ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಆಂದೋಲ ಸಿದ್ದಲಿಂಗ ಸ್ವಾಮಿ ಹೆಸರೇಕೆ? ಬೆಂಬಲಿಗರು ಹೇಳೋದೇನು? ಇಲ್ಲಿದೆ ವಿವರ

| Updated By: Ganapathi Sharma

Updated on: Dec 31, 2024 | 1:30 PM

ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿ ಬೆಂಬಲಿಗರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಸಿದ್ದಲಿಂಗ ಸ್ವಾಮಿ ಹೆಸರೇಕೆ ಬಂತು? ಇವರಿಗೂ ಖರ್ಗೆಯವರಿಗೂ ಇರುವ ರಾಜಕೀಯ ವೈಮನಸ್ಸೇನು ಎಂಬ ವಿವರ ಇಲ್ಲಿದೆ.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಆಂದೋಲ ಸಿದ್ದಲಿಂಗ ಸ್ವಾಮಿ ಹೆಸರೇಕೆ? ಬೆಂಬಲಿಗರು ಹೇಳೋದೇನು? ಇಲ್ಲಿದೆ ವಿವರ
ಆಂದೋಲ ಸಿದ್ದಲಿಂಗ ಸ್ವಾಮಿ & ಪ್ರಿಯಾಂಕ್ ಖರ್ಗೆ
Follow us on

ಕಲಬುರಗಿ, ಡಿಸೆಂಬರ್ 31: ಗುತ್ತಿಗೆದಾರ ಸಚಿನ್ ಡೆತ್ ನೋಟ್​​ನಲ್ಲಿ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿ ಹತ್ಯೆಗೂ ಸಂಚು ಹೂಡಲಾಗಿದೆ ಎಂದು ಉಲ್ಲೇಖಿಸಿರುವುದರಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸ್ವಾಮೀಜಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಗುತ್ತಿಗೆದಾರ ಸಚಿನ್​ಗೆ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಲ್ಲದೆ, ಬಿಜೆಪಿ ನಾಯಕರ ಹಾಗೂ ಸಿದ್ದಲಿಂಗ ಸ್ವಾಮಿ ಕೊಲೆಗೆ ಸಂಚು ಹೂಡಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ರಾಜು ಕಪನೂರ ಮತ್ತು ಗ್ಯಾಂಗ್ ಸ್ವಾಮೀಜಿ ಹತ್ಯೆಗೆ ಪ್ಲಾನ್ ಮಾಡಿದೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವೂ ಇದೆ. ಹೀಗಾಗಿ ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿದ್ದಲಿಂಗ ಸ್ವಾಮೀಜಿಗೆ ಗನ್​​ಮ್ಯಾನ್ ಭದ್ರತೆ ಒದಗಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಸಿದ್ದಲಿಂಗ ಸ್ವಾಮಿ ಈ ಹಿಂದೆ ಹಲವು ಬಾರಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಸಿದ್ದಲಿಂಗ ಸ್ವಾಮೀಜಿ ಮಧ್ಯೆ ಆರೋಪ ಪ್ರತ್ಯಾರೋಪಗಳು ಹಲವು ಬಾರಿ ನಡೆದಿವೆ. ಸಚಿನ್ ಡೆತ್ ನೋಟ್​​ನಲ್ಲಿ ಸಿದ್ದಲಿಂಗ ಸ್ವಾಮಿ, ಇತರ ಬಿಜೆಪಿ ನಾಯಕರ ಹೆಸರು ಉಲ್ಲೇಖಿಸಿ, ಇವರ ಹತ್ಯೆಗೆ ಸಂಚು ಹೂಡಲಾಗಿದೆ ಎಂದು ಉಲ್ಲೇಖವಾಗಿರುವುದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.

ಡೆತ್​​ನೋಟ್​​ನಲ್ಲಿ ಕೊಲೆ ಸಂಚು ಆರೋಪ

ಸಚಿನ್ ಡೆತ್ ನೋಟ್​​​ನಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಂದು ಪಾಟೀಲ್, ಮಣಿಕಂಠ ಸೇರಿದಂತೆ ನಾಲ್ಕು ಜನರ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ಉಲ್ಲೇಖವಾಗಿತ್ತು.

ಬೀದರ್​​ನಲ್ಲಿಯೂ ಪ್ರತಿಭಟನೆ

ಏತನ್ಮಧ್ಯೆ, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೀದರ್​ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಲಾಯಿತು. ಡೆತ್​ನೋಟ್​​ನಲ್ಲಿ ಹಲವರ ಹೆಸರು ಉಲ್ಲೇಖಿಸಲಾಗಿದೆ. ಅವರೆಲ್ಲರನ್ನು ಬಂಧಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಬೀದರ್​ನ ಅಂಬೇಡ್ಕರ್​​ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಕರಣದ ತನಿಖೆ ಸಿಬಿಐಗೆ ಕೊಡುವಂತೆ ಕುಟುಂಬ ಆಗ್ರಹಿಸಿದೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ: ಖರ್ಗೆ ಮೇಲಿನ ಆರೋಪಗಳೇನು? ಇಲ್ಲಿದೆ ಸಮಗ್ರ ವಿವರ

ಪ್ರಿಯಾಂಕ್ ವೈಯಕ್ತಿಕವಾಗಿ ತೆಗೆದುಕೊಂಡು ಸವಾಲು ಹಾಕಿದ್ದಾರೆ. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದು ಹೇಳಿದ್ದಾರೆ. ಆತ್ಮಹತ್ಯೆಗೆ ಕಾರಣ ಪ್ರಿಯಾಂಕ್ ಖರ್ಗೆ ಎಡ ಬಲದಲ್ಲಿ ಇರುವವರೇ. ನಾವು ಸಚಿವ ಪ್ರಿಯಾಂಕ್ ಖರ್ಗೆಯನ್ನು ಟಾರ್ಗೆಟ್ ಮಾಡುತ್ತಿಲ್ಲ. ಬಟ್ಟೆ ಹರಿದುಕೊಳ್ಳುವ ಕೆಲಸ ಮಾಡಿರುವುದು ನೀವು. ರಾಜೀನಾಮೆ ತೀರ್ಮಾನ ನಿಮ್ಮದು, ಹೋರಾಟ ನಮ್ಮದು ಎಂದು ಛಲವಾದಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ