ಸಿಗಂದೂರು ಸೇತುವೆ ಉದ್ಘಾಟನೆ; ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಯಾರೂ ಹಾಜರಾಗಿರಲಿಲ್ಲ. ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂಬ ಆರೋಪದಲ್ಲಿ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು. ಅದಕ್ಕೆ ಟ್ವೀಟ್ ಮೂಲಕ ಉತ್ತರಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಕಳುಹಿಸಲಾಗಿದ್ದ ಪತ್ರವನ್ನು ಲಗತ್ತಿಸಿದ್ದರು.

ಸಿಗಂದೂರು ಸೇತುವೆ ಉದ್ಘಾಟನೆ; ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
Siddaramaiah-PM Modi

Updated on: Jul 14, 2025 | 10:47 PM

ಬೆಂಗಳೂರು, ಜುಲೈ 14: ಕರ್ನಾಟಕದ ಅತಿ ದೊಡ್ಡ ಕೇಬಲ್ ಸೇತುವೆಯಾದ ಶಿವಮೊಗ್ಗದ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ಸೇತುವೆ (Sigandur Chowdeshwari Bridge) ಇದೀಗ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಕೊನೆ ಕ್ಷಣದಲ್ಲಿ ತಮಗೆ ಮಾಹಿತಿ ನೀಡಿದ್ದರಿಂದ ಇಂಡಿಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಬಿಟ್ಟು ಬರಲು ಸಾಧ್ಯವಾಗದೆ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದರು. ತಾವು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪತ್ರ ಬರೆದು ಕಾರ್ಯಕ್ರಮ ಮುಂದೂಡುವಂತೆ ಮನವಿ ಮಾಡಿದ್ದಾಗ ಅವರು ಒಪ್ಪಿದ್ದು, ನಂತರ ರಾಜ್ಯದ ಬಿಜೆಪಿ ನಾಯಕರ ಒತ್ತಾಯಕ್ಕೆ ಕಟ್ಟುಬಿದ್ದು ಇಂದೇ ತಮ್ಮ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಗಮನಕ್ಕೆ ತರದೆ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಎಕ್ಸ್​ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ ಪತ್ರವನ್ನು ಟ್ವೀಟ್​ ಮಾಡಿ, ಸ್ಪಷ್ಟನೆ ನೀಡಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲೇ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು ಎಂದು ಬರೆದಿದ್ದರು. ಇಂದಿನ ಕಾರ್ಯಕ್ರಮಕ್ಕೆ ಭೌತಿಕವಾಗಿ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ಆಹ್ವಾನ ನೀಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವು ವಹಿಸುವಂತೆ ಕೋರಲಾಗಿದೆ. ಒಂದು ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ವರ್ಚುವಲ್​ ಮೂಲಕವಾದರೂ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜುಲೈ 12ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಹ್ವಾನಿಸಲಾಗಿತ್ತು ಎಂದು ಸಚಿವ ನಿತಿನ್​ ಗಡ್ಕರಿ ಟ್ವೀಟ್​ ಮಾಡಿದ್ದರು.


ಇದನ್ನೂ ಓದಿ: ನಿಮ್ಮ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ಆಗಬೇಕು: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿದ್ದರಾಮಯ್ಯಗೆ 2 ಬಾರಿ ಆಹ್ವಾನಿಸಿದ್ದ ಗಡ್ಕರಿ

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕೊಂಡೊಯ್ದಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನಾ ಆಮಂತ್ರಣ ವಿಚಾರವಾಗಿ ಜಟಾಪಟಿಯ ನಡುವೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಸಿಎಂ ಸಿದ್ದರಾಮಯ್ಯ ಬರೆದಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರವನ್ನು ಕಡೆಗಣಿಸಲಾಗಿದೆ. ಪ್ರೋಟೋಕಾಲ್ ಪ್ರಕಾರ ನಡೆದುಕೊಂಡಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಅಂತ ನಾಮಕರಣ ಮಾಡಿದ ನಿತಿನ್ ಗಡ್ಕರಿ

ರಾಜ್ಯದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ನಡೆಸಿದರೆ ಮುಖ್ಯಮಂತ್ರಿಗಳ ಅಥವಾ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿ ಕಾರ್ಯಕ್ರಮ ಮಾಡಬೇಕು, ಜೊತೆಗೆ ಪ್ರೋಟೋಕಾಲ್ ಪಾಲಿಸಬೇಕು. ಆದರೆ, ಈ ರೀತಿ ನಡೆದುಕೊಂಡಿಲ್ಲ. ಕಾರ್ಯಕ್ರಮ ಮುಂದೂಡುವಂತೆ ಮನವಿ ಮಾಡಿದರೂ ಪರಿಗಣಿಸಿಲ್ಲ. ಇನ್ನುಮುಂದೆಯಾದರೂ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:45 pm, Mon, 14 July 25