Mahadayi Authority: ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ, ಯೋಜನೆಯ ಅನುಷ್ಠಾನದ ಹಾದಿ ಸುಗಮ ಎಂದ ಸಿಎಂ

| Updated By: ರಮೇಶ್ ಬಿ. ಜವಳಗೇರಾ

Updated on: Feb 23, 2023 | 4:18 PM

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ.

Mahadayi Authority: ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ, ಯೋಜನೆಯ ಅನುಷ್ಠಾನದ ಹಾದಿ ಸುಗಮ ಎಂದ ಸಿಎಂ
Follow us on

ನವದೆಹಲಿ: ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸಲು ಮಹದಾಯಿ ಪ್ರವಾಹ್​(ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ) (Mahadayi Authority)ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಇದು ಜಲವಿವಾದ ಭಾಗವಾಗಿರುವ ಕರ್ನಾಟಕ, ಗೋಮಾ ಹಾಗೂ ಮಹಾರಾಷ್ಟ್ರ ನಡುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾದ ನಿರ್ಮಾಣಕ್ಕೆ ನೆರವಾಗಲಿದೆ. ಈ ಮೂಲಕ ಈ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಗೆ ಉಪಯೋಗವಾಗಲಿದೆ ಎಂದಿದ್ದಾರೆ.

ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಈ ಪ್ರಾಧಿ​ಕಾರ ರಚ​ನೆಗೆ ಒಪ್ಪಿಗೆ ನೀಡಿದೆ. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ಮೂರು ತಜ್ಞರು ಹಾಗೂ ಒಬ್ಬ ಅಧ್ಯಕ್ಷರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಅಧ್ಯಕ್ಷರು ಹಾಗೂ ತಜ್ಞರನ್ನು ನೇಮಿಸಲಿದೆ. ಇನ್ನು ಕೇಂದ್ರ ಸರ್ಕಾ​ರದ ಈ ನಿರ್ಧಾ​ರ​ವ​ನ್ನು ಮುಖ್ಯ​ಮಂತ್ರಿ ಬಸವ​ರಾಜ ಬೊಮ್ಮಾಯಿ, ಕೇಂದ್ರ ಸಂಸ​ದೀಯ ಸಚಿವ ಪ್ರಹ್ಲಾದ್‌ ಜೋಶಿ ಸ್ವಾಗ​ತಿ​ಸಿ​ದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಧನ್ಯವಾದ ಹೇಳಿದ ಪ್ರಹ್ಲಾದ್‌ ಜೋಶಿ

ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ‘ಮಹದಾಯಿ ಪ್ರವಾಹ’ ‘Mahadayi PRAWAH’ ( Progressive River Authority for Welfare and Harmony) ಪ್ರಾಧಿಕಾರವನ್ನು ಸ್ಥಾಪಿಸಲು ನಿರ್ಧರಿಸಿದೆ. ಇದರಿಂದ ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯದಂತೆ ಅನುಸರಣೆಗೆ, ಅನುಷ್ಠಾನಕ್ಕೆ ಈ ಪ್ರಾಧಿಕಾರ ಅನುಕೂಲವಾಗಲಿದೆ. ಮೂರು ರಾಜ್ಯಗಳ ಮಧ್ಯೆ ಸಹಯೋಗದೊಂದಿಗೆ ನೀರಿನ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇಡಲು ಇದು ಸಹಾಯವಾಗಲಿದೆ. ಪ್ರಾಧಿಕಾರ ಸ್ಥಾಪನೆಗೆ ಅನುಮತಿ ನೀಡಿದ ಪ್ರಧಾನಿ ಮತ್ತು ಕೇಂದ್ರ ಜಲಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು ಎಂದಿದ್ದಾರೆ.

ಯೋಜನೆಯ ಅನುಷ್ಠಾನದ ಹಾದಿ ಸುಗಮ ಎಂದ ಸಿಎಂ

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ತ್ವರಿತಗತಿಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಮಹಾದಾಯಿ ಪ್ರವಾಹ್ ರಚಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಕಿತ್ತೂರು ಕರ್ನಾಟಕ ಭಾಗದ ಜನತೆಯ ಬಹುದಿನಗಳ ಕನಸಾಗಿದ್ದ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯ ಅನುಷ್ಠಾನದ ಹಾದಿ ಸುಗಮವಾಗಿದೆ ಎಂದು ಪ್ರಾ​ಯ​ಪ​ಟ್ಟಿ​ದ್ದಾ​ರೆ.

ಮಹ​ದಾಯಿ ನದಿ ನೀರು ವಿವಾದ ನ್ಯಾಯ​ಮಂಡ​ಳಿಯು 2018ರಲ್ಲಿ ಕರ್ನಾ​ಟ​ಕಕ್ಕೆ 13.42 ಟಿಎಂಸಿ ನೀರು ಹಂಚಿ​ಕೆ​ಯಾ​ಗಿತ್ತು. ಇದ​ರಲ್ಲಿ 3.9 ಟಿಎಂಸಿ​ ನೀರನ್ನು ಕುಡಿ​ಯುವ ನೀರಿಗಾಗಿ ಬಳ​ಸುವ ಉದ್ದೇ​ಶ​ದಿಂದ ಕಳ​ಸಾ-ಬಂಡೂರಿ ನಾಲಾ​ಗಳ ಮೂಲಕ ಹುಬ್ಬಳ್ಳಿ, ಧಾರ​ವಾಡ ಹಾಗೂ ಬೆಳ​ಗಾವಿಯ ಕೆಲ ಪ್ರದೇ​ಶ​ಗ​ಳಿಗೆ ಪೂರೈ​ಸಲು ಕರ್ನಾ​ಟಕ ಸರ್ಕಾರ ಉದ್ದೇ​ಶಿ​ಸಿ​ತ್ತು. ಇತ್ತೀ​ಚೆ​ಗಷ್ಟೇ ಕಳ​ಸಾ-ಬಂಡೂರಿ ನಾಲಾ ಯೋಜ​ನೆಯ ಪರಿ​ಷ್ಕೃತ ಡಿಪಿ​ಆ​ರ್‌ಗೆ ಕೇಂದ್ರ ಸರ್ಕಾರ ಅನು​ಮತಿ ನೀಡಿದ್ದು, ಪರಿ​ಸರ ಅನು​ಮತಿ ಸಿಗು​ವು​ದೊಂದೇ ಬಾಕಿ ಇದೆ. ಪರಿ​ಸರ ಅನು​ಮ​ತಿ​ ಸಿಕ್ಕರೆ ಕರ್ನಾ​ಟ​ಕಕ್ಕೆ ನಾಲಾ ಯೋಜನೆ ಆರಂಭಿ​ಸಲು ಅನು​ಕೂ​ಲ​ವಾ​ಗ​ಲಿ​ದೆ.

ಮಹದಾಯಿ ಯೋಜನೆಯ ಪರಿಷ್ಕೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್​ 28ರಂದು ಒಪ್ಪಿಗೆ ನೀಡಿದೆ. ಈ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ನ್ಯಾಯಾಮಂಡಳಿಯ ಅಂತಿಮ ತೀರ್ಪನ್ನು ಗೋವಾ ಸರ್ಕಾರವು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದು, ಅದರ ವಿಚಾರಣೆ ಹಂತದಲ್ಲಿದೆ.