ಬೆಂಗಳೂರು: ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕಳೆದ ಒಂದಷ್ಟು ದಿನಗಳಿಂದ ಮಳೆಗಾಲದ ಛಾಯೆ ಕಾಣಿಸಿಕೊಳ್ಳುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮೋಡ ಕವಿದ ವಾತಾವರಣ ಸದ್ಯ ಮುಂದುವರೆಯಲಿದ್ದು, ಈ ವಾರದಲ್ಲಿ ಮಳೆ ಸುರಿಯುವ ಸಾಧ್ಯತೆಯೂ ದಟ್ಟವಾಗಿದೆ. ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದ ಪರಿಣಾಮವಾಗಿ ಮೇ 16ರ ಸುಮಾರಿಗೆ ಕೇರಳ, ಕರ್ನಾಟಕ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ಭಾಗಗಳಲ್ಲಿ ಮಳೆ ಸುರಿಯಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ತೆರಳದೇ ಕಟ್ಟೆಚ್ಚರ ವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮೇ 11 ರಂದು ಹವಾಮಾನ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಮೇ 15ರ ಸುಮಾರಿಗೆ ದಕ್ಷಿಣ ಅರಬ್ಬೀ ಸಮುದ್ರದಲ್ಲಿ ಏಳಿರುವ ತೌಕ್ತೆ ಚಂಡಮಾರುತದ ಪರಿಣಾಮ ಮೇ 14-15ರಂದು ಕೇರಳ, ಲಕ್ಷದ್ವೀಪ ಭಾಗದಲ್ಲಿ ಭಾರೀ ಮಳೆ ಸುರಿಯುವ ಸಂಭವ ಇದೆ ಎನ್ನಲಾಗಿದೆ. ಅಂತೆಯೇ ಮೇ 15-16ರಂದು ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ಭಾಗದಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೆಲವು ಲೆಕ್ಕಾಚಾರದ ಪ್ರಕಾರ ಇದು ಗುಜರಾತ್ ಮತ್ತು ದಕ್ಷಿಣ ಪಾಕಿಸ್ತಾನದತ್ತ ತಿರುಗಬಹುದು ಎನ್ನಲಾಗುತ್ತಿದ್ದು, ಇನ್ನು ಕೆಲವರು ದಕ್ಷಿಣ ಒಮನ್ ಭಾಗಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ. ಸದ್ಯದ ವಾತಾವರಣವನ್ನು ನೋಡಿದರೆ ಕರಾವಳಿ ಸೇರಿದಂತೆ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದ್ದು, ಮೀನುಗಾರರು ಕಡಲಿಗಿಳಿಯದೆ ಎಚ್ಚರಿಕೆ ವಹಿಸಬೇಕಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಉತ್ತರ ಕನ್ನಡ, ಚಿತ್ರದುರ್ಗದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯವಾದ ಕೇರಳ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಮಳೆ ಹೆಚ್ಚಾಗಲಿದೆ. ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 15ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದ್ದು, ಮೇ 16ರಂದು ಚಂಡಮಾರುತದಿಂದ ಭಾರೀ ಮಳೆ ಉಂಟಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:
ಭಾರತದಲ್ಲಿ ಈ ವರ್ಷ ಉತ್ತಮ ಮುಂಗಾರು ನಿರೀಕ್ಷಿತ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯದ ಭರವಸೆ
Published On - 10:43 am, Thu, 13 May 21