
ಬೆಂಗಳೂರು, ಜನವರಿ 22: ವಿಧಾನ ಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣದ ವೇಳೆ ಸರ್ಕಾರ ಕೊಟ್ಟಿದ್ದನ್ನು ಪೂರ್ತಿ ಓದದೆ ಮೊದಲು, ಕೊನೆ ಪ್ಯಾರಾಗಳನ್ನು ಮಾತ್ರ ಗವರ್ನರ್ ಗೆಹ್ಲೋಟ್ ಓದಿರೋದೀಗ ಕಾಂಗ್ರೆಸಿಗರ ಭಾರೀ ವಿರೋಧಕ್ಕೆ ಕಾರಣವಾಗಿದೆ. ಸಿಎಂ, ಸ್ಪೀಕರ್, ಎಲ್ಲಾ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ. ಸರ್ಕಾರ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸ 2 ಪಟ್ಟು ಹೆಚ್ಚಿಸಲು ಸರ್ಕಾರ ಬದ್ಧ. ಜೈಹಿಂದ್, ಜೈ ಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದರು.
ಇನ್ನು ರಾಜ್ಯಪಾಲರಿಗೆ ನೀಡಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ‘ರಾಮ್’ ಹೆಸರು ಬಳಸದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜಿ ಬದಲು ವಿಬಿ ಗ್ರಾಮ್ ಜಿ ಎಂದು ನಮೂದು ಮಾಡಿದೆ. ರಾಜ್ಯಪಾಲರ ಭಾಷಣದ ಪ್ರತಿಯಲ್ಲಿನ ಅಂಶ ವಿಧಾನಸಭೆಯಲ್ಲಿ ದಾಖಲಾಗುತ್ತೆ. ಹೀಗಾಗಿ ಅಧಿಕೃತ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಾಯಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಭಾಷಣಕ್ಕೆ ಹರಿಪ್ರಸಾದ್ ಪಟ್ಟು; ಸದನದಿಂದ ಹೊರಟ ಗವರ್ನರ್ ಗೆಹ್ಲೋಟ್ ತಡೆದು ಹೈಡ್ರಾಮಾ
ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸಿಗರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಷ್ಟ್ರಗೀತೆಗೆ ರಾಜ್ಯಪಾಲರು ಅವಮಾನ ಮಾಡಿದ್ದಾರೆಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ದೂರಿದ್ದು, ಈ ಬಗ್ಗೆ ಸದನದಲ್ಲಿ ನಿರ್ಣಯ ಮಾಡಬೇಕು ಎಂದು ಸಂಸದೀಯ ವ್ಯವಹಾರ ಸಚಿವ H.K.ಪಾಟೀಲ್ ಒತ್ತಾಯ ಮಾಡಿದ ಪ್ರಸಂಗ ನಡೆದಿದೆ.
ಮತ್ತೊಂದೆಡೆ ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದ ಆಡಳಿತ ಪಕ್ಷ ಕಾಂಗ್ರೆಸ್ ನಡೆಗೆ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ಗೆ ಲಿಖಿತ ದೂರು ಸಲ್ಲಿಸಿದ ಬಿಜೆಪಿ, ರಾಜ್ಯಪಾಲರಿಗೆ ಅಗೌರವ ತೋರಿದ ಶಾಸಕರು, ಎಂಎಲ್ಸಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್ ನೇತೃತ್ವದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ದೂರು ನೀಡಲಾಗಿದ್ದು, ರಾಜ್ಯಪಾಲರನ್ನು ಅಡ್ಡಗಟ್ಟಿ, ತಳ್ಳಾಡಿ, ನೂಕುನುಗ್ಗಲು ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.