Balija Community: ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ

ಬಲಿಜ ಜನಾಂಗದ ಹಿತದೃಷ್ಟಿಯಿಂದ ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

Balija Community: ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ
ವಿಧಾನಸೌಧ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Mar 10, 2023 | 10:54 PM

ಬೆಂಗಳೂರು: ಬಲಿಜ ಜನಾಂಗ(Balija community) ಹಿತದೃಷ್ಟಿಯಿಂದ ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr K Sudhakar) ಚಿಕ್ಕಬಳ್ಳಾಪುರದಲ್ಲಿ (Chikkaballapur) ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಿದ್ದರು. ಜತೆಗೆ, ವಾರದೊಳಗೆ ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಹೇಳಿದ್ದರು. ಇದೀಗ ಅವರ ಭರವಸೆಯಂತೆಯೇ ಸರ್ಕಾರ ಕ್ರಮ ಕೈಗೊಂಡಿದೆ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದ್ದು, ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದೂ ಸುಧಾಕರ್ ಭರವಸೆ ನೀಡಿದ್ದರು.

ಚಿಕ್ಕಬಳ್ಳಾಪುರದಲ್ಲಿ ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸುಧಾಕರ್, ಒಂದು ವಾರದಲ್ಲಿ ಬಲಿಜ ಸಮುದಾಯದ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು. ಪ್ರಸ್ತುತ 2ಎ ಮೀಸಲಾತಿಗಾಗಿ ದೊಡ್ಡ ದೊಡ್ಡ ಸಮುದಾಯಗಳು ಹೋರಾಟ ನಡೆಸುತ್ತಿವೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಖಂಡಿತವಾಗಿಯೂ ಬಲಿಜ ಸಮುದಾಯದವರಿಗೆ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುತ್ತೇವೆ. ಜತೆಗೆ, ಬಲಿಜ ಸಂಘಕ್ಕೆ 8 ಕೋಟಿ ರೂ. ಮೌಲ್ಯದ 1 ಎಕರೆ ಜಮೀನು ನೀಡುತ್ತೇವೆ ಎಂದೂ ಭರವಸೆ ನೀಡಿದ್ದರು.

ರಾಜ್ಯದಲ್ಲಿ ಬಲಿಜ ಜನಾಂಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಮುಂದಿನ ಒಂದು ವಾರದಲ್ಲಿ ಬಲಿಜ ಜನಾಂಗ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡುತ್ತೇನೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೂ ಮುನ್ನ ಮೀಸಲಾತಿ ಕುರಿತ ಅಂತಿಮ ವರದಿ ಸಲ್ಲಿವುದಿಲ್ಲ: ಒಬಿಸಿ ಆಯೋಗದ ಅಧ್ಯಕ್ಷ

ಜನವರಿಯಲ್ಲಿ ನಡೆದಿತ್ತು ಭಾರೀ ಪ್ರತಿಭಟನೆ

ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜನವರಿ 9ರಂದು ಕರ್ನಾಟಕ ರಾಜ್ಯ ಬಲಿಜ ಸಂಘದ ನೇತೃತ್ವದಲ್ಲಿ ಸಮುದಾಯದ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್​​​ನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಹಲವು ಜಿಲ್ಲೆಗಳಿಂದ ಬಂದಿದ್ದ ಸಮುದಾಯದ ಜನರು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು.

ಬಲಿಜ ಜನಾಂಗ ಎಂದರೆ…

ಬಲಿಜ ಎಂಬುದು ಭಾರತೀಯ ಜಾತಿಗಳಲ್ಲಿ ಒಂದಾಗಿದೆ. ದೇಶದ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಜಾತಿಯ ಜನರು ವಾಸಿಸುತ್ತಿದ್ದಾರೆ. ಇವರನ್ನು ಬಣಜಿಗ ಎಂದೂ ಕರೆಯಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 pm, Fri, 10 March 23