ಕರ್ನಾಟಕ ಸರ್ಕಾರದಿಂದ ಮಹತ್ತರ ಹೆಜ್ಜೆ: ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ 1ರಷ್ಟು ಮೀಸಲಾತಿ

Transgenders: ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಇತರ ಹಿಂದುಳಿದ ವರ್ಗಗಳ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಈ ಆಂತರಿಕ ಮೀಸಲಾತಿ ಲಭ್ಯವಿರುತ್ತದೆ. 1977 ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ 9 ನೇ ತಿದ್ದುಪಡಿಯು....

ಕರ್ನಾಟಕ ಸರ್ಕಾರದಿಂದ ಮಹತ್ತರ ಹೆಜ್ಜೆ: ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ 1ರಷ್ಟು ಮೀಸಲಾತಿ
ಪ್ರಾತಿನಿಧಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Jul 07, 2021 | 5:34 PM

ಬೆಂಗಳೂರು: ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕಾದ ಯಾವುದೇ ಸೇವೆ ಅಥವಾ ಎಲ್ಲಾ ವರ್ಗದ ಉದ್ಯೋಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (transgenders ) ಒಂದು ಶೇಕಡಾ ಮೀಸಲಾತಿ ನೀಡುವಂತೆ ಅಧಿಸೂಚನೆ ಹೊರಡಿಸಿದೆ.

ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಇತರ ಹಿಂದುಳಿದ ವರ್ಗಗಳ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಈ ಆಂತರಿಕ ಮೀಸಲಾತಿ ಲಭ್ಯವಿರುತ್ತದೆ. 1977 ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ 9 ನೇ ತಿದ್ದುಪಡಿಯು, ನೇಮಕಾತಿ ಅಧಿಕಾರಿಗಳಿಗೆ ಪುರುಷ ಅಥವಾ ಸ್ತ್ರೀಯರ ಹೊರತಾಗಿ ಅರ್ಜಿದಾರರನ್ನು ‘ಇತರರು’ ಎಂದು ಗುರುತಿಸಲು ಅನುವು ಮಾಡಿಕೊಡಲು ಪ್ರತ್ಯೇಕ ಕಾಲಂ ನೀಡುವಂತೆ ನಿರ್ದೇಶಿಸುತ್ತದೆ.

ಕೇಂದ್ರ ಸರ್ಕಾರದ 2019 ರ ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ಸಂರಕ್ಷಣೆ) ಕಾಯ್ದೆಯಲ್ಲಿ ವಿವರಿಸಿದಂತೆ ಕರ್ನಾಟಕ ಸರ್ಕಾರ ‘ಲೈಂಗಿಕ ಅಲ್ಪಸಂಖ್ಯಾತ ’ ಎಂಬ ವ್ಯಾಖ್ಯಾನವನ್ನು ಅನುಸರಿಸುತ್ತದೆ. ‘ಲೈಂಗಿಕ ಅಲ್ಪಸಂಖ್ಯಾತ ‘ ಎಂದರೆ ಅವರ ಲಿಂಗವು ಹುಟ್ಟಿನಿಂದಲೇ ಅವರಿಗೆ ನಿಗದಿಪಡಿಸಿದ ಲಿಂಗದೊಂದಿಗೆ ಹೊಂದಿಕೆಯಾಗದಿರುವುದು, ಟ್ರಾನ್ಸ್‌ಮ್ಯಾನ್ ಅಥವಾ ಟ್ರಾನ್ಸ್‌ವುಮನ್, ಇಂಟರ್‌ಸೆಕ್ಸ್ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿ, ಜೆಂಡರ್ ಕ್ವೀರ್ ಸಾಮಾಜಿಕ-ಸಾಂಸ್ಕೃತಿಕ ಗುರುತುಗಳನ್ನು ಹೊಂದಿರುವ ಕಿನ್ನರ್ , ಹಿಜ್ರಾ, ಅರವಣಿ ಮತ್ತು ಜೋಗತಾ ಎಂದು ಕಾಯ್ದೆ ಹೇಳುತ್ತದೆ.

ಎಲ್ಲಾ ನೇರ ನೇಮಕಾತಿಗಳಲ್ಲಿ, ಜನರಲ್ ಮೆರಿಟ್, ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ವಿಭಾಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದು ಶೇಕಡಾ ಖಾಲಿ ಹುದ್ದೆಗಳು, ಸರ್ಕಾರವು ನೀಡುವ ಯಾವುದೇ ಸಾಮಾನ್ಯ ಸೂಚನೆಗೆ ಒಳಪಟ್ಟಿರುತ್ತದೆ. ನೇಮಕಾತಿ ವಿಧಾನದ ಮೂಲಕ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಭರ್ತಿ ಮಾಡಿ ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್​​ಜಿಒ ಸಂಗಮ ಮತ್ತು ಕಾರ್ಯಕರ್ತೆ ನಿಶಾ ಗುಲೂರು ಸಲ್ಲಿಸಿದ್ದ ಪಿಐಎಲ್ ವಿಚಾರಣೆಯ ಸಂದರ್ಭದಲ್ಲಿ ಕಳೆದ ತಿಂಗಳು ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಕರಡು ಅಧಿಸೂಚನೆಯನ್ನು ಸಲ್ಲಿಸಿತ್ತು. ಕರಡು ಅಧಿಸೂಚನೆಯ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸಲ್ಲಿಸಲಾಯಿತು.

ಶೇಕಡಾ 1 ರ ಪ್ರಮಾಣದಲ್ಲಿ ಸಾಕಷ್ಟು ಸಂಖ್ಯೆಯ ಅರ್ಹ ಲೈಂಗಿಕ ಅಲ್ಪಸಂಖ್ಯಾತ ಜನರು ಲಭ್ಯವಿಲ್ಲದಿದ್ದರೆ, ಖಾಲಿ ಹುದ್ದೆಗಳನ್ನು ಅದೇ ವರ್ಗದ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಭರ್ತಿ ಮಾಡಬೇಕು ಎಂದು ನಿಯಮಗಳು ಸೂಚಿಸುತ್ತವೆ.

ಇದನ್ನೂ ಓದಿ: ಅಂಜಲಿ ರಾಮಣ್ಣ ಬರಹ | ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಸಿಗುವಂತಾಗಲು ಪೊಲೀಸರು ಬದಲಾಗಬೇಕು