ಮುಡಾ ಹಗರಣ: ದೆಹಲಿಯಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ಜತೆ ಸಿಎಂ ಸಿದ್ದರಾಮಯ್ಯ ಕಾನೂನು ಸಮಾಲೋಚನೆ

| Updated By: Ganapathi Sharma

Updated on: Nov 21, 2024 | 11:22 AM

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪ್ರಸಿದ್ಧ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ಭೇಟಿಯಾಗಿ ಮುಡಾ ಹಗರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗಳು, ಹಾಗೂ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮೇಲ್ಮನವಿ ವಿಚಾರಗಳ ಬಗ್ಗೆ ಅವರು ಚರ್ಚಿಸಿದ್ದಾರೆ.

ಮುಡಾ ಹಗರಣ: ದೆಹಲಿಯಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ಜತೆ ಸಿಎಂ ಸಿದ್ದರಾಮಯ್ಯ ಕಾನೂನು ಸಮಾಲೋಚನೆ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ
Follow us on

ನವದೆಹಲಿ, ನವೆಂಬರ್ 20: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನವದೆಹಲಿಯಲ್ಲಿ ಖ್ಯಾತ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ಮುಡಾ ಹಗರಣ ಸಂಬಂಧ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು. ಪ್ರಸ್ತುತ ಮುಡಾ ಪ್ರಕರಣದ ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದ್ದು, ಈ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಸಿಂಘ್ವಿ ಮಧ್ಯೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಮತ್ತು ಪಾರ್ವತಿ ವಿರುದ್ಧದ ಆರೋಪ ಸಂಬಂಧ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ಹೈಕೋರ್ಟ್‌ನ ಏಕಸದಸ್ಯ ಪೀಠವು ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯು ಶನಿವಾರದಂದು ವಿಚಾರಣೆಗೆ ಬರಲಿದೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ವಕೀಲ ಅಭಿಷೇಕ್ ಮನುಸಿಂಘ್ವಿ ಜತೆ ಮುಂಬರುವ ಕಾನೂನು ಹೋರಾಟದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತೆರಳುವುದಕ್ಕೂ ಮುನ್ನ ಸಿಎಂ ಅವರು ಸಿಂಘ್ವಿಯನ್ನು ಭೇಟಿಯಾಗಿದ್ದಾರೆ.

ಮತ್ತೊಂದೆಡೆ, ಮುಡಾ ಹಗರಣ ಬಗ್ಗೆ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ತನಿಖೆಯ ಬಗ್ಗೆಯೂ ಸಿದ್ದರಾಮಯ್ಯ ಮತ್ತು ಸಿಂಘ್ವಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಪ್ರಕರಣ ಸಂಬಂಧ ಇಡಿ, ಇತರ ಆರೋಪಿಗಳನ್ನು ಈಗಾಗಲೇ ವಿಚಾರಣೆಗೆ ಕರೆದಿದೆ. ಸಿಎಂ ಸಿದ್ದರಾಮಯ್ಯರನ್ನು ಇನ್ನಷ್ಟೇ ವಿಚಾರಣೆಗೆ ಕರೆಯಬೇಕಿದೆ.

ಮುಡಾ ವಿರುದ್ಧ ಕೇಳಿಬಂತು ಮತ್ತೊಂದು ಗಂಭೀರ ಆರೋಪ

ಏತನ್ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರದ್ದು 20-30 ಕೋಟಿ ರೂಪಾಯಿ ಹಗರಣ ಇರಬಹುದಷ್ಟೆ. ಆದರೆ, ಇದೀಗ ಇದನ್ನೇ ಮುಂದಿಟ್ಟುಕೊಂಡು ಉಳಿದ ಭ್ರಷ್ಟರು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ

ಮುಡಾ ಹಗರಣ ಸಂಬಂಧ 2 ವಾರಗಳ ಹಿಂದೆ ಸಿಎಂ ಸಿದ್ದರಾಮಯ್ಯ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಮರಳಿ ವಿಚಾರಣೆಗೆ ಬರುವಂತೆ ಲೋಕಾಯುಕ್ತ ಹೇಳಿಲ್ಲ ಎಂದು ನಂತರ ಮಾಹಿತಿ ನೀಡಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ