ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ; ಪ್ರಲ್ಹಾದ್ ಜೋಶಿ ಆರೋಪ

ಮೆಕ್ಕೆಜೋಳ ಖರೀದಿಯ ವಿಷಯದಲ್ಲಿ ಕರ್ನಾಟಕ ಸರ್ಕಾರವು ವಿನಾಕಾರಣ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ. ವಾಸ್ತವದ ವಿಚಾರವೆಂದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನದೇ ಆದ ಮಟ್ಟದಲ್ಲಿ ಅತ್ಯಂತ ತುರ್ತು ಮತ್ತು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿಗಳು 17.94 ಲಕ್ಷ ಟನ್ ಮೆಕ್ಕೆಜೋಳ ಆಮದು ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ತಪ್ಪು ಮಾಹಿತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ; ಪ್ರಲ್ಹಾದ್ ಜೋಶಿ ಆರೋಪ
Pralhad Joshi

Updated on: Nov 22, 2025 | 9:19 PM

ಬೆಂಗಳೂರು, ನವೆಂಬರ್ 22: ಮೆಕ್ಕೆ ಜೋಳ ಖರೀದಿ ಹಾಗೂ ಆಮದು ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸುಳ್ಳುಗಳನ್ನು ಹೇಳುತ್ತಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಮೆಕ್ಕೆಜೋಳ ಖರೀದಿ, ಎಥನಾಲ್ ಉತ್ಪಾದನೆ ಮತ್ತು ಬೆಂಬಲ ಬೆಲೆ ನೀಡುವಲ್ಲಿ ರಾಜ್ಯ ಸರ್ಕಾರ ತಾನು ತುರ್ತಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಮರೆತು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ ಎಂದು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಕೆಲವು ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ.

ಮೆಕ್ಕೆಜೋಳ ಖರೀದಿಯ ವಿಷಯದಲ್ಲಿ ಕರ್ನಾಟಕ ಸರ್ಕಾರ ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಈ ನಿಟ್ಟಿನಲ್ಲಿ ತಕ್ಷಣ ಕೈಗೊಳ್ಳಬೇಕಾದ ಕಾರ್ಯವನ್ನು ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳದ ಖಾತರಿ ಖರೀದಿಗೆ ಎನ್‌ಸಿಸಿಎಫ್ (NCCF) ಅಥವಾ ನಾಫೆಡ್ (NAFED)ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಾಜ್ಯದ ಡಿಸ್ಟಿಲರಿಗಳಿಗೆ (distilleries) ರಾಜ್ಯ ಸರಕಾರ ಏಕೆ ಸೂಚನೆ ನೀಡಿಲ್ಲ? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದಿಂದಲೇ ಪರವಾನಗಿ ಪಡೆದ ಈ ಡಿಸ್ಟಿಲರಿಗಳಿಗೆ, ಖಚಿತ ಖರೀದಿಗಾಗಿ ಎನ್‌ಸಿಸಿಎಫ್ ಅಥವ ನಾಫೆಡ್‌ನೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿತ್ತು. ಆದರೆ ಅದು ನಡೆದಿಲ್ಲ. ಈ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು (SOP) ಈಗಾಗಲೇ ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ, ಪಾಲಿಸದಿದ್ದರೆ ಕಠಿಣ ಕ್ರಮ: ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ

ಕನಿಷ್ಠ ಬೆಂಬಲ ಬೆಲೆ (MSP) ಜಾರಿ ಬಗ್ಗೆ ಕೇಂದ್ರದ ಕಡೆಗೆ ಬೆರಳು ತೋರಿಸುವ ಮುನ್ನ ಡಿಸ್ಟಿಲರಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿಯೇ (MSP) ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಕರ್ನಾಟಕ ಸರ್ಕಾರ ಏಕೆ ಕಡ್ಡಾಯಗೊಳಿಸಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ. ಸ್ಥಳೀಯ ಖರೀದಿ ನಿಯಮಗಳನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರದ ಬಳಿ ಇದೆ. ಒಂದು ವೇಳೆ ಡಿಸ್ಟಿಲರಿಗಳು ಎಂ.ಎಸ್.ಪಿ ಗಿಂತ ಕಡಿಮೆ ದರದಲ್ಲಿ ಖರೀದಿಸುತ್ತಿದ್ದರೆ, ಅದಕ್ಕೆ ರಾಜ್ಯ ಸರ್ಕಾರವು ಸೂಕ್ತ ಆದೇಶ ನೀಡದಿರುವುದೇ ಮುಖ್ಯ ಕಾರಣ.ಡಿಸ್ಟಲರಿಗಳು ಬೇಡಿಕೆಯನ್ನು ನೀಡಬೇಕು ಎಂದು SoP ಎಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ ಈ ಎಲ್ಲ ಡಿಸ್ಟಾಲರಿಗಳು ಕಾರ್ಯನಿರ್ವಹಿಸುವುದು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಅಡಿಯಲ್ಲಿ, ಸರ್ಕಾರದ ಈ ನಿಷ್ಕ್ರಿಯತೆಗೆ ಇಂದು ರೈತರು ಬೆಲೆ ತೆರುತ್ತಿದ್ದಾರೆ. ಇದಕ್ಕ ಮೂಲ ತಮ್ಮ ಆಡಳಿತದ ವೈಫಲ್ಯತೆ ಎಂದಿದ್ದಾರೆ.


ಹಾಗೇ, ಭಾರತ ಸರ್ಕಾರವು ಈ ವರ್ಷ 70 ಎಲ್.ಎಂ.ಟಿ (LMT) ಮೆಕ್ಕೆಜೋಳ ಆಮದು ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪವು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. 2025-26ರ ನೈಜ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಆಮದು (Imports): ಕೇವಲ ~0.5 LMT ಮಾತ್ರ. ರಫ್ತು (Exports): ~2.52 LMT ಮಾತ್ರ ಎಂದು ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರಿಗಾಗಿ ಕೇಂದ್ರ ಮಾಡಿದ್ದೇನು? ದಾಖಲೆ ಸಮೇತ ಸಿಎಂ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು

ಇನ್ನೊಂದೆಡೆ, ಮೆಕ್ಕೆಜೋಳದ ಆಮದು ಸುಂಕವು ಶೇ. 50ರಷ್ಟಿದ್ದು, ಇದು ಆಮದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಸುಳ್ಳು ಅಂಕಿಅಂಶಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ, ನಿಖರತೆಯೇ ಮುಖ್ಯ. ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನೇ ತಮ್ಮ ಆಡಳಿತದ ಮೂಲ ಮಂತ್ರವನ್ನಾಗಿಸಿಕೊಂಡಿದ್ದೆ ಇದಕ್ಕೆ ಕಾರಣವಲ್ಲವೇ? ಎಂದು ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.

ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಹಂಚಿಕೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿರುವದನ್ನು ರಾಜ್ಯ ಸರ್ಕಾರ ಮರೆಮಾಚುತ್ತಿರುವ ಸತ್ಯವೇನೆಂದರೆ, ಎಥೆನಾಲ್ ಮತ್ತು ಕೈಗಾರಿಕಾ ಬಳಕೆಗೆ ಹಂಚಿಕೆ ಮಾಡಲಾದ ಮೆಕ್ಕೆಜೋಳದ ಪ್ರಮಾಣದಲ್ಲಿ ಅಧಿಕ ಏರಿಕೆಯಾಗಿದೆ.

* 2022-23: 8.29 LMT

* 2023-24: 75.38 LMT

*  2024-25: 125.75 LMT

ಇದು 2022-23 ಕ್ಕೆ ಹೋಲಿಸಿದರೆ 1,417% ರಷ್ಟು ಹೆಚ್ಚಳವಾಗಿದೆ ಮತ್ತು ಕಳೆದ ವರ್ಷಕ್ಕಿಂತ 66% ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು (Demand) ಸ್ಪಷ್ಟವಾಗಿ ಹೆಚ್ಚಿಸಿದೆ, ಆದರೆ ರಾಜ್ಯ ಸರ್ಕಾರವು ಇದರ ಲಾಭ ರೈತರಿಗೆ ಸಿಗುವಂತೆ ನೋಡಿಕೊಳ್ಳುವಲ್ಲಿ ಸೋತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಂಕಿ-ಅಂಶಗಳ ಸಹಿತ ವಿವರಿಸಿದ್ದಾರೆ.

ನಮ್ಮ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರತಿ ಬಾರಿಯೂ ಕೇಂದ್ರದತ್ತ ಬೆರಳು ಮಾಡಿ ದೂಷಿಸುವ ಬದಲು, ರೈತರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರವು ಕೂಡಲೇ ತಾನು ಮಾಡಬೇಕಾದ ಕರ್ತವ್ಯಗಳನ್ನೂ ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ನೆರವೇರಿಸುವುದು ಒಳ್ಳೆಯದು ಎಂದು ರಾಜ್ಯ ಸರ್ಕಾರ ಪ್ರಲ್ಹಾದ್ ಜೋಶಿ ಕಿವಿಮಾತು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ