ಬೆಂಗಳೂರು, (ಆಗಸ್ಟ್ 27): ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೌದು.. ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ದವೂ ನಿರ್ಬಂಧಕಾಜ್ಞೆ ಕೋರಿದ್ದು, ಈ ಸಂಬಂಧ ಕೋರ್ಟ್, ನಾಳೆ(ಆಗಸ್ಟ್ 28) ಆದೇಶ ಪ್ರಕಟಿಸಲಿದೆ. ಆದ್ರೆ, ಬಸವರಾಜ ಬೊಮ್ಮಾಯಿ ಅವರು ಏಕೆ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.
ಓರ್ವ ವ್ಯಕ್ತಿಯ ಚಾರಿತ್ರ್ಯ ವಧೆ, ಮಾನಹಾನಿಯಾಗುವಂತೆ ಯಾರಾದರು ಹೇಳಿಕೆ, ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರ್ಟ್ನಿಂದ ನಿರ್ಬಂಧಕಾಜ್ಞೆ ತರುವುದು ಮಾಮೂಲಿಯಾಗಿದೆ. ಆದ್ರೆ, ಇದೀಗ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರು ಇದೀಗ ಏಕೆ ಏಕಾಎಕಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಸಿಎಂ ವಿರುದ್ಧ ಮುಡಾ ಹಗರಣ ಆರೋಪದ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ವಿಪಕ್ಷ ನಾಯಕರುಗಳ ಹಳೇ ಕೇಸ್ಗಳನ್ನು ರೀಓಪನ್ ಮಾಡುತ್ತಿದೆ. ಅಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ. ಇದೆಲ್ಲದರ ಮಧ್ಯ ಬಸವರಾಜ ಬೊಮ್ಮಾಯಿ ಕೋರ್ಟ್ ಮೊರೆ ಹೋಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬೊಮ್ಮಾಯಿ ವಿರುದ್ಧ ಏನಾದರೂ ಆರೋಪಗಳು ಇದ್ದಾವೆಯೇ? ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ? ಹೀಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ಅಂದಿನ ಬಿಜೆಪಿ ಸರ್ಕಾರದ 6 ಸಚಿವರು ಇದೇ ರೀತಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದರು. ಬಳಿಕ ಕೆಲ ರಾಜಕಾರಣಿಗಳು ಸರಣಿಯಾಗಿ ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ನಿಂದ ಸ್ಟೇ ತಂದಿದ್ದರು.
ಇದಕ್ಕೆ ಪೂರಕವೆಂಬಂತೆ ಅಂದಿನ ಸಚಿವರಾಗಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕ್ರೀಡಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಹ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿ ನಿರ್ಬಂಧ ತಂದಿದ್ದರು. ಅಲ್ಲದೇ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಮಾಜಿ ಸಿಎಂ ಸದಾನಂದಗೌಡ ಸಹ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ