ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿ ವರದಿಯಲ್ಲಿ ಒಳಪಂಗಡ ಗೊಂದಲ, ಚರ್ಚೆಗೆ ಗ್ರಾಸ
Karnataka caste census report: ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ. ಹೀಗಾಗಿ ಜಾತಿ ಜನಗಣತಿ ವಿಚಾರವಾಗಿ ಆತುರದ ನಿರ್ಧಾರ ಮಾಡದೆ, ಸಿದ್ದರಾಮಯ್ಯ ಸರ್ಕಾರ ಎಚ್ಚರಿಕೆ ಹೆಜ್ಜೆ ಅನುಸರಿಸುವ ತೀರ್ಮಾನಕ್ಕೆ ಬಂದಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದರ ಮಧ್ಯ ಈ ಜಾತಿ ಗಣತಿ ವರದಿಯಲ್ಲಿ ಮತ್ತಷ್ಟು ಗೊಂದಲಕಾರಿ ಅಂಶಗಳಿರುವುದು ಬಯಲಾಗಿದೆ. ಹೀಗಾಗಿ ಈ ವರದಿ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, (ಏಪ್ರಿಲ್ 17): ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿಗಣತಿ ವರದಿ(Karnataka caste census report) ವಿವಾದದ ಬೆಂಕಿ ಹೊತ್ತಿಸಿದೆ. ಈ ಬಗ್ಗೆ ಸಚಿವ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದೆ ಹೊತ್ತಲ್ಲಿ ಪ್ರಬಲ ಸಮುದಾಯಗಳ ವಿರೋಧಕ್ಕೆ ಪುಷ್ಟಿ ನೀಡುವಂತೆ ವರದಿಯಲ್ಲಿ ಮತ್ತಷ್ಟು ಗೊಂದಲಕಾರಿ ಅಂಶಗಳಿರುವುದು ಬಯಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ಸಚಿವರಿಗೆ ನೀಡಲಾಗಿರುವ ಜಾತಿಗಣತಿ ವರದಿಯ 53ನೇ ಪುಟದಿಂದ ಮುಸ್ಲಿಂ (Muslim) ಸಮುದಾಯದ ಬಗ್ಗೆ ಅಂಕಿ ಅಂಶಗಳನ್ನು ನೀಡಲಾಗಿದ್ದು, ಮುಸ್ಲಿಮರ 93 ಉಪ ಪಂಗಡಗಳನ್ನು ಗುರುತಿಸಲಾಗಿದೆ. ಆದ್ರೆ ಮುಸ್ಲಿಂ ಉಪ ಪಂಗಡಗಳನ್ನು ಒಟ್ಟಾಗಿ ಪರಿಗಣಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವರದಿಯಲ್ಲಿ ಒಳಪಂಗಡ ಗೊಂದಲ
ಜಾತಿ ಗಣತಿ ವರದಿಯಲ್ಲಿ ಮುಸ್ಲಿಮರ 93 ಉಪ ಪಂಗಡಗಳನ್ನು ಗುರುತಿಸಲಾಗಿದೆ. ಆದ್ರೆ ಮುಸ್ಲಿಂ ಉಪ ಪಂಗಡಗಳನ್ನು ಒಟ್ಟಾಗಿ ಪರಿಗಣಿಸಲಾಗಿದೆ. ಮುಸ್ಲಿಂ ಉಪಪಂಡಗಳೆಲ್ಲವೂ ಒಂದೇ ಕೆಟಗರಿ ಅಂದ್ರೆ ಕೆಟಗರಿ 2Bಅಡಿಯಲ್ಲೇ ಎಲ್ಲ ಮುಸ್ಲಿಂ ಉಪ ಪಂಗಡಗಳ ಪರಿಗಣಿಸಲಾಗಿದೆ. ಆದರೆ ಉಳಿದ ಹಿಂದೂ ಜಾತಿಗಳಲ್ಲಿ ಕೆಟಗರಿ ಪ್ರಕಾರ ಬೇರೆ ಬೇರೆ ವರ್ಗೀಕರಿಸಲಾಗಿದೆ. ಒಂದೇ ಜಾತಿಯಾದರೂ ಬೇರೆ ಬೇರೆ ಕೆಟಗರಿಯಲ್ಲಿ ಪರಿಗಣಿಸಲಾಗಿದೆ. ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ರಲ್ಲಿ ಬೇರೆ ಬೇರೆ ಜಾತಿಗಳು ಹಂಚಿಹೋಗಿವೆ. ಲಿಂಗಾಯತರಲ್ಲೇ 95ಕ್ಕೂ ಹೆಚ್ಚು ಉಪ ಪಂಗಡಗಳು ವಿಂಗಡಣೆ ಮಾಡಲಾಗಿದ್ದು, ಹಲವು ಉಪ ಪಂಗಡಗಳು ಬೇರೆ ಬೇರೆ ಕೆಟಗರಿಯಲ್ಲಿ ಸೇರ್ಪಡೆಯಾಗಿವೆ. ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳಾಗಿ ವಿಭಜನೆಯಾಗಿವೆ. ಈ ವಿಭಜನೆಯಿಂದ ಒಟ್ಟು ಜಾತಿಯ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.
ಇದನ್ನೂ ಓದಿ: ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಾತಿ ಗಣತಿ ವರದಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಿಷ್ಟು
ಆದ್ರೆ ಈ ವರದಿಯನ್ನು ಸಮರ್ಥಿಸಿಕೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮುಸ್ಲಿಂಮರಲ್ಲಿ ಒಳಪಂಗಡಗಳಿರುವುದು ನಿಜ. ಆದ್ರೆ ಕೆಲ ಲಿಂಗಾಯತರೇ ಕೇವಲ ಉಪಪಂಗಡಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿ, 2011ರಲ್ಲೇ ಮುಸ್ಲಿಮರ ಜನಸಂಖ್ಯೆ 75 ಲಕ್ಷ ಇತ್ತು. ಆದ್ರೆ ಈಗಿನ ಜಾತಿಗಣತಿ ವರದಿಯಲ್ಲಿ ಮುಸ್ಲಿಂ ಸಂಖ್ಯೆ ಕಡಿಮೆಯಿದೆ ಎಂದು ಹೇಳಿದ್ದರೆ, ಎನ್.ಎ.ಹ್ಯಾರಿಸ್, ನಮ್ಮಲ್ಲಿ ಒಳಪಂಗಡ ಇಲ್ಲ ಎಂದಿದ್ದಾರೆ.
ಜಾತಿ ಗಣತಿ ವರದಿ ಬಗ್ಗೆ ಮುಸ್ಲಿಮರ ಸಭೆ
ಮತ್ತೊಂದೆಡೆ ಜಾತಿ ಜನಗಣತಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರು ಸಹ ಸಭೆ ನಡೆಸಿದ್ದಾರೆ.. ಬೆಂಗಳೂರಿನ ಸಬೀಲ್ ಉರ್ ರಶಾದ್ ಅರೇಬಿಕ್ ಕಾಲೇಜಿನಲ್ಲಿ ವರದಿಯ ಸಾಧಕ-ಬಾಧಕಗಳ ಚರ್ಚೆ ಆಗಿದೆ.. ಈ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್, ಸಗೀರ್ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ಆರ್ ರೋಷನ್ ಬೇಗ್ ಉಪಸ್ಥಿತರಿದ್ದರು.
ವರದಿಯಲ್ಲಿ ನಮೂದಾಗಿರುವಂತೆ ಪ್ರಮುಖ ಅಂಶಗಳು
- ವೀರಶೈವ ಲಿಂಗಾಯುತ ಮುಖ್ಯ ಜಾತಿಯಡಿ ವೀರಶೈವ ಲಿಂಗಾಯುತ ಮತ್ತು ಇತರ 94 ಉಪ ಜಾತಿಗಳು ಇದ್ದು, 66,35,233 ಜನಸಂಖ್ಯೆ ಒಳಗೊಂಡಿರುತ್ತದೆ.
- ಒಕ್ಕಲಿಗ ಮುಖ್ಯ ಜಾತಿಯಡಿ ಒಕ್ಕಲಿಗ ಮತ್ತು ಇತರೆ 47 ಉಪ ಜಾತಿಗಳು ಇದ್ದು, 61,68,652 ಜನಸಂಖ್ಯೆ ಒಳಗೊಂಡಿರುತ್ತದೆ.
- ಕುರುಬ ಮುಖ್ಯ ಜಾತಿಯಡಿ ಕುರುಬ ಮತ್ತು ಇತರೆ 11 ಉಪ ಜಾತಿಗಳಿದ್ದು, 43,72,847 ಜನಸಂಖ್ಯೆ ಒಳಗೊಂಡಿರುತ್ತದೆ.
- ಮರಾತ/ಮರಾಠ ಮುಖ್ಯ ಜಾತಿಯಡಿ ಮರಾತ / ಮರಾಠ ಮತ್ತು ಇತರೆ 8 ಉಪಜಾತಿ ಇದ್ದು 14,76,894 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
- ಬೆಸ್ತರ್/ಬೆಸ್ತ/ಬೆಷ್ಕರ್ ಮುಖ್ಯ ಜಾತಿಯಡಿ ಬೆಸ್ತರ್/ಬೆಸ್ತ/ಬೆಷ್ಕರ್ ಮತ್ತು 47 ಉಪಜಾತಿಗಳಿದ್ದು 14,33,309 ಜನಸಂಖ್ಯೆ ಒಳಗೊಂಡಿದೆ.
- ಈಡಿಗ ಮುಖ್ಯ ಜಾತಿಯಡಿ ಈಡಿಗ ಮತ್ತು ಇತರೆ 24 ಉಪ ಜಾತಿಗಳು ಇದ್ದು, 14,12,493 ಜನಸಂಖ್ಯೆ ಒಳಗೊಂಡಿರುತ್ತದೆ.
- ವಿಶ್ವಕರ್ಮ ಮುಖ್ಯ ಜಾತಿಯಡಿ ವಿಶ್ವಕರ್ಮ ಮತ್ತು 45 ಉಪ ಜಾತಿಗಳಿದ್ದು 12,13,347 ಜನಸಂಖ್ಯೆ ಒಳಗೊಂಡಿದೆ.
- ಬಲಿಜ ಮುಖ್ಯ ಜಾತಿಯಡಿ ಬಲಿಜ ಮತ್ತು ಇತರೆ 34 ಉಪ ಜಾತಿಗಳು ಇದ್ದು, ಒಟ್ಟು 10,41,352 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
- ಮುಸ್ಲಿಂ ಮುಖ್ಯ ಜಾತಿಯಡಿ ಮುಸ್ಲಿಂ ಮತ್ತು ಇತರೆ 99 ಉಪ ಜಾತಿಗಳಿದ್ದು, ಒಟ್ಟಾರೆ 76,99,425 ಜನಸಂಖ್ಯೆ ಒಳಗೊಂಡಿರುತ್ತದೆ.
ಒಟ್ಟಾರೆ ಈ ಜಾತಿ ಗಣತಿ ಭವಿಷ್ಯ ನಿರ್ಣಾಯಕ ಹಂತ ತಲುಪಿದ್ದು, ಇಂದಿನ ಸಚಿವ ಸಂಪುಟದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದು ಕುತೂಹಲಕ ಮೂಡಿಸಿದೆ.
Published On - 5:48 pm, Thu, 17 April 25