ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆಗೆ ತಾತ್ಕಾಲಿಕ ರಿಲೀಫ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ವಿರುದ್ಧ ಮಾನಹಾನಿ ಆರೋಪ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅ.30ರವರೆಗೆ 42ನೇ ಎಸಿಜೆಎಂ ಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರು, (ಅಕ್ಟೋಬರ್ 07): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧದ ಖಾಸಗಿ ದೂರಿಗೆ ಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆ ಆದೇಶಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣ ಸಂಬಂಧ ಬೆಂಗಳೂರು ಸಿದ್ದಾಪುರದ ನಿವಾಸಿ ಎ. ತೇಜಸ್ ಎಂಬುವರು ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ, ಪ್ರಕರಣ ಸಂಬಂಧ ಪ್ರಿಯಾಂಕ್ ಖರ್ಗೆ ಮತ್ತು ಹ್ಯಾರಿಸ್ ನಲಪಾಡ್ ಅವರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಕೆ.ಶಿವಪ್ರಸಾದ್ ಪ್ರಕರಣಕ್ಕೆ ಅ.30ರವರೆಗೆ ತಡೆ ನೀಡಿ ದೂರುದಾರ ತೇಜಸ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್ ತಕರಾರು: ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್
ಪ್ರಕರಣದ ಹಿನ್ನೆಲೆ
ಆರ್ಎಸ್ಎಸ್ ಸಂಘಟನೆಯ ಮೇಲೆ ನಿಷೇಧ ಹೇರಬೇಕು, ಸರ್ಕಾರಿ ಶಾಲೆ, ಸರ್ಕಾರಿ ಸ್ಥಳಗಳು, ಮೈದಾನಗಳಲ್ಲಿ ಈ ಸಂಘಕ್ಕೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಈ ಸಂಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ಉಂಟುಮಾಡುತ್ತಿದೆ. ಮಕ್ಕಳು ಮತ್ತು ಯುವಕರಲ್ಲಿ ನಕಾರಾತ್ಮ ಶಕ್ತಿ ಮತ್ತು ಮೂಲಭೂೂತವಾದಿ ಸಿದ್ದಾಂತಗಳನ್ನು ತುಂಬುತ್ತಾರೆ. ಆದ್ದರಿಂದ ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದರು.
ಜೊತೆಗೆ, ಆ ಪತ್ರವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿಯೂ ಹಂಚಿಕೆಕೊಂಡು, ಆರ್ಎಸ್ಎಸ್ ಜತೆಯಲ್ಲಿ ಸ್ನೇಹ ಮಾಡಬಾರದು ಎಂಬುದಾಗಿ ಹೇಳಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಮೂರನೇ ಆರೋಪಿಯಾಗಿರುವ ನಲಪಾಡ್, ಖಾಸಗಿ ಯೂಟ್ಯೂಬ್ ಚಾನಲ್ನಲ್ಲಿ ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಎರಡೂ ಹೇಳಿಕೆಗಳು ರಾಜ್ಯಾದ್ಯಂತ ಹರಿದಾಡಿವೆ. ಆದ್ದರಿಂದ ಈ ರೀತಿಯ ಅಧಾರ ರಹಿತ ಹೇಳಿಕೆಗಳನ್ನು ನೀಡಿ ಸಂಘದ ಗೌರವಕ್ಕೆ ಧಕ್ಕೆ ತಂದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Wed, 7 October 26




