ಅಮೆರಿಕದ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಹೆಚ್ಚಳ; ಟ್ರೇಡ್ ಡೆಫಿಸಿಟ್ ಕೂಡ ಇಳಿಕೆ
India's trade deficit decline in 2025 August: 2025ರ ಆಗಸ್ಟ್ ತಿಂಗಳಲ್ಲಿ ಭಾರತದ ಸರಕುಗಳ ರಫ್ತು ಹೆಚ್ಚಾಗಿದೆ, ಆಮದು ಕಡಿಮೆ ಆಗಿದೆ. ಒಟ್ಟಾರೆ ಸರಕುಗಳ ಟ್ರೇಡ್ ಡೆಫಿಸಿಟ್ ಕಡಿಮೆ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಆಗಸ್ಟ್ನಲ್ಲಿ ಭಾರತದ ರಫ್ತು 35.1 ಬಿಲಿಯನ್ ಡಾಲರ್ ಇದೆ. ಅಮದು 61.59 ಬಿಲಿಯನ್ ಡಾಲರ್ ಇದೆ.

ನವದೆಹಲಿ, ಸೆಪ್ಟೆಂಬರ್ 16: ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ (India’s growth) ಜಾಗತಿಕ ವ್ಯಾಪಾರದಲ್ಲಿ ಡಬಲ್ ಧಮಾಕ ಸಿಕ್ಕಿದೆ. ಒಂದೆಡೆ ರಫ್ತು ಏರಿಕೆ ಆಗಿದೆ. ಇನ್ನೊಂದೆಡೆ ಆಮದು ಭರ್ಜರಿ ಇಳಿಕೆಯಾಗಿದೆ. ಸರ್ಕಾರದ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಭಾರತದ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ (Trade Deficit) ಸಖತ್ ಇಳಿಕೆ ಆಗಿದೆ. ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದ ಸರಕುಗಳ ರಫ್ತು 35.1 ಬಿಲಿಯನ್ ಡಾಲರ್ನಷ್ಟಾಗಿದೆ. ಅದೇ ವೇಳೆ, ಸರಕುಗಳ ಆಮದು ಪ್ರಮಾಣ 61.59 ಬಿಲಿಯನ್ ಡಾಲರ್ನಷ್ಟಿದೆ.
ಕಳೆದ ವರ್ಷದ ಆಗಸ್ಟ್ನಲ್ಲಿ 32.89 ಬಿಲಿಯನ್ ಡಾಲರ್ ರಫ್ತು ಇತ್ತು. ಆಮದು 68.53 ಬಿಲಿಯನ್ ಡಾಲರ್ನಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ರಫ್ತಿನಲ್ಲಿ ಶೇ. 6.7ರಷ್ಟು ಹೆಚ್ಚಾಗಿದೆ. ಆಮದು ಬರೋಬ್ಬರಿ ಶೇ. 10.12ರಷ್ಟು ಇಳಿದಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ 35.64 ಬಿಲಿಯನ್ ಡಾಲರ್ ಇದ್ದ ಟ್ರೇಡ್ ಡೆಫಿಸಿಟ್ ಈಗ 26.49 ಬಿಲಿಯನ್ ಡಾಲರ್ಗೆ ಇಳಿದಿದೆ. ಜುಲೈ ತಿಂಗಳಿಗೆ ಹೋಲಿಸಿದರೂ ಆಗಸ್ಟ್ನಲ್ಲಿ ಟ್ರೇಡ್ ಡೆಫಿಸಿಟ್ ತಗ್ಗಿದೆ. 2025ರ ಜುಲೈನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 27.35 ಬಿಲಿಯನ್ ಡಾಲರ್ ಇತ್ತು.
ಇದನ್ನೂ ಓದಿ: ನಮ್ಮಿಂದ ಅವರು ಒಂದು ಜೋಳವನ್ನೂ ಕೊಳ್ಳೋದಿಲ್ಲ: ಭಾರತದ ವ್ಯಾಪಾರ ನೀತಿಯನ್ನು ಟೀಕಿಸಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ
ಇನ್ನು, ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗಿನ ರಫ್ತು ಮತ್ತು ಆಮದು ಎಷ್ಟಾಗಿದೆ ಎನ್ನುವ ಮಾಹಿತಿಯೂ ಬಂದಂತಾಗಿದೆ. 2025ರ ಏಪ್ರಿಲ್ನಿಂದ ಆಗಸ್ಟ್ವರೆಗೆ ಭಾರತದ ರಫ್ತು 184.13 ಬಿಲಿಯನ್ ಡಾಲರ್ ಇದೆ. ಆಮದು 306.52 ಬಿಲಿಯನ್ ಡಾಲರ್ ಆಗಿದೆ.
ಭಾರತದಿಂದ ರಫ್ತಾದ ಸರಕುಗಳಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಔಷಧ ಮತ್ತಿತರ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಭಾರತದ ಆಮದು ಸರಕುಗಳಲ್ಲಿ ಚಿನ್ನ ಮತ್ತು ತೈಲದ ಪಾಲು ಹೆಚ್ಚು. ಚಿನ್ನದ ಸರಕುಗಳ ಆಮದು ಜುಲೈನಲ್ಲಿ 3.9 ಬಿಲಿಯನ್ ಡಾಲರ್ನಷ್ಟು ಇದ್ದದ್ದು ಆಗಸ್ಟ್ನಲ್ಲಿ 5.4 ಬಿಲಿಯನ್ ಡಾಲರ್ಗೆ ಏರಿದೆ. ಕಚ್ಛಾ ತೈಲದ ಆಮದು 15.5 ಬಿಲಿಯನ್ ಡಾಲರ್ನಿಂದ 13.3 ಬಿಲಿಯನ್ ಡಾಲರ್ಗೆ ತಗ್ಗಿದೆ.
ಇದನ್ನೂ ಓದಿ: ಇಥನಾಲ್ ಬಂದ ನಂತರ ಸಕ್ಕರೆ ಕಾರ್ಖಾನೆಗಳಿಗೆ ಬಂತು ಜೀವ: ನಿತಿನ್ ಗಡ್ಕರಿ
ಅಮೆರಿಕದ ಟ್ಯಾರಿಫ್ ಸಂಕಟದ ನಡುವೆ ಭಾರತದ ವ್ಯಾಪಾರ ವಹಿವಾಟು ಉತ್ತಮ ಮಟ್ಟ ಕಾಯ್ದುಕೊಂಡಿದೆ. ಅಮೆರಿಕವು ಆಗಸ್ಟ್ 7ರಂದು 25ರಷ್ಟು ಟ್ಯಾರಿಫ್ ವಿಧಿಸಿತು. ಆಗಸ್ಟ್ 27ರಿಂದ ಹೆಚ್ಚುವರಿ ಟ್ಯಾರಿಫ್ ಸೇರಿ ಶೇ. 50ರಷ್ಟು ಸುಂಕವನ್ನು ಭಾರತದ ಸರಕುಗಳ ಮೇಲೆ ಹಾಕಿದೆ. ಇದರ ಪರಿಣಾಮ ಭಾರತದ ಮೇಲೆ ಎಷ್ಟಾಗುತ್ತದೆ ಎಂಬುದು ಸೆಪ್ಟೆಂಬರ್ ತಿಂಗಳ ದತ್ತಾಂಶದಿಂದ ತಿಳಿದುಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




