವು ನಾಯಕರ ವಾದವಾಗಿದೆ.

ಇದನ್ನೂ ಓದಿ: ಜಾತಿ ಗಣತಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಗುರುತಿಸುವುದಕ್ಕೆ ಬಿಜೆಪಿ ಲಿಂಗಾಯತ ನಾಯಕರ ವಿರೋಧ

ಇನ್ನು ಸಭೆಯಲ್ಲಿದ್ದ ಮುರುಗೇಶ್ ನಿರಾಣಿ ಲಿಂಗಾಯತ ಧರ್ಮ ಅಂತ ಬರೆಸಿದ್ರೆ ಈ ನಿಲುವಿನಿಂದ ಮತವಿಭಜನೆ ಆಗುತ್ತೆ. ಕಾಂಗ್ರೆಸ್ ಅಹಿಂದ ಎಂದು ಹೋಗುತ್ತಿದ್ದಾರೆ. ನಾವೇನು ವೋಟು ಬ್ಯಾಂಕ್ ಅಲ್ಲ. ನಮ್ಮನ್ನು ಬರೀ ಚುನಾವಣೆಯ ವಿಚಾರಕ್ಕೆ ಬಳಸಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ನಿರ್ಧಾರದ ಬಗ್ಗೆ ಅಧ್ಯಕ್ಷ ಹೇಳಿದ್ದಿಷ್ಟು

ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಧರ್ಮದ ಕಾಲಂನಲ್ಲಿ ಹಿಂದೂ ಅಂತಾ ಬರೆಸಲು ತೀರ್ಮಾನವಾಗಿದೆ. ಲಿಂಗಾಯತ ಪಂಚಮಸಾಲಿ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಂಚಮಸಾಲಿಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಬರೆಸಲು ನಿರ್ಧಾರವಾಗಿದೆ. ಉಪಜಾತಿ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಮಾಹಿತಿ ನೀಡಿದರು.

ಸ್ಪಷ್ಟನೆ ನೀಡಿದ ವಚನಾನಂದಶ್ರೀ

ಈ ಕುರಿತು ಟಿವಿ9ಗೆ ಪಂಚಮಸಾಲಿ ಪೀಠದ ವಚನಾನಂದಶ್ರೀ ಪ್ರತಿಕ್ರಿಯಿಸಿದ್ದು, ಸೆ.22ರಿಂದ ರಾಜ್ಯದಲ್ಲಿ ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಲಿಖಿತ, ವಿಡಿಯೋ ರೆಕಾರ್ಡ್ ಮೂಲಕ ಅಭಿಪ್ರಾಯವನ್ನ ಪಡೆದುಕೊಳ್ಳಲಾಗಿದೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತಾ ಬರೆಸಬೇಕು ಎಂದು ಸ್ಪಷ್ಟಪಡಿಸಿದರು.

ಡಿಜಿಟಲ್ ಆಗಿರುವುದರಿಂದ ನಂಬರ್​ ಗಳನ್ನು ಬರೆಯಬೇಕು ಅಷ್ಟೇ. ನಮ್ಮ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಲಿಂಗಾಯತ ಅಂತಾ ಇದೆ. ಜಾತಿ ಅಂತಾ ಬಂದಾಗ ಪಂಚಮಸಾಲಿ ಲಿಂಗಾಯತ ಎಂದು ಬರೆಸಬೇಕು. ಜಾತಿ ಕೋಡ್ A0868 ಎಂದು ನಮೂದಿಸಬೇಕು ಎಂದು ಹೇಳಿದರು.

ಇದೆಲ್ಲದರ ಮಧ್ಯೆ ಶುಕ್ರವಾರ ಅಂದ್ರೆ ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲೂ ಇದೇ ವಿಚಾರವಾಗಿ ಚರ್ಚೆ ಆಗಲಿದ್ದು, ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಜಾತಿ ಕಾಲಂ ಹಾಗೂ ಧರ್ಮದ ಕಾಲಂನಲ್ಲಿ ಏನೇನು ಬರೆಸಬೇಕೆಂದು ಸ್ವಾಮೀಜಿಗಳು ಚರ್ಚಿಸಿ ಘೋಷಣೆ ಮಾಡಲಿದ್ದಾರೆ.

ಲಿಂಗಾಯತ – ಪಂಚಮಿಸಾಲಿಗಳ ನಡುವೆ ಭಿನ್ನಾಭಿಪ್ರಾಯ

ಹೌದು…ನಿನ್ನೆ ವೀರಶೈವ ಮಹಾಸಭಾವು ಜಾತಿ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸಬೇಕೆಂದು ಕರೆ ನೀಡಿದೆ. ಆದ್ರೆ, ಇದಕ್ಕೆ ಪಂಚಮಸಾಲಿ ಲಿಂಗಾಯತರು ಆಕ್ಷೇಪ ವ್ಯಕ್ತಪಡಿಸಿದ್ದು,  ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಬದಲಾಗಿ ಪಂಚಮಸಾಲಿ ಲಿಂಗಾಯತ ಎಂದು ನಮೂದಿಸಬೇಕೆಂದು ವಚನಾನಂದಶ್ರೀ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಎರಡು ಸಮುದಾಯಗಳ ನಡುವೆ ಭಿನ್ನ ಅಭಿಪ್ರಾಯಗಳ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಭೆಯಲ್ಲಿ ಸ್ಪಷ್ಟವಾಗಲಿದೆ.

ಒಟ್ಟಿನಲ್ಲಿ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಜಾತಿಗಣತಿ ವೇಳೆ ಏನು ಬರೆಸಬೇಕು. ಯಾವ ಕಾಲಂನಲ್ಲಿ ಏನು ಬರೆಸಬೇಕು ಎಂಬುದರ ಕುರಿತು ಸಮುದಾಯದ ಮುಖಂಡರುಗಳು ಸ್ಪಷ್ಟವಾದ ನಿರ್ಧಾರ ಕೈಗೊಂಡಿದ್ದು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸ್ವಾಮೀಜಿಗಳು ಏನು ಕರೆ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.