ಬೆಂಗಳೂರು, ಸೆಪ್ಟೆಂಬರ್ 22: ತಿರುಪತಿ ತಿಮ್ಮಪ್ಪನ ಲಡ್ಡು (Tirupati Laddu) ಪ್ರಸಾದ ವಿಚಾರ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಲಡ್ಡು ತಯಾರಿಕೆಯಲ್ಲಿ ಈ ಹಿಂದೆ ಬಳಸಿರುವ ತುಪ್ಪ ಕಲಬೆರಕೆಯಿಂದ ಕೂಡಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಜಾಗೃತಗೊಂಡ ಕರ್ನಾಟಕ ಸರ್ಕಾರ (Karnataka Government) ರಾಜ್ಯದಲ್ಲಿ ತಯಾರಾಗುವ ವಿವಿಧ ಕಂಪನಿಯ ತುಪ್ಪವನ್ನು (Ghee) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ. ಇಲ್ಲಿ ತಯಾರಾಗುವ ಮತ್ತು ಮಾರಾಟ ಮಾಡುತ್ತಿರುವ ವಿವಿಧ ಕಂಪನಿಯ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶಿಸಿದ್ದಾರೆ.
ತ್ವರಿತಗತಿಯಲ್ಲಿ ವಿವಿಧ ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಕೆ ಕಂಡು ಬಂದಲ್ಲಿ, ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಸಚಿವರ ಆದೇಶ ಬೆನ್ನಲ್ಲೇ ವಿವಿಧ ಕಂಪನಿಗಳ ತುಪ್ಪದ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಜೊತೆಗೆ ರಾಜ್ಯದ ದೇವಸ್ಥಾನಗಳಲ್ಲಿ ತುಪ್ಪದಿಂದ ತಯಾರಾಗುವ ಪ್ರಸಾದಗಳ ಮಾದರಿಯನ್ನೂ ಆಹಾರ ಇಲಾಖೆ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದೆ.
ಇದನ್ನೂ ಓದಿ: ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ
ತಿರುಪತಿ ಲಡ್ಡುವಿಗೂ ಕೋಲಾರ ಹಾಲು ಒಕ್ಕೂಟಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ತಿರುಪತಿ ಲಡ್ಡುವಿನ ಸ್ವಾದದ ಹಿಂದೆ ಕೋಲಾರ ಹಾಲು ಒಕ್ಕೂಟದ ಶುದ್ದ ತುಪ್ಪದ ಗಮಲಿದೆ ಅನ್ನೋ ವಿಷಯ ಈಗ ಟಿಟಿಡಿ ಅಧಿಕಾರಿಗಳಿಗೂ ಮನವರಿಕೆಯಾಗಿದೆ.
ಕಳೆದ ಹಲವು ವರ್ಷಗಳಿಂದ ಕೋಲಾರ ಹಾಲು ಒಕ್ಕೂಟದಲ್ಲಿ ತಯಾರಾಗುವ ತುಪ್ಪವನ್ನು ತಿರುಪತಿ ತಿರುಮಲ ಟ್ರಸ್ಟ್ಗೆ ಅಂದರೆ ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಕೆಗೆ ಕಳಿಸಲಾಗುತ್ತಿತ್ತು. ಪ್ರತಿ ತಿಂಗಳು ಟನ್ಗಟ್ಟಲೆ ತುಪ್ಪ ಸರಬರಾಜಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪದ ಪೂರೈಕೆ ನಿಲ್ಲಿಸಲಾಗಿತ್ತು.
ಆದರೆ, ಲಡ್ಡುವಿನಲ್ಲಿ ಮೊದಲಿನ ರುಚಿ ಇಲ್ಲ, ಜೊತೆಗೆ ಲಡ್ಡು ತಯಾರಿಕೆಗೆ ಬಳಸುವ ತುಪ್ಪ ಕಲಬೆರಕೆ ಅನ್ನೋದು ತಿಳಿಯುತ್ತಿದ್ದಂತೆ, ಎಚ್ಚೆತ್ತಿರುವ ಟಿಟಿಡಿ ಈಗ ಮತ್ತೆ ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ನೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ತಿಂಗಳು 4000 ಟನ್ ತುಪ್ಪ ಕಳಿಸುವಂತೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ತಿರುಪತಿ ತಿರುಮಲದಲ್ಲಿ ಲಡ್ಡು ತಯಾರಿಕೆಗೆ ಕರ್ನಾಟಕದಿಂದ ಕಳಿಸುವ ತುಪ್ಪದ ಶೇ30ರಷ್ಟು ತುಪ್ಪವನ್ನೂ ಕೋಲಾರ ಹಾಲು ಒಕ್ಕೂಟದಿಂದಲೇ ಕಳಿಸಲು ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Sun, 22 September 24