ಕಾಂಗ್ರೆಸ್ ಹೈಕಮಾಂಡ್ ಜತೆ ಏನೇನು ಚರ್ಚೆ ನಡೆಯಿತು? ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಿಷ್ಟು

| Updated By: Ganapathi Sharma

Updated on: Aug 24, 2024 | 3:10 PM

ಮುಡಾ ಹಗರಣ ಸಂಬಂಧ ಕಾಂಗ್ರೆಸ್ ಹೈಕಮಾಂಡ್​ ಭೇಟಿಯಾಗಿ ಸಮಾಲೋಚನೆ ನಡೆಸಿ ಬಂದಿರುವ ಸಿಎಂ ಸಿದ್ದರಾಮಯ್ಯ ಇದೀಗ ಬೆಂಗಳೂರಿನಲ್ಲಿ ಆ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದು ತಪ್ಪು ಎಂದ ಅವರು, ರಾಷ್ಟ್ರಪತಿಗಳಿಗೆ ದೂರು ನೀಡುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ. ವಿವರ ಇಲ್ಲಿದೆ.

ಕಾಂಗ್ರೆಸ್ ಹೈಕಮಾಂಡ್ ಜತೆ ಏನೇನು ಚರ್ಚೆ ನಡೆಯಿತು? ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಿಷ್ಟು
ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್ 24: ಕಾಂಗ್ರೆಸ್ ಹೈಕಮಾಂಡ್ ಜತೆ ಶುಕ್ರವಾರ ಸಭೆ ನಡೆಸಿದ್ದು, ಕರ್ನಾಟಕದ ಬೆಳವಣಿಗೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ನಾನು, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಲವು ಸಚಿವರು ದೆಹಲಿಗೆ ಹೋಗಿದ್ದೆವು. ರಾಜ್ಯದ ಬೆಳವಣಿಗೆ ಬಗ್ಗೆ ಮತ್ತು ಮುಡಾ ಪ್ರಕರಣದ ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದು ಕಾನೂನುಬಾಹಿರ. ಈ ಬಗ್ಗೆ ಸಚಿವ ಸಂಪುಟ ಸಭೆಯ ನಿರ್ಣಯ ಕೂಡ ಕಳುಹಿಸಲಾಗಿದೆ. ಪ್ರಾಸಿಕ್ಯೂಷನ್​ಗೆ ಅನುಮತಿ ಪ್ರಶ್ನಿಸಿ ಕೋರ್ಟ್​​ಗೂ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ಆಗಸ್ಟ್​​ 29ಕ್ಕೆ ಮುಂದೂಡಿಕೆಯಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿಗಳಿಗೆ ಕಾಂಗ್ರೆಸ್​ನಿಂದ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಪಕ್ಷದ ಎಲ್ಲರ ಅಭಿಪ್ರಾಯವೂ ಆಗಿದೆ ಎಂದರು.

ಮುಡಾ ವಿಚಾರವಾಗಿ ಬಿಜೆಪಿ ಪಾದಯಾತ್ರೆ ನಡೆಸಿದೆ. ಅದನ್ನು ನಾವು ರಾಜಕೀಯವಾಗಿಯೇ ಎದುರಿಸಿದ್ದೇವೆ. ಹಾಗೆಂದು ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದು ತಪ್ಪು ಎಂದರು.

ಮತ್ತೊಂದೆಡೆ, ರಾಜ್ಯಪಾಲರು ಸರ್ಕಾರದ 11 ಬಿಲ್​ ವಾಪಸ್​ ಕಳುಹಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಾಪಸ್​ ಕಳುಹಿಸಿರುವ ಬಿಲ್​ಗಳು ಸದನದಲ್ಲಿ ಅನುಮೋದನೆಗೊಂಡವಾಗಿವೆ. ಅವುಗಳ ಬಗ್ಗೆ ವಿವರಣೆ ಕೇಳಿದ್ದರೆ ಕೊಡುತ್ತಿದ್ದೆವು, ಆದರೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ ಎಂದರು.

ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ: ಪರಮೇಶ್ವರ

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ಶುಕ್ರವಾರ ಹೈಕಮಾಂಡ್​​​​ ನಾಯಕರು ಸಿಎಂ, ಡಿಸಿಎಂ ಜೊತೆ ಮಾತಾಡಿದ್ದಾರೆ. ಆಗಸ್ಟ್ 29ರಂದು ಬರುವ ತೀರ್ಪಿನ ಬಳಿಕ ಕೈಗೊಳ್ಳಬೇಕಿರುವ ನಡೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು. ದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ನೀಡಿದ್ದರೂ ಮುಂದಿದೆ ಬದಲಾವಣೆ? ಕಾಂಗ್ರೆಸ್ ಉನ್ನತ ಮೂಲಗಳಿಂದ ಸುಳಿವು

ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಬಿಜೆಪಿ, ಜೆಡಿಎಸ್​ಗೆ ಹೆದರಿಕೆ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸಹಕಾರ ಪಡೆದು ಸರ್ಕಾರ ಕೆಡವಲು ಯತ್ನಿಸಲಾಗುತ್ತಿದೆ. ರಾಜ್ಯಪಾಲರ ಮೂಲಕ ಸರ್ಕಾರ ಕೆಡವಲು ಒತ್ತಡ ಹಾಕಲಾಗುತ್ತಿದೆ ಎಂದು ಪರಮೇಶ್ವರ್ ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ