ಕರ್ನಾಟಕ ಡ್ಯಾಂಗಳ ನೀರಿನ ಮಟ್ಟ: ಕೆಆರ್‌ಎಸ್, ಕಬಿನಿ, ಆಲಮಟ್ಟಿ, ಬಸವಸಾಗರ, ಹೇಮಾವತಿ ಜಲಾಶಯಗಳ ಇಂದಿನ ವಿವರ
ಕರ್ನಾಟಕದ ಪ್ರಮುಖ ಜಲಾಶಯಗಳ ಸೆಪ್ಟೆಂಬರ್ 30 ರ ನೀರಿನ ಮಟ್ಟದ ವಿವರ: ಬೆಂಗಳೂರಿಗರ ಕುಡಿಯುವ ನೀರಿನ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದಲ್ಲಿ ಇಂದು 104.42 ಅಡಿ ನೀರಿದ್ದು, 26.477 ಟಿಎಂಸಿ ಸಂಗ್ರಹವಿದೆ. ಉತ್ತರ ಕರ್ನಾಟಕದ ಪ್ರಮುಖ ಜಲಾಶಯ ಆಲಮಟ್ಟಿಯಲ್ಲಿ 518.53 ಮೀಟರ್ ನೀರಿನ ಸಂಗ್ರಹವಿದೆ. ಉಳಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ.

ಮುಖ್ಯಾಂಶಗಳು
- ಕೆಆರ್‌ಎಸ್ ಜಲಾಶಯದಲ್ಲಿ 26.477 ಟಿಎಂಸಿ ನೀರು
- ಆಲಮಟ್ಟಿಯಲ್ಲಿ 518.53 ಮೀಟರ್ ನೀರು ಸಂಗ್ರಹ
- ಬಸವಸಾಗರಕ್ಕೆ 9,684 ಕ್ಯೂಸೆಕ್ ಒಳಹರಿವು
ಬೆಂಗಳೂರು, ಸೆಪ್ಟೆಂಬರ್ 30: ಮುಂಗಾರು ಮಳೆ ಕೊರತೆಯ ಕಾರಣ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ವಾಡಿಕೆಗಿಂತ ಗಮನಾರ್ಹ ಇಳಿಕೆ ದಾಖಲಾಗಿದೆ. ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್., ಆಲಮಟ್ಟಿ, ಕಬಿನಿ, ಹೇಮಾವತಿ ಹಾಗೂ ಬಸವಸಾಗರ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ವಿವರ ಲಭ್ಯವಾಗಿದ್ದು, ವಿವರಗಳು ಇಲ್ಲಿವೆ;
ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ
ಮಂಡ್ಯ ಜಿಲ್ಲೆಯ ಕೆಆರ್ ಸಾಗರ ಜಲಾಶಯದಲ್ಲಿ ಇಂದು 104.42 ಅಡಿ ನೀರಿನ ಮಟ್ಟ ದಾಖಲಾಗಿದೆ. ಜಲಾಶಯಕ್ಕೆ 482 ಕ್ಯೂಸೆಕ್ ಒಳಹರಿವು ಇದ್ದು, 3,197 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 26.477 ಟಿಎಂಸಿ ನೀರು ಸಂಗ್ರಹವಿದೆ.
ಆಲಮಟ್ಟಿ ಜಲಾಶಯ ನೀರಿನ ಮಟ್ಟ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್. ಇಂದು 518.53 ಮೀಟರ್ ನೀರಿನ ಮಟ್ಟವಿದೆ. ಜಲಾಶಯಕ್ಕೆ ಒಳಹರಿವು ಇಲ್ಲ. ಹೊರಹರಿವು 11,308 ಕ್ಯೂಸೆಕ್ ಇದೆ.
ಕಬಿನಿ ಡ್ಯಾಂ ನೀರಿನ ಮಟ್ಟ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಇಂದು 68.95 ಅಡಿ ನೀರಿನ ಮಟ್ಟ ದಾಖಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿ. ಪ್ರಸ್ತುತ 11.17 ಟಿಎಂಸಿ ನೀರು ಸಂಗ್ರಹವಿದೆ. ನೀರಿನ ಸಂಗ್ರಹ 1.36 ಟಿಎಂಸಿ ಇದೆ. ಕಬಿನಿ ಜಲಾಶಯಕ್ಕೆ 916 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 800 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 800 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಒಟ್ಟು ಹೊರಹರಿವು 1,600 ಕ್ಯೂಸೆಕ್ ಇದೆ. ಜಲಾಶಯದ ವ್ಯಾಪ್ತಿಯಲ್ಲಿ 1 ಮಿ.ಮೀ. ಮಳೆ ದಾಖಲಾಗಿದೆ.
ಹೇಮಾವತಿ ಡ್ಯಾಂ ನೀರಿನ ಮಟ್ಟದ ವಿವರ
ಸೆಪ್ಟೆಂಬರ್ 30ರ ಬೆಳಗ್ಗೆ 6 ಗಂಟೆಯ ಮಾಹಿತಿಯಂತೆ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿ. ಇಂದಿನ ನೀರಿನ ಮಟ್ಟ 2,891.95 ಅಡಿ ಎಂದು ದಾಖಲಾಗಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 37.103 ಟಿಎಂಸಿ ಇದ್ದು, ಇಂದಿನ ಸಾಮರ್ಥ್ಯ 15.149 ಟಿಎಂಸಿ ಹಾಗೂ ಲೈವ್ ಸಾಮರ್ಥ್ಯ 10.777 ಟಿಎಂಸಿ ಇದೆ. ಒಳಹರಿವು 802 ಕ್ಯೂಸೆಕ್ ದಾಖಲಾಗಿದೆ.
ಬಸವಸಾಗರ ಜಲಾಶಯ ನೀರಿನ ವಿವರ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್. ಇಂದು 491.08 ಮೀಟರ್ ನೀರಿನ ಮಟ್ಟವಿದೆ. ಜಲಾಶಯಕ್ಕೆ 9,684 ಕ್ಯೂಸೆಕ್ ಒಳಹರಿವು ಇದ್ದು, 440 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




