
ಬೆಂಗಳೂರು, ಏಪ್ರಿಲ್ 18: ಸಿಇಟಿ ಪರೀಕ್ಷೆ (CET Exam) ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ (Brahmin Students) ಜನಿವಾರ ತೆಗೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ (Sacred Thread/ Janivara) ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಬೀದರ್‌ನಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ಅಧ್ಯಕ್ಷ ಎಸ್ ರಘುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರತಿಭಟನೆಗೂ ಕರೆ ನೀಡಿದ್ದಾರೆ.
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ತೀರ್ಥಹಳ್ಳಿಯ ಬ್ರಾಹ್ಮಣ ವಿದ್ಯಾರ್ಥಿ ಅಭಿಜ್ಞಾ ಧರಿಸಿದ್ದ ಜನಿವಾರ ಮತ್ತು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿ ದಾರವನ್ನು ತೆಗೆಸಿದ್ದಾರೆ. ಈ ವಿಚಾರ ಕ್ಷಣಮಾತ್ರದಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟದ ಮುಖಂಡರು ಪರೀಕ್ಷಾ ಸಿಬ್ಬಂದಿಯ ನಡೆಯನ್ನು ಖಂಡಿಸಿದ್ದಾರೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಷ್ಟೇ ಅಲ್ಲದೆ, ಸಿಬ್ಬಂದಿ ಅದನ್ನು ತುಂಡು ಮಾಡಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್‌ನಲ್ಲಿ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಒಪ್ಪದ ಕಾರಣ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಬೀದರ್ನ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ಈ ವಿಚಾರವಾಗಿ ಬಾಲಕನ ತಾಯಿ ನೀತಾ ಕುಲಕರ್ಣಿ ‘ಟಿವಿ9’ ಜತೆ ಮಾತನಾಡಿ, ನನ್ನ ಮಗನ ಭವಿಷ್ಯದ ಜೊತೆಗೆ ಪರೀಕ್ಷಾ ಸಿಬ್ಬಂದಿ ಚೆಲ್ಲಾಟವಾಡಿದ್ದಾರೆ. ನನ್ನ ಮಗ ಸಿಇಟಿ ಬರೆದು ದೊಡ್ಡ ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದ. ಆದರೆ ಜನಿವಾರ ತೆಗೆಯದ್ದಕ್ಕೆ ಮಗನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ನನ್ನ ಮಗನನ್ನು ಪರೀಕ್ಷೆ ಪ್ರಾಧಿಕಾರವೇ ಎಂಜಿನಿಯರಿಂಗ್ ಕಾಲೇಜ್ಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಜನಿವಾರ ಹಾಕಿದ್ದಕ್ಕಾಗಿ ನನಗೆ ಪರೀಕ್ಷೆ ಬರೆಯಲಿಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಸುಚಿವೃತ ಕುಲಕರ್ಣಿ ಆರೋಪಿಸಿದ್ದಾನೆ. ಜನಿವಾರ ತೆಗೆದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದರು. ಆದರೆ, ನಮ್ಮ ಬ್ರಾಹ್ಮಣ ಸಂಪ್ರದಾಯದಲ್ಲಿ ಜನಿವಾರಕ್ಕೆ ಬಹಳ ಮಹತ್ವ ಇದೆ. ಹೀಗಾಗಿ ನಾನು ಜನಿವಾರ ತೆಗೆಯುವುದಿಲ್ಲ ಎಂದೆ. ಹೀಗಾಗಿ ನನ್ನನ್ನು ಹೊರ ಕಳುಹಿಸಿದರು ಎಂದು ಸುಚಿವೃತ ಕುಲಕರ್ಣಿ ಹೇಳಿದ್ದಾನೆ.
ಬೀದರ್ ಹಾಗೂ ಶಿವಮೊಗ್ಗದ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಜನಿವಾರ ತೆಗೆಸಿದ ಕ್ರಮದ ವಿರುದ್ಧ ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕು ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಕರೆ ನೀಡಿದ್ದಾರೆ.
ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಹೇಳಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ ಕ್ರಮಕ್ಕೆ ಸೂಚಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದೇ ಆದರೆ ಅತಿರೇಕ, ಕಠಿಣ ಕ್ರಮ ಕೈಗೊಳ್ಳುತ್ತೇವೆ: ಸಚಿವ ಎಂಸಿ ಸುಧಾಕರ್
ಜನಿವಾರ ತೆಗೆಸಿದ ವಿಚಾರವಾಗಿ ಕರ್ನಾಟಕದಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕರೆ ನೀಡಿದೆ. ಈ ವಿಚಾರವಾಗಿ ಬೆಂಗಳುರಿನ ಪ್ರೆಸ್ಕ್ಲಬ್ನಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಮಾಹಿತಿ ನೀಡಿದ್ದಾರೆ.
ಜನಿವಾರ ಅಥವಾ ಯಜ್ಞೋಪವೀತ ಎಂಬುದು ಬ್ರಾಹ್ಮಣ ಸಮುದಾಯಕ್ಕೆ (ಇತರ ಕೆಲವು ಸಮುದಾಯಗಳೂ ಜನಿವಾರ ಧರಿಸುತ್ತವೆ) ಬಹಳ ಮಹತ್ವದ್ದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಗಾಯತ್ರಿ ಮಂತ್ರ ದೀಕ್ಷೆಯ ಜತೆಗೆ ಬ್ರಾಹ್ಮಣ ವಟುಗಳಿಗೆ ಧಾರಣೆ ಮಾಡಿಸುವ 3 ಎಳೆಗಳುಳ್ಳ ಪವಿತ್ರ ದಾರವೇ ಜನಿವಾರ. ಯಜ್ಞೋಪವೀತ ಧರಿಸಿದ ನಂತರ ಆತ ಗಾಯತ್ರಿ ಮಂತ್ರ ಉಪಾಸನೆ ಮಾಡಲು, ವೇದಗಳನ್ನು ಕಲಿಯಲು, ಯಜ್ಞ ಮಾಡಲು ಅರ್ಹನಾಗುತ್ತಾನೆ.
ಇದನ್ನೂ ಓದಿ: CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು: ಆಕ್ರೋಶ
ಜನಿವಾರ ತೆಗೆಸಿದ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದು, ಸಿಇಟಿ ಪರೀಕ್ಷೆ ಬರೆಯುವ ವೇಳೆ ಜನಿವಾರ ತೆಗೆಯಬೇಕೆಂದಿಲ್ಲ ಎಂದಿದ್ದಾರೆ. ವಸ್ತ್ರ ಸಂಹಿತೆ ನಿಗದಿಪಡಿಸಲಾಗಿದ್ದು, ಅದನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಆದರೆ ಜನಿವಾರ ತೆಗೆಸಬೇಕೆಂದು ನಾವು ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
Published On - 2:14 pm, Fri, 18 April 25