Income Tax Returns: ಕೇವಲ ಒಂದೇ ಒಂದು ದಿನ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ
Income tax returns filing deadline: ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನೂ ಒಂದು ದಿನ ವಿಸ್ತರಿಸಿದೆ. ಆದ್ದರಿಂದ, ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಈಗ ಸೆಪ್ಟೆಂಬರ್ 16, 2025 ಆಗಿದೆ. ಈ ಮೊದಲು ಈ ದಿನಾಂಕವನ್ನು ಸೆಪ್ಟೆಂಬರ್ 15 ಎಂದು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಐಟಿಆರ್ ಸಲ್ಲಿಸಲು ಆರಂಭಿಕ ಗಡುವು ಜುಲೈ 31, 2025 ಆಗಿತ್ತು, ಅದನ್ನು ಈಗಾಗಲೇ ವಿಸ್ತರಿಸಲಾಗಿತ್ತು.

ನವದೆಹಲಿ, ಸೆಪ್ಟೆಂಬರ್ 16: ಆದಾಯ ತೆರಿಗೆ ರಿಟರ್ನ್ಸ್(Income Tax ) ಸಲ್ಲಿಸಲು ಇದ್ದ ಗಡುವನ್ನು ಒಂದೇ ಒಂದು ದಿನ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ 15ಕ್ಕೆ ಗಡುವು ನೀಡಲಾಗಿತ್ತು. ಇದೀಗ ಸೆಪ್ಟೆಂಬರ್ 16ರವರೆಗೂ ವಿಸ್ತರಿಸಲಾಗಿದೆ. ಈ ಮಧ್ಯೆ ವೆಬ್ಸೈಟ್ ಕ್ರ್ಯಾಷ್ ಆಗಿರುವುದೂ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಎದುರಾಗಿ ಐಟಿಆರ್ ಸಲ್ಲಿಕೆ ವಿಳಂಬವಾಗಿತ್ತು. ಹಾಗಾಗಿ ಗಡುವು ವಿಸ್ತರಣೆ ಮಾಡುವಂತೆ ಮನವಿಗಳು ಕೂಡ ಬಂದಿತ್ತು. ಇದೀಗ ಒಂದು ದಿನ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ.
ಈ ಮಧ್ಯೆ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ ಎನ್ನುವಂತಹ ಪೋಸ್ಟ್ವೊಂದು ಆನ್ಲೈನ್ನಲ್ಲಿ ವೈರಲ್ ಆಗಿತ್ತು. ಹಣಕಾಸು ಸಚಿವಾಲಯದಿಂದ ಹೊರಡಿಸಲಾಗಿದೆ ಎನ್ನಲಾದ ನೋಟೀಸ್ ಅನ್ನು ಉಲ್ಲೇಖಿಸಲಾಗಿತ್ತು ಆದರೆ ಅದು ಸುಳ್ಳು ಸುದ್ದಿ ಎಂದು ಆದಾಯ ತೆರಿಗೆ ಇಲಾಖೆ ಇದಕ್ಕೆ ಸ್ಪಷ್ಟನೆ ನೀಡಿತ್ತು. ಇದೀಗ ಒಂದು ದಿನಗಳ ಕಾಲ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಕೆಗೆ ಇರುವ ಡೆಡ್ಲೈನ್ ಒಳಗೆ ಪಾವತಿಸದೆ ವಿಳಂಬ ಮಾಡಿದರೆ ವಿವಿಧ ದಂಡಗಳು ಕಾದಿರುತ್ತವೆ. 1,000 ರೂನಿಂದ ಹಿಡಿದು 5,000 ರೂವರೆಗೆ ತಡಪಾವತಿ ಶುಲ್ಕ ತೆರಬೇಕಾಗುತ್ತದೆ.
ತೆರಿಗೆ ಬಾಕಿ ಮೊತ್ತದ ಮೇಲೆ ಬಡ್ಡಿ ಕಟ್ಟುವುದು ಇವೇ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ರಿಟರ್ನ್ಸ್ ಸಲ್ಲಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ತೆರಿಗೆದಾರರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಐಟಿಆರ್ ಸಲ್ಲಿಸುವ ದಿನಾಂಕವನ್ನು ಒಂದು ದಿನ ವಿಸ್ತರಿಸಿರುವುದರಿಂದ ತೆರಿಗೆದಾರರು ಸ್ವಲ್ಪ ನಿರಾಳರಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳು ಅಥವಾ ದಂಡವನ್ನು ತಪ್ಪಿಸಲು, ಪ್ರತಿಯೊಬ್ಬರೂ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಇಲಾಖೆ ಮನವಿ ಮಾಡಿದೆ.
ಮತ್ತಷ್ಟು ಓದಿ: ITR Filing Last Date: ಐಟಿಆರ್ ಫೈಲಿಂಗ್, ಡೆಡ್ಲೈನ್ ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?
ಸೆಕ್ಷನ್ 234 ಎ ಅಡಿಯಲ್ಲಿ, ತೆರಿಗೆ ಬಾಕಿಗಳಿಗೆ ಪ್ರತಿ ತಿಂಗಳು ಶೇ.1 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದರೆ, ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಮರುಪಾವತಿಯನ್ನು ಪಡೆಯುವಲ್ಲಿ ವಿಳಂಬವಾಗುತ್ತದೆ. ಮಾಹಿತಿಯನ್ನು ಮರೆಮಾಡಿದರೆ ಅಥವಾ ತಪ್ಪಾಗಿ ನೀಡಿದರೆ, ಆದಾಯ ತೆರಿಗೆ ಕಾಯ್ದೆಯಡಿ ಜೈಲು ಶಿಕ್ಷೆಯೂ ವಿಧಿಸಬಹುದು. ಗಂಭೀರ ಪ್ರಕರಣಗಳಲ್ಲಿ, 3 ತಿಂಗಳಿಂದ 2 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




