ಚಿಕ್ಕಮಗಳೂರು: ಮಹಿಳೆ ಬಳಿ ಕುರಿಗಳನ್ನು ಖರೀದಿಸಿ ನಕಲಿ ನೋಟು ನೀಡಿದ ಆರೋಪಿಗಳು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟದ ಹೇಮಾವತಿ ಎಂಬ ಮಹಿಳೆ ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಹೇಮಾವತಿ ಅವರ ಬಳಿ ಅಪರಿಚಿತ ವ್ಯಕ್ತಿಗಳು 25 ಸಾವಿರ ರೂಪಾಯಿಗೆ ಕುರಿಗಳನ್ನು ಖರೀದಿಸಿದ್ದಾರೆ. ಆದರೆ, ಹೇಮಾವತಿಯವರಿಗೆ ಖೋಟಾ ನೋಟುಗಳನ್ನು ನೀಡಿದ್ದಾರೆ. ಹೇಮಾವತಿಯವರು ಬ್ಯಾಂಕ್ಗೆ ಹಣ ಜಮೆ ಮಾಡಲು ತೆರಳಿದಾಗ ಖೋಟಾ ನೋಟುಗಳು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು, ಏಪ್ರಿಲ್ 18: ಕುರಿ ಸಾಕಾಣಿಕೆ (Sheep farming) ಯಿಂದ ಅನೇಕರು ಜೀವನ ಕಟ್ಟಿಕೊಂಡಿದ್ದಾರೆ. ಕುರಿ ಹಾಲು ಮತ್ತು ಕುರಿಗಳನ್ನು ಮಾರಿ ಅನೇಕ ಕುರಿಗಾಹಿಗಳು (Shepherd) ತಮ್ಮ ಸಂಸಾರದ ಬಂಡಿಯನ್ನು ಸಾಗಿಸುತ್ತಿದ್ದಾರೆ. ಇದರಂತೆ, ಕಡೂರು (Kadur) ತಾಲೂಕಿನ ನಿಢಘಟ್ಟ ಗ್ರಾಮದ ಮಹಿಳೆಯೊಬ್ಬರು ಕುರಿ ಸಾಕಾಣಿಕೆ ಮಾಡಿ ಇದರಿಂದ ಬಂದ ಲಾಭದಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ, ಯಾರೋ ಅಪರಿಚಿತರು ಈ ಮಹಿಳೆಯಿಂದ ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೀಡಿ ಪರಾರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಖೋಟಾ ನೋಟು ಜನರ ಕೈಯಲ್ಲಿ ಹರಿದಾಡುತ್ತಿವೆ. ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಹೇಮಾವತಿ ಎಂಬವರ ಬಳಿ ಅಪರಿಚಿತರು ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೋಟು ನೀಡಿದ್ದಾರೆ. ಕುರಿಗಳನ್ನು ಮಾರಿ ಬಂದ ಹಣವನ್ನು ಹೇಮಾವತಿಯವರು ಎಸ್ಬಿಐ ಬ್ಯಾಂಕ್ನಲ್ಲಿರುವ ತಮ್ಮ ಖಾತೆಗೆ ಜಮೆ ಮಾಡಲು ಹೋಗಿದ್ದಾಗ ಖೋಟಾ ನೋಟು ಎಂದು ತಿಳಿದಿದೆ.
ಹೇಮಾವತಿ ಅವರು 25 ಸಾವಿರ ರೂಪಾಯಿಗೆ ಕುರಿಗಳನ್ನು ಮಾರಿದ್ದರು. ಈ ಹಣವನ್ನು ಹೇಮಾವತಿಯವರು ಬ್ಯಾಂಕ್ಗೆ ಜಮೆ ಮಾಡಲು ತೆರಳಿದ್ದಾರೆ. ಈ 25 ಸಾವಿರ ರೂಪಾಯಿಯಲ್ಲಿ 14 ಸಾವಿರ ರೂಪಾಯಿಯಷ್ಟು ನೋಟುಗಳು ಖೋಟಾ ಆಗಿವೆ. 500 ರೂ. ಮುಖಬೆಲೆಯ 28 ನೋಟುಗಳು ನೋಟುಗಳು ನಕಲಿ ಎಂದು ಬ್ಯಾಂಕ್ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದಾಂಡೇಲಿ ಮನೆಯಲ್ಲಿ ಕಂತೆ ಕಂತೆ ನಕಲಿ ನೋಟು ಪತ್ತೆ ಪ್ರಕರಣ: ಉತ್ತರ ಪ್ರದೇಶದ ಲಖನೌನಲ್ಲಿ ಆರೋಪಿಯ ಬಂಧನ
ಬಳಿಕ, ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ನಕಲಿ ನೋಟುಗಳನ್ನು ವಶಕ್ಕೆ ಪಡೆದು, ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹೇಮಾವತಿಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾ, “ಕುರಿಗಳನ್ನು ಮಾರಾಟ ಮಾಡಿ ಬಂದಿರುವ ಹಣ ಎಂದು ಹೇಳಿದ್ದಾರೆ. ನಂತರ, ಪೊಲೀಸರು ಹೇಮಾವತಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ನಕಲಿ ನೋಟು ನೀಡಿದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Fri, 18 April 25