AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಕ್ಕೆ ಬಂದು 3 ತಿಂಗಳಾದರೂ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ಮರೆತ ಕಾಂಗ್ರೆಸ್ ಸರ್ಕಾರ

ಮಂಜೂರಾದ ಎಲ್ಲಾ ಖಾಲಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣವೊಂದರಲ್ಲಿ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದರು.

ಅಧಿಕಾರಕ್ಕೆ ಬಂದು 3 ತಿಂಗಳಾದರೂ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ಮರೆತ ಕಾಂಗ್ರೆಸ್ ಸರ್ಕಾರ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 25, 2023 | 5:40 PM

Share

ಬೆಂಗಳೂರು, ಆಗಸ್ಟ್ 25: ಹಲವು ವರ್ಷಗಳಿಂದ ಖಾಲಿ ಬಿದ್ದಿರುವ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು (Government Posts) ಭರ್ತಿ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಕರ್ನಾಟಕ ಕಾಂಗ್ರೆಸ್ (Karnataka Congress) ಸರ್ಕಾರ ಹಿಂದುಳಿದಿರುವಂತೆ ತೋರುತ್ತಿದೆ. ಶೀಘ್ರದಲ್ಲೇ 100 ದಿನ ಪೂರೈಸಲಿರುವ ರಾಜ್ಯ ಸರ್ಕಾರ ಇನ್ನೂ ನೇಮಕಾತಿ ಪ್ರಕ್ರಿಯೆ ಆರಂಭಿಸಿಲ್ಲ ಎಂಬುದು ತಿಳಿದುಬಂದಿದೆ. ಪ್ರಸ್ತುತ, ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ 72 ಇಲಾಖೆಗಳಲ್ಲಿ 5.2 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 2.60 ಲಕ್ಷ ಹುದ್ದೆಗಳು ಖಾಲಿ ಇದ್ದು, ಕೆಲವನ್ನು ಗುತ್ತಿಗೆ ನೌಕರರು ನಿರ್ವಹಿಸುತ್ತಿದ್ದಾರೆ.

ಕೆಲವು ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆದರೆ, ಈ ಅರ್ಜಿಗಳನ್ನು ಹಲವು ತಿಂಗಳ ಹಿಂದೆಯೇ ಸ್ವೀಕರಿಸಲಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅರ್ಜಿ ಕರೆಯಲಾಗಿಲ್ಲ. ಈಗಿರುವ ಸಿಬ್ಬಂದಿಯೇ ಹೆಚ್ಚುವರಿ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸ್, ಶಿಕ್ಷಣ, ಕೃಷಿ ಸೇರಿದಂತೆ ಪ್ರಮುಖ ಇಲಾಖೆಗಳು ತೀವ್ರ ಸಿಬ್ಬಂದಿ ಕೊರತೆ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಾಗಿದೆ.

ಭರವಸೆ ನೀಡಿದ್ದ ರಾಹುಲ್ ಗಾಂಧಿ

ಮಂಜೂರಾದ ಎಲ್ಲಾ ಖಾಲಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣವೊಂದರಲ್ಲಿ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದರು.

ಸರ್ಕಾರಿ ಕ್ಷೇತ್ರದಲ್ಲಿ ನಾವು ಇಂದು ಘೋಷಣೆ ಮಾಡಿ ನಾಳೆ ನೇಮಕಾತಿ ಮಾಡುವಂಥ ವ್ಯವಸ್ಥೆ ಇಲ್ಲ, ಅದು ಸಾಧ್ಯವೂ ಇಲ್ಲ. ಅದಕ್ಕೆ ಒಂದು ಕಾರ್ಯವಿಧಾನವಿದ್ದು, ಸರ್ಕಾರ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಅವುಗಳ ಸಿಬ್ಬಂದಿಯ ಸ್ಥಿತಿಗತಿ ತಿಳಿದುಕೊಳ್ಳಬೇಕು. ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅರ್ಜಿ ಕರೆಯಬೇಕು. ಆದರೆ, ಮೂರು ತಿಂಗಳು ಕಳೆದರೂ ಯಾವುದನ್ನೂ ಆರಂಭಿಸಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಕಾನೂನು ಸಮಸ್ಯೆಗಳಿಂದಾಗಿ ನೇಮಕಾತಿ ಸ್ಥಗಿತಗೊಳ್ಳುವ ಸಾಧ್ಯತೆಗಳೂ ಇವೆ. ಈ ಹಿಂದೆ ಭರ್ತಿ ಮಾಡಬೇಕಿದ್ದ ಕನಿಷ್ಠ 45,000 ಹುದ್ದೆಗಳು ನ್ಯಾಯಾಲಯದ ಮುಂದೆ ಇವೆ ಎಂದು ಮೂಲಗಳು ವಿವರಿಸಿವೆ.

ಇದನ್ನೂ ಓದಿ: ನಾನು ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ, ಅವರೂ ಸಹ ಆಹ್ವಾನ ನೀಡಿಲ್ಲ: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ

ಏತನ್ಮಧ್ಯೆ, ಏಳನೇ ವೇತನ ಆಯೋಗದ ವರದಿಗಾಗಿ ಸರ್ಕಾರ ಕಾಯುತ್ತಿದೆ. ಇದು ಕೆಲವೇ ವಾರಗಳಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಜಾರಿಯಾದರೆ ಈಗಿರುವ ಸಿಬ್ಬಂದಿಯ ವೇತನಕ್ಕೆ 20,000 ಕೋಟಿ ರೂ.ಗೂ ಅಧಿಕ ಹೊರೆಯನ್ನು ಸರಕಾರ ಹೊರಬೇಕಾಗುತ್ತದೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಮಧ್ಯೆ, ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರವು ಆದಾಯವನ್ನು ಕ್ರೋಢೀಕರಿಸಲು ಹೆಣಗಾಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒಂದು ವರ್ಷದೊಳಗೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಅವರ ಸರ್ಕಾರವು 15,000 ಶಿಕ್ಷಕರ ಹುದ್ದೆಗಳನ್ನು ಒಳಗೊಂಡಂತೆ ಅರ್ಜಿಗಳನ್ನು ಕರೆದಿತ್ತು, ಆದರೆ ಕಾನೂನಿನ ಅಡಚಣೆಯಿಂದಾಗಿ ಅವುಗಳ ಪ್ರಕ್ರಿಯೆಯೂ ಸ್ಥಗಿತಗೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ