ಕನ್ನಡಿಗ ಅರವಿಂದ ಮೆಳ್ಳಿಗೇರಿ ಕಟ್ಟಿದ ಉದ್ಯಮ ಸಾಮ್ರಾಜ್ಯ; ಇದು ಪಕ್ಕಾ ಮೇಕ್ ಇನ್ ಇಂಡಿಯಾಗೆ ಮಾದರಿ
Aerospace manufacturer Aequs is the model for Make in India: ಹುಬ್ಬಳ್ಳಿಯ ಅರವಿಂದ ಮೆಳ್ಳಿಗೇರಿ ಅವರು ಬೆಳಗಾವಿಯಲ್ಲಿ 2007ರಲ್ಲಿ ಏಕಸ್ ಎನ್ನುವ ಏರೋಸ್ಪೇಸ್ ಕಂಪನಿಯನ್ನು ಶುರು ಮಾಡಿದ್ಧಾರೆ. ಇವತ್ತು ಈ ಏರೋಸ್ಪೇಸ್ ಉದ್ಯಮದ ಪ್ರಮುಖ ಕಂಪನಿಗಳಲ್ಲಿ ಅದು ಒಂದಾಗಿದೆ. ಬಿಡಿಭಾಗಗಳ ತಯಾರಿಕೆಗೆ ಬೇಕಾದ ಪ್ರತಿಯೊಂದೂ ಕೂಡ ತಮ್ಮಲ್ಲೇ ಲಭ್ಯ ಇರುವಂತೆ ನೋಡಿಕೊಳ್ಳುತ್ತಿದ್ದಾರೆ ಮೆಳ್ಳಿಗೇರಿ.

ಬೆಳಗಾವಿ, ಸೆಪ್ಟೆಂಬರ್ 17: ಇವತ್ತು ಒಂದು ಫೋನ್ ತಯಾರಾಗಬೇಕಾದರೆ, ಚಿಪ್ ತಯಾರಾಗಬೇಕಾದರೆ, ಒಂದು ವಿಮಾನ ತಯಾರಾಗಬೇಕಾದರೆ (manufacturing) ಹಲವು ಬಿಡಿಭಾಗಗಳು, ಕಚ್ಛಾವಸ್ತುಗಳು ಬೇಕಾಗುತ್ತವೆ. ಪ್ರತಿಯೊಂದು ಬಿಡಿಭಾಗವನ್ನೂ ಬೇರೆ ಬೇರೆ ಕಂಪನಿಗಳಿಂದ ತರಿಸಬೇಕು. ಇದರಿಂದ ಸರಬರಾಜು ಸರಪಳಿ ಬಹಳ ಉದ್ದಗೊಳ್ಳುತ್ತದೆ. ಭಾರತದಲ್ಲಿ ಐಫೋನ್ ತಯಾರಾಗುತ್ತದೆಯಾದರೂ ಹೆಚ್ಚಿನ ಬಿಡಿಭಾಗಗಳನ್ನು ವಿದೇಶದ ಕಂಪನಿಗಳೇ ತಯಾರಿಸುತ್ತವೆ. ಏರ್ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲೂ ಕೂಡ ವಿವಿಧ ಬಿಡಿಭಾಗಗಳು ಬೇರೆ ಬೇರೆ ದೇಶದ ಕಂಪನಿಗಳಿಂದ ತಯಾರಾಗುತ್ತವೆ. ಆದರೆ, ಕನ್ನಡಿಗರಾದ ಅರವಿಂದ್ ಮೆಳ್ಳಿಗೇರಿ (Aravind Melligeri) ಅವರ ಏಕಸ್ (Aequs) ಎನ್ನುವ ಏರೋಸ್ಪೇಸ್ ಬಿಡಿಭಾಗ ತಯಾರಕ ಸಂಸ್ಥೆಯು ಪಕ್ಕಾ ಮೇಕ್ ಇನ್ ಇಂಡಿಯಾಗೆ ಮಾದರಿ ಎನಿಸಿದೆ.
ಬೆಳಗಾವಿಯಲ್ಲಿರುವ ಏಕಸ್ ಕಂಪನಿಯು ವಿಮಾನದ ಡೋರ್ನಿಂದ ಹಿಡಿದು ಎಂಜಿನ್ ಸ್ಪಿನ್ನರ್ಗಳವರೆಗೆ ಹಲವು ವಿಮಾನ ಬಿಡಿಭಾಗಗಳನ್ನು ತಯಾರಿಸುತ್ತದೆ. ಏಕಸ್ ಕಂಪನಿಯು ವಿಶ್ವದ ಅಗ್ರಗಣ್ಯ ವಿಮಾನ ತಯಾರಕರಾದ ಏರ್ಬಸ್ ಮತ್ತು ಬೋಯಿಂಗ್ ಸಂಸ್ಥೆಗಳಿಗೆ ಈ ಬಿಡಿಭಾಗಗಳನ್ನು ಸರಬರಾಜು ಮಾಡುತ್ತದೆ.
ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ದೇವರೇ ಅವತರಿಸಿದ್ದಾನೆ: ನರೇಂದ್ರ ಮೋದಿ ಬಗ್ಗೆ ವಿವಿಧ ಉದ್ಯಮಿಗಳು ಹೇಳಿದ್ದು…
2007ರಲ್ಲಿ ಆರಂಭವಾದ ಏಕಸ್ ಕಂಪನಿಯು 500 ಎಕರೆ ಪ್ರದೇಶದಲ್ಲಿ ವಿವಿಧ ಘಟಕಗಳನ್ನು ಹೊಂದಿದೆ. ಕಚ್ಛಾವಸ್ತುಗಳಿಂದ ಹಿಡಿದು ಅಗತ್ಯ ಇರುವ ಪ್ರತಿಯೊಂದೂ ಕೂಡ ಇಲ್ಲಿ ಲಭ್ಯ. ಯಾವುದೇ ಬಿಡಿಭಾಗವಾದರೂ ಬಹಳ ಕ್ಷಿಪ್ರವಾಗಿ ಸಿದ್ಧಪಡಿಸಿ ಕೊಡುವ ಸಾಮರ್ಥ್ಯ ಏಕಸ್ಗೆ ಇದೆ.
ಹುಬ್ಬಳ್ಳಿಯ ಅರವಿಂದ್ ಮೆಳ್ಳಿಗೇರಿ ಅವರು ಈ ಕಂಪನಿಯ ಸಿಇಒ. ಫೋರ್ಜಿಂಗ್, ಮೆಷಿನಿಂಗ್, ಸರ್ಫೇಸ್ ಟ್ರೀಟ್ಮೆಂಟ್, ಟೆಸ್ಟಿಂಗ್ ಘಟಕಗಳಿವೆ. ಅಲೂಮಿನಿಯಂ ಬ್ಲಾಕ್ಗಳನ್ನು ವಿಮಾನದ ಬಿಡಿಭಾಗಗಳಾಗಿ ಅಚ್ಚಿಳಿಸಬಲ್ಲ 10,000 ಟನ್ ಹೈಡ್ರಾಲಿಕ್ ಪ್ರೆಸ್ ಇತ್ಯಾದಿ ಸೌಲಭ್ಯ ಇಲ್ಲಿವೆ.
ಮಾನವಶಕ್ತಿಯ ಮೇಲೆ ಸಾಕಷ್ಟು ಹೂಡಿಕೆ ಮಾಡಿರುವ ಏಕಸ್
ಏಕಸ್ ಸಂಸ್ಥೆ ಮಾನವ ಸಂಪನ್ಮೂಲದ ಮೇಲೆ ಬಹಳಷ್ಟು ಹೂಡಿಕೆ ಮಾಡಿದೆ. ಸ್ಥಳೀಯ ಪ್ರದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇವರೆಲ್ಲರೂ ಏರೋಸ್ಪೇಸ್ ಎಂಜಿನಿಯರುಗಳಲ್ಲವಾದರೂ ಅವರಿಗೆ ಸೂಕ್ತ ತರಬೇತಿ ನೀಡಿ ಅಣಿಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಹೆಚ್ಚಳ; ಟ್ರೇಡ್ ಡೆಫಿಸಿಟ್ ಕೂಡ ಇಳಿಕೆ
ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಹೆಚ್ಚುತ್ತಿದೆ. ಜಾಗತಿಕವಾಗಿ ವಿವಿಧ ಬಲಾಢ್ಯ ದೇಶಗಳಲ್ಲಿ ಕಾರ್ಮಿಕರಿಗೆ ವಯಸ್ಸಾಗುತ್ತಾ ಇದ್ದು ಯುವಜನರ ಸಂಖ್ಯೆ ತಗ್ಗುತ್ತಿದೆ. ಇದು ಭಾರತಕ್ಕೆ ಒಳ್ಳೆಯ ಅವಕಾಶ ಒದಗಿಸಿದೆ. ಅರವಿಂದ್ ಮೆಳ್ಳಿಗೇರಿ ಅವರ ಏಕಸ್ ಸಂಸ್ಥೆ ಈ ಉದ್ಯಮದ ಬೇಡಿಕೆ ಪೂರೈಸಲು ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸೌಕರ್ಯಗಳ ವ್ಯವಸ್ಥೆ ಮಾಡಿಕೊಂಡಿದೆ.
ಸ್ಥಳೀಯ ಕಾರ್ಮಿಕರು, ಸ್ಥಳೀಯ ವಸ್ತುಗಳು, ಸ್ಥಳೀಯವಾಗಿ ತಯಾರಿಕೆ, ಈ ಮೂಲಕ ಏಕಸ್ ಕಂಪನಿಯು ಮೇಕ್ ಇನ್ ಇಂಡಿಯಾಗೆ ಸರಿಯಾದ ಮಾದರಿಯಾಗಿದೆ.
(ಮಾಹಿತಿ ಕೃಪೆ: ದಿ ಪ್ರಿಂಟ್)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




