ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂರನೇ ಹಂತದ ಅನ್‌ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್‌ಲಾಕ್ 3.O ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವ ಬಗ್ಗೆ ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ಭಕ್ತರಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗಷ್ಟೇ ಅವಕಾಶ ಮಾಡಿಕೊಡಲಾಗಿದೆ.
ರಾಜ್ಯಾದ್ಯಂತ ಪ್ರತಿದಿನ ಸಂಜೆ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಇರಲಿದೆ. ಆದರೆ, ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುವುದಿಲ್ಲ. ಧಾರ್ಮಿಕ, ರಾಜಕೀಯ ಇತರ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ಪಬ್ಗಳು ಕಾರ್ಯನಿರ್ವಹಿಸಲು ಅವಕಾಶ ಇಲ್ಲ ಹಾಗೂ ಬಾರ್ಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್ಗಳು ತೆರೆಯಲು ಅವಕಾಶ ನೀಡಲಾಗಿಲ್ಲ.
ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ್ದಾರೆ. 3ನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿ ಹಾಗೂ ಕೊವಿಡ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಅಶ್ವತ್ಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ..ಎಸ್. ರವಿಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.
ಕೊರೊನಾ ಎರಡನೇ ಅಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಕೂಡ ಕಡಿಮೆ ಆಗಿದೆ. ಕೊವಿಡ್-19 ಎರಡನೇ ಅಲೆ ಆತಂಕ ಕಡಿಮೆಯಾಗುತ್ತಿರುವಂತೆ ಲಾಕ್ಡೌನ್ ನಿಯಮಾವಳಿಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತಿದೆ. ಜೂನ್ 14ರಂದು ಮೊದಲ ಅನ್‌ಲಾಕ್ ಘೋಷಿಸಲಾಗಿತ್ತು. ಆ ಬಳಿಕ, ಜೂನ್ 21ರಂದು ಮತ್ತೊಂದು ಹಂತದ ಲಾಕ್ಡೌನ್ ಸಡಿಲಿಕೆ ಮಾಡಲಾಗಿತ್ತು. ಇಂದು (ಜುಲೈ 3) ಮೂರನೇ ಹಂತದ ಅನ್‌ಲಾಕ್ ಘೋಷಿಸಲಾಗಿದೆ. ಜುಲೈ 5 ಅಂದರೆ ಸೋಮವಾರದಿಂದ ಈ ನಿಯಮಾವಳಿಗಳು ಜಾರಿಗೆ ಬರಲಿದೆ.
ಕೊರೊನಾ ನಿಯಂತ್ರಣ ಕೆಲಸಕ್ಕೆ 54 ತಂಡ ರಚನೆ ಮಾಡಲಾಗಿದೆ. ಪ್ರತಿ ಟೀಂನಲ್ಲಿ 4 ಬಿಬಿಎಂಪಿ ಮಾರ್ಷಲ್‌ಗಳು ಇರ್ತಾರೆ. ಈ ತಂಡಗಳು ಮಾಸ್ಕ್, ಅಂತರದ ಬಗ್ಗೆ ಸೂಚಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದು ಬೆಳಗ್ಗೆ ನಡೆದ ಸಭೆಯ ಬಳಿಕ ಹೇಳಿಕೆ ನೀಡಿದ್ದರು. ಪೊಲೀಸರು, ಮಾರ್ಷಲ್‌ಗಳ ಮಧ್ಯೆ ಸಮನ್ವಯತೆ ಅಗತ್ಯ ಇದೆ. ಪೊಲೀಸ್ ಠಾಣಾ ಮಟ್ಟದಲ್ಲಿ ಸಮನ್ವಯತೆ ಇರಬೇಕು ಎಂದು ತಿಳಿಸಿದ್ದರು.
ಲಾಕ್ಡೌನ್ ಮಾರ್ಗಸೂಚಿಯಲ್ಲಿ ಏನೆಲ್ಲಾ ಬದಲಾವಣೆ, ಯಾವುದಕ್ಕೆ ಅವಕಾಶ ನೀಡಲಾಗಿದೆ ಹಾಗೂ ನೀಡಲಾಗಿಲ್ಲ ಎಂದು ಇಲ್ಲಿ ಓದಿರಿ.
ಇದನ್ನೂ ಓದಿ: Karnataka Unlock 3.0: ಹೊಸ ಅನ್‌ಲಾಕ್ ಮಾರ್ಗಸೂಚಿ ಪ್ರಕಟ; ಏನೆಲ್ಲಾ ಬದಲಾವಣೆ? ಯಾವುದಕ್ಕೆಲ್ಲಾ ಅವಕಾಶ?
Karnataka Unlock 3.0: ಬಾರ್ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ; ಸಿನಿಮಾ ಹಾಲ್ ಓಪನ್ ಸದ್ಯಕ್ಕಿಲ್ಲ
Published On - 7:10 pm, Sat, 3 July 21