ಕಾವೇರಿ ನೀರು: ಸುಪ್ರೀಂಕೋರ್ಟ್‌ನಿಂದ ಬೈಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದ ಡಿಕೆ ಶಿವಕುಮಾರ್
ತಮಿಳುನಾಡಿಗೆ ಪ್ರತಿದಿ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸುಪ್ರೀಂಕೋರ್ಟ್‌ನಿಂದ ಬೈಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದಿದ್ದಾರೆ. ಅಲ್ಲದೆ, ಈವರೆಗೆ ನೀರು ಬಿಡುವ ತೀರ್ಮಾನಕ್ಕೆ ನಾವು ಬಂದಿಲ್ಲ. ಇಂದು ರಾತ್ರಿ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ.
ಮೈಸೂರು, ಆಗಸ್ಟ್ 29: ತಮಿಳುನಾಡಿಗೆ (Tamil Nadu) ಪ್ರತಿದಿ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು (Cauvery Water) ನಿರ್ವಹಣಾ ಪ್ರಾಧಿಕಾರವು ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar), ಸುಪ್ರೀಂಕೋರ್ಟ್‌ನಿಂದ ಬೈಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಈ ಸಂಬಂಧ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇದೆ. ಆದೇಶದಂತೆ ಇಂದಿನಿಂದಲೇ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು. ನಾನು ಈವರೆಗೆ ನೀರು ಬಿಡುವಂತೆ ಯಾವುದೇ ಸೂಚನೆ ನೀಡಿಲ್ಲ. ಕಾನೂನು ತಜ್ಞರ ಬಳಿ ಈ ಸಂಬಂಧ ಎಲ್ಲಾ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಸೆ.1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ರಾಜ್ಯದ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ತಮಿಳುನಾಡಿನವರು ನಿತ್ಯ 24 ಸಾವಿರ ಕ್ಯೂಸೆಕ್ ನೀರು ಕೇಳಿದ್ದರು. ಇದನ್ನು ರಾಜ್ಯದ ಪರ ವಕೀಲರು ಐದು ಸಾವಿರಕ್ಕೆ ಇಳಿಸಿದ್ದಾರೆ. ಆದರೂ ಈವರೆಗೆ ನೀರು ಬಿಡುವ ತೀರ್ಮಾನಕ್ಕೆ ನಾವು ಬಂದಿಲ್ಲ. ಇಂದು ರಾತ್ರಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದರು.
ರೈತರಿಗೂ ಇದರ ಪರಿಸ್ಥಿತಿ ಗೊತ್ತಿದೆ, ರೈತರ ಹಿತ ಕಾಪಾಡಬೇಕಿದೆ. ಕಾನೂನನ್ನ ಕೂಡ ಗೌರವಿಸಬೇಕಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್, ಈ ಸಂಬಂಧ ಕೀಲಿ ಕೈ ಕೇಂದ್ರ ಸರ್ಕಾರದ ಕೈಯಲ್ಲೂ ಇದೆ. ರಾಜ್ಯ ಬಿಜೆಪಿ ನಮ್ಮನ್ನು ಕಟ್ಟಿ ಹಾಕುವ ಯತ್ನವನ್ನು ಮಾಡುತ್ತಿದೆ. ಯಾರು ಯಾವ ಸಮಯದಲ್ಲಿ ಎಷ್ಟು ನೀರು ಬಿಟ್ಟಿದ್ದಾರೆಂದು ಗೊತ್ತಿದೆ. ನಾನು ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೇನೆ ಎಂದರು.
ರಾಜ್ಯ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರಿಗೂ ಎಲ್ಲಾ ವಾಸ್ತವ ಸ್ಥಿತಿ ಗೊತ್ತಿದೆ. ಬಿಜೆಪಿಯವರು ರಾಜಕಾರಣ ಮಾಡಬೇಕೆಂದು ನಿರ್ಧರಿಸಿದ್ದಾರೆ, ಮಾಡಲಿ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ