
ಬೆಂಗಳೂರು (ನವೆಂಬರ್.30): ಕರ್ನಾಟಕದಲ್ಲಿ (Karnataka) ಬೀದಿ ನಾಯಿ (Street Dog) ಹಾವಳಿ ಮಿತಿ ಮೀರಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ನಾಯಿಗಳು ಎರಗಿ ಕಚ್ಚಿ ಗಾಯಗೊಳಿಸಿರುವ ಘಟನೆಗಳು ನಡೆದಿವೆ. ಇನ್ನು ನಾಯಿ ದಾಳಿಯಿಂದ ಮಕ್ಕಳು ಸಹ ಸಾವನ್ನಪ್ಪಿರುವ ಪ್ರಕರಣಗಳು ನಡೆದಿದೆ. ಹೀಗಾಗಿ ಶಾಲೆಗಳ ಸುತ್ತಮುತ್ತ ಬೀದನಾಯಿಗಳ ಉಪಟಳ ತಡೆಗಟ್ಟಲು ಶಿಕ್ಷಣ ಇಲಾಖೆ (Karnataka Education Department) ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಬೀದಿನಾಯಿಗಳ ಉಪಟಳ ತಡೆಗಟ್ಟಲು ಈ ಮಾರ್ಗಸೂಚಿ ಅನುಸಿರಬೇಕೆಂದು ಆದೇಶಿಸಲಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಪಟಾಣಿ ಮಕ್ಕಳು, ಮಹಿಳೆಯರ ಮೇಲೆಯೇ ಬೀದಿನಾಯಿಗಳ ದಾಳಿ ಹೆಚ್ಚಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲೂ ಪೋಷರರು ಭಯಪಡುವಂತಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ನಾಯಿಗಳ ಕಡಿತ ಹೆಚ್ಚಾಗಿದ್ದು, ಈ ಬಗ್ಗೆ ವರದಿ ಸಲ್ಲಿಸದ ಕರ್ನಾಟಕಕ್ಕೂ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಿತ್ತು. ಈ ಬಗ್ಗೆ ಮಾಹಿತಿ ನೀಡದ ಕಾರಣ ರಾಜ್ಯದ ಮೇಲೂ ಕೋರ್ಟ್ ಗರಂ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಬೀದಿ ನಾಯಿ ಕಡಿತಕ್ಕೆ ತುರ್ತು ಚಿಕಿತ್ಸಾ ಕ್ರಮಗಳಿಗೆ ಮುಂದಾಗಿದೆ.
ಬೆಂಗಳೂರು ಸೇರಿದ್ದಂತೆ ರಾಜ್ಯದ್ಯಲ್ಲಿ ಪ್ರತಿ ತಿಂಗಳು 40 ಸಾವಿರ ನಾಯಿ ಕಡಿತ ಪ್ರಕರಣ ದಾಖಲಾಗುತ್ತಿವೆ. ಈ ಬಗ್ಗೆ ರಾಜ್ಯ ಸೇರಿ ದೇಶದ ಎಲ್ಲ ರಾಜ್ಯಗಳಿಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಈಗ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ನಾಯಿ ಕಡಿತದ ಚಿಕಿತ್ಸಾ ಕ್ರಮಗಳ ಸುಧಾರಣೆಗೆ ಮುಂದಾಗಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಗೆ ತುರ್ತು ಕ್ರಮಗಳನ್ನು ಆಸ್ಪತ್ರೆಯಲ್ಲಿ ವಹಿಸುವಂತೆ ಸೂಚಿಸಿದೆ.
ಎಲ್ಲಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತದ ಚಿಕಿತ್ಸೆಯ ವ್ಯಾಕ್ಸಿನ್ ಔಷಧ ಲಭ್ಯತ್ಯ ಇಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಉಚಿತವಾಗಿ ಹಾಗೂ ತ್ವರಿತ ಚಿಕಿತ್ಸೆ ನೀಡುವ ಬಗ್ಗೆ ಸೂಚನೆ ನೀಡಿದ್ದು, ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸೇರಿದಂತೆ ಅವುಗಳ ನಿಯಂತ್ರಣ ಕ್ರಮಗಳ ಬಗ್ಗೆ ಕೋರ್ಟ್ ಸೂಚನೆ ಅನುಸರಿಸಲು ನಿರ್ದೇಶನ ನೀಡಿದೆ. ಪ್ರಾಣಿ ಪ್ರಿಯರು ಮತ್ತು ಸ್ಥಳೀಯ ಇಲಾಖೆಗಳ ಸಮನ್ವಯದ ಜೊತೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.