ಬೆಂಗಳೂರು, ಜುಲೈ 03: ಇತ್ತೀಚಿನ ಕೆಲ ವರ್ಷಗಳಲ್ಲಿ ಸ್ಕೇಟಿಂಗ್ (skating) ಸಾಕಷ್ಟು ಜನರ ಮೆಚ್ಚಿನ ಕ್ರೀಡೆ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೂ ಸ್ಕೇಟಿಂಗ್ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಜನರು ಕೂಡ ಇದೇ ಸ್ಕೇಟಿಂಗ್ ಮೂಲಕ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿದ್ದಾರೆ. ಈ ಸ್ಕೇಟಿಂಗ್ ಕ್ರೀಡೆಯಲ್ಲಿ ಹಲವು ವಿಧಗಳಿದ್ದು ಅದರಲ್ಲಿ ಹಿಮ್ಮುಖವಾಗಿ ಇನ್ಲೈನ್ ಸ್ಕೇಟಿಂಗ್ ಕೂಡ ಒಂದು. ಇದೀಗ ಕರ್ನಾಟಕದ ರೋಲರ್ ಸ್ಕೇಟಿಂಗ್ ಕ್ಲಬ್ನ ಸದಸ್ಯರೊಬ್ಬರು 100 ಮೀಟರ್ ಅನ್ನು ಕೇವಲ 14.84 ಸೆಕೆಂಡುಗಳಲ್ಲಿ ಹಿಮ್ಮುಖವಾಗಿ ಇನ್ಲೈನ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ (Guinness World Record) ನಿರ್ಮಿಸಿದ್ದಾರೆ.
ಬೆಳಗಾವಿಯಲ್ಲಿರುವ ರೋಲರ್ ಸ್ಕೇಟಿಂಗ್ ಕ್ಲಬ್ನ ಸದಸ್ಯರಾದ ಶಿವಗಂಗಾ ಎಂಬುವವರು ಈ ದಾಖಲೆಯನ್ನು ಮಾಡಿದ್ದಾರೆ. ಇದೇ ವರ್ಷ ಮೇ 27ರಂದು ಶಿವಗಂಗಾ ಅವರು ಈ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ಸದ್ಯ ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ವಿಡಿಯೋದಲ್ಲಿ ಶಿವಗಂಗಾ ಅವರು ಇನ್ಲೈನ್ ಸ್ಕೇಟಿಂಗ್ ಅನ್ನು ಹಿಮ್ಮುಖವಾಗಿ ಸವಾರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋ ವೈರಲ್ ಬಳಿಕ ಸುಮಾರು 3.1 ಲಕ್ಷ ವೀಕ್ಷಣೆ ಮತ್ತು ಸುಮಾರು 8 ಸಾವಿರಕ್ಕೂ ಹೆಚ್ಚ್ ಲೈಕ್ ಪಡೆದುಕೊಂಡಿದೆ. ಇನ್ನು ನೆಟ್ಟಿಗರು ಇವರ ಈ ಸಾಹಸ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Guinness Records: 3 ಸೆಕೆಂಡುಗಳ ಒಳಗೆ A ಯಿಂದ Z ವರೆಗೆ ಟೈಪ್ ಮಾಡಿ ಗಿನ್ನೆಸ್ ದಾಖಲೆ ಬರೆದ ಭಾರತೀಯ
ಸಾಕಷ್ಟು ಜನರು ವಿವಿಧ ಕಾಮೆಂಟ್ಗಳನ್ನು ಮಾಡಿದ್ದು, ಕೆಲವರು ನಿಮ್ಮ ಈ ಸಾಹಸ ಪ್ರೇರಣೆಯಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ಈ ಸಾಧನೆಯನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಇತರರು ಇದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, “ದಿಲ್ ಸೇ ಸಲ್ಯೂಟ್” ಎಂದು ಬರೆದಿದ್ದಾರೆ. ಇನ್ನೊಬ್ಬರು ಇದು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:11 pm, Wed, 3 July 24