ಕ್ರಿಶ್ಚಿಯನ್ ಜೊತೆ ಒಕ್ಕಲಿಗ ಕಾಲಂ ತೆಗೆಯದಿದ್ರೆ ಬೃಹತ್ ಹೋರಾಟ: ಒಕ್ಕಲಿಗರ ಒಕ್ಕೊರಲ ನಿರ್ಧಾರ

ಸೋಮವಾರದಿಂದ ಆರಂಭವಾಗಲಿರುವ ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಿರುವುದಕ್ಕೆ ಒಕ್ಕಲಿಗ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಕ್ಕಲಿಗ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಜಾತಿ ಗಣತಿ ಸಂಬಂಧ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

ಕ್ರಿಶ್ಚಿಯನ್ ಜೊತೆ ಒಕ್ಕಲಿಗ ಕಾಲಂ ತೆಗೆಯದಿದ್ರೆ ಬೃಹತ್ ಹೋರಾಟ: ಒಕ್ಕಲಿಗರ ಒಕ್ಕೊರಲ ನಿರ್ಧಾರ
ಬೆಂಗಳೂರಿನಲ್ಲಿ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ವೊಕ್ಕಲಿಗ ನಾಯಕರ ಸಭೆ
Updated By: Ganapathi Sharma

Updated on: Sep 20, 2025 | 4:30 PM

ಬೆಂಗಳೂರು, ಸೆಪ್ಟೆಂಬರ್ 20: ಇನ್ನೊಂದೇ ದಿನ ಬಾಕಿ. ಸೋಮವಾರ ಬಂದರೆ ಹೊಸದಾಗಿ ಜಾತಿ ಸಮೀಕ್ಷೆ (Karnataka Caste Census) ಶುರುವಾಗುತ್ತದೆ. ಆದರೆ, ಇನ್ನೂ ಜಾತಿ ಜ್ವಾಲೆ ಮಾತ್ರ ಧಗಧಗಿಸುತ್ತಲೇ ಇದೆ. ಕ್ರಿಶ್ಚಿಯನ್ ಜೊತೆ ಒಕ್ಕಲಿಗ (Vokkaligas) ಎಂದು ಸೇರಿಸಿರುವುದು ಸಮುದಾಯವನ್ನೇ ಕೆರಳುವಂತೆ ಮಾಡಿದೆ. ಇಡೀ ಒಕ್ಕಲಿಗ ಸಮುದಾಯದ ಘಟಾನುಘಟಿ ನಾಯಕರು ಶನಿವಾರ ಬೆಂಗಳೂರಿನಲ್ಲಿ (Bengaluru) ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಸಭೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಪಕ್ಷಗಳ ನಾಯಕರು ಭಾಗಿಯಾದರು. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್​, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಸೇರಿದಂತೆ ಪ್ರಮುಖರು ಭಾಗಿಯಾದರು. ಸುದೀರ್ಘ ಚರ್ಚೆ ಮೂಲಕ ಮಹತ್ವದ ನಿರ್ಧಾರವನ್ನೂ ಕೈಗೊಳ್ಳಲಾಯಿತು.

ಸಭೆ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ, ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಬಾರದು. ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹ ಮಾಡಿದರು.

ಒಕ್ಕಲಿಗರ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು?

ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಯಿತು. ಯಾರೂ ಗೊಂದಲ ಮಾಡಿಕೊಳ್ಳದಂತೆ ನಿರ್ಮಲಾನಂದನಾಥ ಶ್ರೀ ಸಲಹೆ ಕೊಟ್ಟರು. ಉಪ ಜಾತಿಯಲ್ಲೂ ಒಕ್ಕಲಿಗ ಎಂದೇ ನಮೂದಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯವನ್ನು ನಿರ್ಮಲಾನಂದನಾಥ ಶ್ರೀ ಮಂಡಿಸಿದರೆ, ಅದಕ್ಕೆ ಸಭೆಯಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಸದಾನಂದಗೌಡ ಸೇರಿ ಹಲವು ನಾಯಕರು ಅನುಮೋದನೆ ಕೊಟ್ಟರು. ಇನ್ನು ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಿಕೆ ಮಾಡಬೇಕು ಎಂದೂ ಒತ್ತಾಯಿಸಲಾಯಿತು.

ಒಂದು ವೇಳೆ ಕ್ರಿಶ್ಚಿಯನ್ ಒಕ್ಕಲಿಗ ಎಂದು ಉಲ್ಲೇಖ ಮಾಡಿದರೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್, ಸಿ.ಟಿ.ರವಿ ಎಚ್ಚರಿಕೆ ಕೊಟ್ಟರು. ಸರ್ಕಾರ ಬೆಂಕಿ ಹಚ್ಚಲು ಏನ್ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದು ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಆರೋಪಿಸಿದರು.

ಇದನ್ನೂ ಓದಿ: ಜಾತಿ ಗಣತಿ 45 ದಿನ ಮುಂದೂಡಲು ನಿರ್ಮಲಾನಂದನಾಥಶ್ರೀ ಆಗ್ರಹ: ಕೊಟ್ಟ ಕಾರಣ ಇಲ್ಲಿದೆ

ಇನ್ನು ಒಕ್ಕಲಿಗರ ಸಭೆಯಲ್ಲಿ ನಾಯಕರ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಜಾತಿ ವಿಚಾರದಲ್ಲಿ ಸಿಎಂಗೆ ಡಿಸಿಎಂ ಒಳ್ಳೆಯ ಪ್ರಶ್ನೆ ಕೇಳಿದ್ದಾರೆ ಎಂದು ಕುಮಾರಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದರು. ಇದಕ್ಕೆ ಕೆಲ ನಾಯಕರು ಚಪ್ಪಳೆ ತಟ್ಟಿದರು. ಸಭೆಯಲ್ಲಿ ಡಿಸಿಎಂ ಡಿಕೆಶಿ, ಕುಮಾರಸ್ವಾಮಿ ಮುಖಾಮುಖಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾಣವಾಯಿತು.

ಒಟ್ಟಿನಲ್ಲಿ, ಹೊಸ ಜಾತಿ ಸಮೀಕ್ಷೆಗೆ ಒಕ್ಕಲಿಗ ನಾಯಕರಿಂದ ವಿರೋಧ ವ್ಯಕ್ತವಾಗಿರುವುದಂತೂ ಸುಳ್ಳಲ್ಲ. ಮುಖ್ಯವಾಗಿ, ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ